ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್‌ಗೆ ಕಡಿವಾಣ:  ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಎಚ್ಚರಿಕೆ

ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್‌ಗೆ ಕಡಿವಾಣ:  ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಎಚ್ಚರಿಕೆ
Published on

ಹಾಸನ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ 2025ನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಹಾಸನ ಜಿಲ್ಲೆಯಲ್ಲೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಆಧ್ಯಾದೇಶವು ಫೆ.12 ರಂದೇ ಜಾರಿಗೆ ಬಂದಿದೆ. ಆಧ್ಯಾದೇಶವು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತು ಇತರೆ ಸಾಲ ನೀಡುವ ಏಜೆನ್ಸಿಗಳು ಅಥವಾ ಲೇವಾದೇವಿದಾರರು ವಿಧಿಸುವ ಹೆಚ್ಚಿನ ಬಡ್ಡಿ ದರಗಳಿಂದ ಸಾಲಗಾರರಿಗೆ ಆಗುವ ಹೊರೆ ಮತ್ತು ಬಲವಂತದ ವಸೂಲಾತಿ ಕ್ರಮಗಳಿಂದ ಆಗುವ ಕಿರುಕುಳಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಿದೆ. ವಿಶೇಷವಾಗಿ ದುರ್ಬಲರು, ಮಹಿಳೆಯರು ಮತ್ತು ರೈತರು, ಮಹಿಳಾ ಸ್ವ ಸಹಾಯ ಸಂಘಗಳಿಗೆ ಸಾಲ ಮರುಪಾವತಿ ವಿಷಯದಲ್ಲಿ ಆಗುತ್ತಿರುವ ಹಲವು ರೀತಿಯ ಕಿರುಕುಳ ತಪ್ಪಿಸಲು ಸಹಾಯಕವಾಗಿದೆ ಎಂದು ಹೇಳಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಂದ ಯಾವುದೇ ಭದ್ರತೆ ಪಡೆಯುವಂತಿಲ್ಲ ಎಂದು ಆದೇಶಿಸಲಾಗಿದೆ. ಗ್ರಾಹಕರು/ಸಾಲ ಪಡೆಯುವವರಿಗೆ ವಿಧಿಸುವ ಬಡ್ಡಿ ದರದ ಬಗ್ಗೆ ಪಾರದರ್ಶಕವಾಗಿ ಲಿಖಿತ ರೂಪದಲ್ಲಿ ತಿಳಿಸುವಂತೆ ಆದೇಶದಲ್ಲಿ ವಿವರಿಸಲಾಗಿದೆ. ಡಿಜಿಟಲ್ ಸ್ವರೂಪದ ಸಾಲಗಳೂ ಸಹ ಈ ಕಾಯ್ದೆಯಡಿ ಬರುತ್ತವೆ. ಸಾಲಗಾರರಿಗೆ ಒತ್ತಡ ಹೇರುವುದು, ತಡೆ ಒಡ್ಡುವುದು, ಹಿಂಸೆ, ಅವಮಾನ, ಬೆದರಿಕೆ, ಹಿಂಬಾಲಿಸುವುದು, ಕೆಲಸದ ಸ್ಥಳಕ್ಕೆ ಭೇಟಿ ನೀಡುವುದು, ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳನ್ನು ಸಾಲ ವಸೂಲಿಗಾಗಿ ಬಳಸಿಕೊಳ್ಳುವುದು, ಈ ರೀತಿಯ ಕ್ರಮ ಅನುಸರಿಸಿ ಸಾಲ ವಸೂಲಾತಿಗೆ ಮುಂದಾದರೆ ಕಾಯ್ದೆ ಅನುಸಾರ ಕಠಿಣ ಶಿಕ್ಷೆ ಹಾಗೂ ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿವಾದ ಇತ್ಯರ್ಥ ಪಡಿಸುವುದಕ್ಕಾಗಿ ಒಂಬುಡ್ಸ್ ಪರ್ಸನ್‌ಗಳನ್ನು ಸರ್ಕಾರವು ಅಧಿಸೂಚನೆ ಮೂಲಕ ನೇಮಕ ಮಾಡಬಹುದಾಗಿದ್ದು, ಅಪರ ಜಿಲ್ಲಾಧಿಕಾರಿಗಳು ಸಂಧಾನಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರ ನಡುವೆಯೂ ಬೇರಾವುದೇ ದೂರುಗಳಿದ್ದರೆ ಜಿಲ್ಲಾಧಿಕಾರಿ ಅಥವಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಬಹುದೆಂದು ಹೇಳಿದರು.

ಜಿಲ್ಲೆಯಲ್ಲಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ತಾವು ವಿಧಿಸುವ ಬಡ್ಡಿ ದರ, ಸಾಲಗಾರರ ಮಾಹಿತಿ, ಸುಸ್ತಿ ಸಾಲಗಳ ವಿವರವನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು. ಈ ಸಂಬಂಧ ಈಗಾಗಲೇ ಲೇವಾದೇವಿ ವ್ಯವಹಾರಸ್ಥರ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಆದೇಶ ಉಲ್ಲಂಸಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಮಾತನಾಡಿ, ಬಲವಂತದ ಸಾಲ ವಸೂಲಿ ಕ್ರಮ ಕೈಗೊಂಡಲ್ಲಿ, ಅಂತಹ ವ್ಯಕ್ತಿ ವಿಚಾರಣೆಗೆ ಒಳಪಡುತ್ತಾನೆ. ಮತ್ತು 10 ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ.ಗಳವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಬಹುದು. ಈ ಅಪರಾಧಗಳು ಸಂಜ್ಞೆಯ ಅಪರಾಧ ಜಾಮೀನು ರಹಿತವಾಗಿರುತ್ತವೆ. ಯಾವುದೇ ಪೊಲೀಸ್ ಅಧಿಕಾರಿ ಇಂತಹ ಪ್ರಕರಣ ನೋಂದಣಿ ಮಾಡಿಕೊಳ್ಳಬೇಕು, ನಿರಾಕರಿಸುವಂತಿಲ್ಲ ಎಂದು ತಿಳಿಸಿದರು.

ಎಎಸ್ಪಿ ದರ್ಜೆಗೆ ಕಡಿಮೆಯಿಲ್ಲದ ಅಧಿಕಾರಿಯೂ ಸ್ವತ: ಪ್ರಕರಣ ದಾಖಲಿಸಬಹುದು. ಈ ಆಧ್ಯಾದೇಶದಿಂದ ಆರ್‌ಬಿಐ, ಕೇಂದ್ರ-ರಾಜ್ಯ ಸರ್ಕಾರಗಳಿಂದ ನೋಂದಾಯಿಸದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಹೆಚ್ಚುತ್ತದೆ. ಮತ್ತು ಸಾಲಗಾರರಿಗೆ ಕಿರುಕುಳ, ಬಲವಂತದ ವಸೂಲಿ ಕ್ರಮಗಳಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net