

ಬೆಂಗಳೂರು ಗ್ರಾಮಾಂತರ: ಕರೊನಾ ಮಹಾಮಾರಿ ಮೂರನೇ ಅಲೆ ರೂಪದಲ್ಲಿ ಜಿಲ್ಲೆಗೂ ದಾಂಗುಡಿ ಇಡುತ್ತಿದ್ದು, ಸೋಂಕು ತಡೆಗೆ ಜಿಲ್ಲೆಯ ಹಲವು ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯಗಳೆಂದು ಪರಿಗಣಿಸಿ ಜಿಲ್ಲಾಧಿಕಾರಿ ೋಷಿಸಿದ್ದಾರೆ.
ಪ್ರಸ್ತುತ 5 ವಲಯಗಳನ್ನು ಕಂಟೇನ್ಮೆಂಟ್ ಎಂದು ೋಷಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಲಯಗಳು ಕಂಟೇನ್ಮೆಂಟ್ ಆಗುವ ಪರಿಸ್ಥಿತಿ ಎದುರಾಗಿದೆ. ಪ್ರಸ್ತುತ ಕರೊನಾ ಪ್ರಕರಣ ಹೆಚ್ಚು ಪತ್ತೆಯಾಗಿರುವ ಪ್ರದೇಶಗಳಾದ ಹೊಸಕೋಟೆ ತಾಲೂಕಿನಲ್ಲಿ 2, ದೇವನಹಳ್ಳಿ ತಾಲೂಕಿನಲ್ಲಿ 1, ನೆಲಮಂಗಲದಲ್ಲಿ 1 ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1 ಪ್ರದೇಶವನ್ನು ಕಂಟೇನ್ಮೆಂಟ್ ವಲಯವೆಂದು ಗುರುತಿಸಲಾಗಿದೆ.
ಯಾವ ಪ್ರದೇಶ: ದೇವನಹಳ್ಳಿ ತಾಲೂಕು ಸೂಲಿಬೆಲೆ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ನೆಲಮಂಗಲ ತಾಲೂಕು ಕಸಬಾ ಹೋಬಳಿಯ ಗುಟ್ಟೆಪಾಳ್ಯ, ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ಕೋಲಾರ ರಸ್ತೆಯಲ್ಲಿರುವ ಎಂ.ವಿ.ಜೆ.ನರ್ಸಿಂಗ್ ಕಾಲೇಜು ಮತ್ತು ಜಡಿಗೇನಹಳ್ಳಿ ಹೋಬಳಿಯ ತಗಳ್ಳಿ ಹೊಸಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯ ಮಧುರನ ಹೊಸಹಳ್ಳಿ ಗೇಟ್ ಬಳಿ ಇರುವ ನರನಹಳ್ಳಿಯ ಎಸ್‌ಎನ್‌ಸಿ ಕನ್‌ಸ್ಟ್ರಕ್ಷನ್ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಪರಿಗಣಿಸಿ, ಪ್ರದೇಶದ ಸುತ್ತ 200 ಮೀಟರ್ ವ್ಯಾಪ್ತಿಯನ್ನು ಬರ್ ವಲಯ ಎಂದು ಘೋಷಿಸಲಾಗಿದೆ.
ತಹಸೀಲ್ದಾರ್‌ಗಳ ಉಸ್ತುವಾರಿ: ಕಂಟೇನ್ಮೆಂಟ್ ವಲಯಗಳ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲು ಸಂಬಂಧಿಸಿದ ತಹಸೀಲ್ದಾರ್‌ಗಳನ್ನು ಇನ್ಸಿಡೆಂಟ್ ಕಮಾಂಡರ್‌ಗಳನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
ಹೊಸಕೋಟೆಯಲ್ಲಿ ಹೆಚ್ಚು: ಹೊಸಕೋಟೆ ತಾಲೂಕಿನ ಎಂವಿಜೆ ನರ್ಸಿಂಗ್ ಕಾಲೇಜು, ಜಡಿಗೇನಹಳ್ಳಿ ಹೋಬಳಿ ತಗ್ಗಲಿಹೊಸಹಳ್ಳಿ, ಪಿಲ್ಲಗುಂಪೆ ಕೈಗಾರಿಕಾ ಪ್ರದೇಶ, ದುನ್ನಸಂದ್ರದಲ್ಲಿ ಹೆಚ್ಚಿನ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
63133 ಪ್ರಕರಣಗಳು: ಇದುವರೆಗೆ ಜಿಲ್ಲೆಯಲ್ಲಿ 63133 ಕರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ, ಇದರಲ್ಲಿ 2057 ಬೇರೆ ಜಿಲ್ಲೆ ಹಾಗೂ ಅನ್ಯರಾಜ್ಯದ ಪ್ರಕರಣಗಳಾಗಿದ್ದು, ಉಳಿದ 61076 ಪ್ರಕರಣ ಗ್ರಾಮಾಂತರ ಜಿಲ್ಲೆ ನಿವಾಸಿಗಳದ್ದಾಗಿದೆ, ಈ 63133 ಪ್ರಕರಣಗಳಲ್ಲಿ 61363 ಸೋಂಕಿತರು ಚಿಕಿತ್ಸೆ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಪ್ರಸ್ತುತ 878 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದುವರೆಗೆ 892 ಮಂದಿ ಕರೊನಾಗೆ ಬಲಿಯಾಗಿದ್ದಾರೆ.
ಕರೊನಾ ಮೊದಲ ಅಲೆಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 887231 ಮಂದಿಗೆ ಕರೊನಾ ತಪಾಸಣೆ ನಡೆಸಿದ್ದು, 819300 ಮಂದಿ ವರದಿ ನೆಗೆಟಿವ್ ಬಂದಿದೆ, 4798 ಮಂದಿಯ ತಪಾಸಣಾ ವರದಿ ಬರಬೇಕಿದೆ.
ಮಕ್ಕಳಿಗೆ ವಕ್ಕರಿಸುತ್ತಿರುವ ಮಾರಿ: ತಜ್ಞರ ಮುನ್ಸೂಚನೆಯಂತೆ ಮೂರನೇ ಅಲೆ ಮಕ್ಕಳನ್ನು ಬಾಧಿಸುತ್ತಿದ್ದು, ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ, ಸೋಂಕು ಕಾಣಿಸಿಕೊಂಡ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಶಾಲೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ. ಜತೆಗೆ 15 ವರ್ಷದಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಮೊದಲ ಕರೊನಾ ಡೋಸ್ ವಿತರಣೆ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ.
ಕರೊನಾ ಮೂರನೇ ಅಲೆ ರೂಪದಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿಯೂ ತೀವ್ರವಾಗಿ ಹರಡುತ್ತಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದ್ದು, ಅಂಥ ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯಗಳನ್ನಾಗಿ ಗುರುತಿಸಲಾಗಿದೆ. ವಲಯಗಳ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲು ಸಂಬಂಧಿಸಿದ ತಾಲೂಕು ತಹಸೀಲ್ದಾರ್ ನೇಮಿಸಲಾಗಿದೆ. ಜತೆಗೆ ಕೋವಿಡ್ ಲಸಿಕಾ ಅಭಿಯಾನ ಚುರುಕುಗೊಳಿಸಲಾಗಿದೆ. ಡಾ.ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಪ್ರಸ್ತುತ ಸೋಂಕು ಪತ್ತೆಯಾಗುತ್ತಿರುವ ವ್ಯಕ್ತಿಗಳಲ್ಲಿ ಸೌಮ್ಯರೂಪದ ರೋಗಲಕ್ಷಣ ಕಾಣಿಸಿಕೊಂಡಿವೆ. ಉಳಿದಂತೆ ಎಲ್ಲರ ಆರೋಗ್ಯ ಸ್ಥಿರವಾಗಿದೆ, ಹೋಂ ಕ್ವಾರಂಟೈನ್‌ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಉಳಿದಂತೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ಅನುಕೂಲ ಮಾಡಿಕೊಡಲಾಗಿದೆ. ಡಾ.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ