ಜಿಲ್ಲೆಯಾದ್ಯಂತ ಬೆಳಕಿನ ಹಬ್ಬಕ್ಕೆ ಸಿದ್ಧತೆ

19rajesh5
Published on

ಚಾಮರಾಜನಗರ: ಮನೆಗಳಲ್ಲಿ ಹಣತೆಗಳನ್ನು ಹಚ್ಚಿ, ಪಟಾಕಿ ಸಿಡಿಸುವ ಮೂಲಕ ಆಚರಿಸುವ ದೀಪಾವಳಿ ಹಬ್ಬಕ್ಕೆ ಜಿಲ್ಲೆಯಾದ್ಯಂತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ಹಾಗೂ ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ ದೀಪಾವಳಿ ಹಬ್ಬಕ್ಕೆ ಮಣ್ಣಿನ ಹಣತೆ, ಪಟಾಕಿ ಹಾಗೂ ವಿವಿಧ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ನಗರದ ಹೊಸ ಖಾಸಗಿ ಬಸ್ ನಿಲ್ದಾಣದ ಬಳಿ ಹಸಿರು ಪಟಾಕಿ ಮಾರಾಟಕ್ಕೆ ಮಳಿಗೆಗಳನ್ನು ತೆರೆದಿದ್ದು, ವಿವಿಧ ಪಟಾಕಿಗಳ ಮಾರಾಟ ಭಾನುವಾರದಿಂದಲೇ ಶುರುವಾಗಿದೆ. ಗ್ರಾಮೀಣ ಪ್ರದೇಶಗಳಿಂದ ಆಗಮಿಸುತ್ತಿದ್ದ ಜನರು ವಿವಿಧ ರೀತಿಯ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದರು. ಅದಲ್ಲದೇ ಮಾರುಕಟ್ಟೆಯಲ್ಲಿ ವಿಧವಿಧವಾದ ಹಣತೆಗಳು ಬಂದಿದ್ದು, ಹಣತೆಗಳ ಖರೀದಿ ಮಾಡಲು ಜನರು ಮುಂದಾಗಿದ್ದರು.

ಕೆಲವರು ಹೆಚ್ಚಾಗಿ ಹಣತೆಗಳನ್ನು ಬೆಳಗಿದರೇ, ಪಂಜು ಹಚ್ಚಿ ದೀಪಾವಳಿಯನ್ನು ಬರಮಾಡಿಕೊಳ್ಳುವ ವಾಡಿಕೆಯೂ ರೂಢಿಯಲ್ಲಿದ್ದು, ಸಾರ್ವಜನಿಕರು ಪಂಜುಗಳನ್ನು ಖರೀದಿ ಮಾಡುತ್ತಿದ್ದರು. ಆದರೇ ಬರಬರುತ್ತಾ ಪಂಜು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದ್ದು, ನಗರ ಪ್ರದೇಶದಲ್ಲಿ ಪಂಜುಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಬ್ಬದ ಅಂಗವಾಗಿ ವಿವಿಧ ವ್ಯಾಪಾರ ಕೇಂದ್ರಿತ ರಸ್ತೆಗಳು ಜನಸಂದಣಿ ಕಂಡುಬಂದಿತು. ಹೊಸಬಟ್ಟೆ, ವಿವಿಧ ತರಕಾರಿ, ಪೂಜಾ ಸಾಮಗ್ರಿ ಹಾಗೂ ಇನ್ನಿತರೆ ವಸ್ತುಗಳು ಖರೀದಿಗೆ ಜನರು ಮುಂದಾಗಿದ್ದರು.

ದೀಪಗಳಿಗೆ ಹೆಚ್ಚಿದ ಬೇಡಿಕೆ:

ನಗರದ ದೊಡ್ಡಂಗಡಿ, ಚಿಕ್ಕಂಗಡಿ ಬೀದಿ ಹಾಗೂ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ ಹಣತೆಗಳನ್ನು ತಳ್ಳುಗಾಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಮಣ್ಣಿನ ಹಣತೆಗಳಿಗೆ ಬೇಡಿಕೆ ಹೆಚ್ಚಾಗಿದೆ. ದೀಪಾವಳಿ ಹಾಗೂ ಕಾರ್ತಿಕ ಮಾಸದಲ್ಲಿ ಮನೆಗಳ ಮುಂಭಾಗ ಮಣ್ಣಿನ ಹಣತೆಗಳನ್ನು ಹಚ್ಚುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಿಂದೆ ಮಣ್ಣಿನ ಹಣತೆಗಳ ಜಾಗವನ್ನು ಪಿಂಗಾಣಿ ಹಣತೆಗಳು ಆಕ್ರಮಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಪಿಂಗಾಣಿ ಹಾಗೂ ಮಣ್ಣಿನ ಹಣತೆಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ. 2, 4 ಹಾಗೂ 6 ಜತೆ ಮಣ್ಣಿನ ಹಾಗೂ ಪಿಂಗಾಣಿ ಹಣತೆಗಳನ್ನು 10 ರೂ. ಗಳಿಗೆ ವ್ಯಾಪಾರಿಗಳು ಮಾರಾಟಮಾಡುತ್ತಿದ್ದರು.

ಪಟಾಕಿ ಖರೀದಿ ಜೋರು:

ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಖಾಲಿಜಾಗದಲ್ಲಿ 10 ಕ್ಕಿಂತಲೂ ಹೆಚ್ಚು ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮಾಡುವವರು ಹಾಗೂ ಸಾರ್ವಜನಿಕರು ಭಾನುವಾರ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ವಿವಿಧ ಬಗೆಯ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ, ಈ ವರ್ಷ ಪಟಾಕಿ ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈಗಾಗಲೇ ಸಾಕಷ್ಟು ಸಂಖ್ಯೆ ಬೇಡಿಕೆ ಬರಬೇಕಿತ್ತು. ಹಬ್ಬದ 2 ಮತ್ತು 3ನೇ ದಿನಗಳಲ್ಲಿ ವ್ಯಾಪಾರ ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ ಎಂದು ಪಟಾಕಿ ವ್ಯಾಪಾರಿಯೊಬ್ಬರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net