ಜಿಲ್ಲೆಯಾದ್ಯಂತ ಧಾರಾಕಾರ ಮಳೆ

h10-Rain 1
Published on

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.
ಮಧ್ಯಾಹ್ನದಿಂದಲೇ ಮೋಡ ಮುಸುಕಿದ ವಾತಾವರಣ ಕವಿದಿತ್ತು. ಕೆಲವೆಡೆ ಮಧ್ಯಾಹ್ನ ಜಿಟಿಜಿಟಿ ಮಳೆ ಸುರಿದಿದ್ದು, ರಾತ್ರಿಯಿಂದ ಧಾರಾಕಾರವಾಗಿ ಸುರಿದಿದೆ. ತಡರಾತ್ರಿಯವರೆಗೂ ಮಳೆ ಮುಂದುವರೆದಿದ್ದರಿಂದ ಹಳ್ಳಗಳ ಪಕ್ಕದ ಗ್ರಾಮಸ್ಥರು ಆತಂಕದಲ್ಲಿಯೇ ರಾತ್ರಿ ಕಳೆದಿದ್ದಾರೆ.
ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಕುಟುಂಬದವರು ಮನೆಗಳಿಂದ ಮಳೆ ನೀರು ಹೊರಹಾಕುವುದರಲ್ಲಿ ತೊಡಗಿದ್ದರು. ಕೆಲವೆಡೆ ಹೊಲಗಳ ಬದುವುಗಳು ಒಡೆದಿವೆ ಎಂದು ಹೇಳಲಾಗಿದೆ. ರಾತ್ರಿ 9 ಗಂಟೆ ನಂತರ ಧಾರಾಕಾರ ಮಳೆ ಜತೆಗೆ ಗುಡುಗು, ಸಿಡಿಲು ಸಹ ಕಾಣಿಸಿಕೊಂಡಿವೆ. ಹುಬ್ಬಳ್ಳಿಯ ದಾಜಿಬಾನಪೇಟೆ ಸೇರಿದಂತೆ ವಿವಿಧೆಡೆ ತಗ್ಗು ಪ್ರದೇಶದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್​ಗಳು ಮಳೆ ನೀರಿನಲ್ಲಿ ಕೆಲ ದೂರದವರೆಗೆ ತೇಲಿ ಹೋಗಿವೆ. ಹುಬ್ಬಳ್ಳಿ&ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯ ಗ್ರಾಮಗಳ ರಸ್ತೆಗಳೆಲ್ಲ ಜಲಾವೃತಗೊಂಡಿದ್ದು, ಮೊಣಕಾಲಿನವರೆಗೆ ನೀರು ಹರಿದ ಬಗ್ಗೆ ವರದಿಯಾಗಿದೆ. ಬಿಆರ್​ಟಿಎಸ್​ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ಹುಬ್ಬಳ್ಳಿಯ ಉಣಕಲ್ಲ ಹಾಗೂ ಧಾರವಾಡದ ಕೆಎಂಎ್​ ಬಳಿ ಮಳೆ ನೀರು ರಸ್ತೆಯಲ್ಲಿ ರಭಸದಿಂದ ಹರಿದಿದ್ದರಿಂದ ವಾಹನಗಳು ಮುಂದೆ ಹೋಗದೆ ಸಂಚಾರ ದಟ್ಟಣೆ ಉಂಟಾಗಿತ್ತು. ಸುಮಾರು ಒಂದು ಕಿಲೋ ಮೀಟರ್​ ದೂರದವರೆಗೆ ಅರ್ಧತಾಸಿಗೂ ಹೆಚ್ಚಿನ ಸಮಯ ವಾಹನಗಳು ನಿಂತಿದ್ದವು. ಬಹುತೇಕ ಅಪಾರ್ಟಮೆಂಟ್​ಗಳ ಪಾಕಿರ್ಂಗ್​ ಸ್ಥಳದಲ್ಲಿಯೂ ನೀರು ನಿಂತಿದ್ದು, ಕಾರುಗಳು ಅರ್ಧದವರೆಗೆ ಮುಳುಗಿದ್ದವು. ರಾತ್ರಿ ಸುಮಾರು 10.30ರ ನಂತರ ಮಳೆ ರಭಸ ಕಡಿಮೆ ಆಯಿತಾದರೂ, ರಸ್ತೆಗಳ ಮೇಲೆ ನೀರು ಹರಿಯುವುದು ಕಡಿಮೆಯಾಗಿರಲಿಲ್ಲ. ಹುಬ್ಬಳ್ಳಿಯ ದೇಶಪಾಂಡೆ ನಗರ, ದಾಜಿಬಾನಪೇಟ ರಸ್ತೆ, ಕೋಯಿನ್​ ರಸ್ತೆ, ವಿದ್ಯಾನಗರ, ಕೇಶ್ವಾಪುರ, ನೇಕಾರ ನಗರ, ಧಾರವಾಡದ ಸಪ್ತಾಪುರ, ಮದಿಹಾಳ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ನೀರು ಮಣಕಾಲಿನವರೆಗೆ ಹರಿಯುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net