

ಭಾಲ್ಕಿ: ತಾಲೂಕಿನಲ್ಲಿ ನಿರ್ಮಿಸುತ್ತಿರುವ ಹೊರಾಂಗಣ ಕ್ರೀಡಾಂಗಣ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾದರಿ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಅಂಬೆಸಾಂಗವಿ ಕ್ರಾಸ್ ರಸ್ತೆ ಬಳಿ ಶನಿವಾರ ಆಯೋಜಿಸಿದ್ದ ೧೪.೭೫ ಕೋಟಿ ಅನುದಾನದ ಹೊರಾಂಗಣ ಕ್ರೀಡಾಂಗಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆಗಬೇಕು ಎಂಬುದು ಬಹುದಿನ ಕನಸಾಗಿತ್ತು. ಆದರೆ ಸೂಕ್ತ ಜಮೀನು ಸಿಗದ್ದರಿಂದ ವಿಳಂಬವಗಿದೆ. ಇದೀಗ ಪಟ್ಟಣದ ಟೆಕಣಿ ಸಮೀಪದ ಅರಣ್ಯ ಭೂಮಿಯನ್ನು ನಿಯಮಾನುಸಾರ ಹಸ್ತಾಂತರಿಸಿ ಸುಮಾರು ೧೮ ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
೧೪.೭೫ ಕೋಟಿ ರೂ. ವೆಚ್ಚದ ಈ ಕ್ರೀಡಾಂಗಣವನ್ನು ರಾಷ್ಟçಮಟ್ಟದ ಕ್ರೀಡೆಗಳನ್ನು ನಡೆಸುವಂತೆ ಅಭಿವೃದ್ಧಿಪಡಿಸಲಾಗುವುದು. ಬ್ಯಾಡ್ಮಿಂಟನ್, ಕಬಡ್ಡಿ, ಬಾಸ್ಕೆಟ್‌ಬಾಲ್, ಕ್ರಿಕೆಟ್, ಈಜುಕೊಳ ಸೇರಿ ಏಕಕಾಲಕ್ಕೆ ಹತ್ತು ವಿವಿಧ ಆಟಗಳನ್ನು ಆಯೋಜಿಸಬಹುದಾಗಿದೆ. ಒಂದು ವರ್ಷದಲ್ಲಿ ಕಾಮಗಾರಿ ಪುರ್ಣಗೊಳಿಸಿ ಸಿಎಂ ಮತ್ತು ಡಿಸಿಎಂ ಅವರಿಂದ ಲೋಕಾರ್ಪಣೆ ಮಾಡುವುದಾಗಿ ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ್, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಡಿಎಚ್ಒ ಆಶೀಶ್‌ರಡ್ಡಿ, ಎಸ್‌ಪಿ ಪ್ರದೀಪ್ ಗುಂಟಿ, ಹಿರಿಯ ಉದ್ಯಮಿ ಗುರುನಾಥ ಕೊಳ್ಳುರ್, ಪ್ರಥಮ ದರ್ಜೆ ಗುತ್ತಿಗೆದಾರ ಸಚಿನ್ ಕೊಳ್ಳುರ್, ಡಿಡಿಪಿಯು ಚಂದ್ರಕಾಂತ ಶಾಹಬಾದಕರ್, ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರೆ ಇತರರಿದ್ದರು.
ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಸ್ವಾಗತಿಸಿದರು. ದೀಪಕ್ ಠಮಕೆ ನಿರೂಪಣೆ ಮಾಡಿ ವಂದಿಸಿದರು.
ಕೋಟಿ ಸಸಿ ನೆಡುವ ಗುರಿ: ಗಡಿ ಜಿಲ್ಲೆ ಬೀದರ್‌ನಲ್ಲಿ ಎರಡು ವರ್ಷದೊಳಗೆ ಒಂದು ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ಸಚಿವ ಖಂಡ್ರೆ ಹೇಳಿದರು. ಜಿಲ್ಲೆಯಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಆಶಯದೊಂದಿಗೆ ಈಗಾಗಲೇ ಕಳೆದ ಎರಡು ವರ್ಷ ೪೦ ಲಕ್ಷ ಸಸಿ ನೆಡಲಾಗಿದೆ. ನೆಟ್ಟಿರುವ ಸಸಿಗಳ ಪಾಲನೆ, ಪೋಷಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸಹ ಮನೆಗೊಂದು ಸಸಿ ನೆಟ್ಟು ಪರಿಸರ ಸಂರಕ್ಷಣೆ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯವಂತ ಸಮಾಜ ನಿರ್ಮಿಸಿ: ಯಾವುದೇ ವ್ಯಸನಕ್ಕೆ ಬಲಿಯಾಗದೆ ನಿಯಮಿತ ವ್ಯಾಯಾಮ, ಕ್ರೀಡಾ ಚಟವಟಿಕೆಯಲ್ಲಿ ಭಾಗಿಯಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು. ಕ್ರೀಡೆಗಳು ನೋಡುಗರಿಗೆ ಮನರಂಜನೆ ನೀಡಿದರೆ, ಆಡುವವರಿಗೆ ಆರೋಗ್ಯ ನೀಡುತ್ತದೆ. ದೇಹ ಸದೃಢವಾಗುತ್ತದೆ. ಬುದ್ಧಿ ಮತ್ತು ಮನಸ್ಸು ಎರಡನ್ನೂ ಸಮತೋಲನದಲ್ಲಿ ಇಡುತ್ತದೆ. ಏಕೆಂದರೆ ಕ್ರೀಡೆಯಲ್ಲಿ ಗೆಲ್ಲಲು ಯೋಜನೆ (ಗೇಮ್ ಪ್ಲ್ಯಾನ್) ಮಾಡುತ್ತಲೇ ಮಿದುಳು ಕೆಲಸ ಮಾಡುತ್ತದೆ. ಪಟುಗಳು ಗೆಲ್ಲುವ ಛಲದಿಂದಲೇ ಆಡುತ್ತಾರೆ. ಆಗ ದೇಹ ಕೆಲಸ ಮಾಡುತ್ತದೆ. ಹೀಗಾಗಿ ಬುದ್ಧಿ ಮತ್ತು ದೇಹ ಎರಡೂ ಬೆಳೆಯಲು ಕ್ರೀಡೆ ಸಹಕಾರಿಯಾಗಿದೆ ಎಂದರು.
ಗಡಿ ಜಿಲ್ಲೆ ಬೀದರ್‌ನಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಸುಮಾರು ೨೦೨೫ ಕೋಟಿ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ್ದಾರೆ. ಆದರೆ ಈ ಕ್ರೀಡಾಂಗಣ ಕಾಮಗಾರಿಗೆ ಭೂಮಿಪೂಜೆ ಆಗಿರಲಿಲ್ಲ. ಇದೀಗ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ