

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ನೂರಾರು ಕೈಗಾರಿಕೆಗಳಿವೆ. ಹತ್ತಾರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಅದರಲ್ಲೂ ಉತ್ತರ ಕರ್ನಾಟಕದ ಆರೋಗ್ಯ ದೇವತೆ ಎಂದೇ ಕರೆಯಲಾಗುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್್ಸ) ಇದೆ. ಸಾವಿರಾರು ಕರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಬೇಕಾದ ಆಕ್ಸಿಜನ್ (ಆಮ್ಲಜನಕ) ಪೂರೈಕೆಗೆ ಮಾತ್ರ ಮತ್ತೊಂದು ಜಿಲ್ಲೆಯನ್ನು ಅವಲಂಬಿಸುವ ಅನಿವಾರ್ಯತೆ ತಲೆದೋರಿದೆ.
ಅದರಲ್ಲೂ ಕರೊನಾ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುತ್ತ ಅನೇಕ ಜನರು ಉಸಿರಾಟದ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕುತ್ತಿರುವ ಸಂದರ್ಭದಲ್ಲಿ ಆಕ್ಸಿಜನ್ ಹೆಚ್ಚು ಅವಶ್ಯಕವಾಗಿದೆ. ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ- ಧಾರವಾಡಕ್ಕೆ ಪಕ್ಕದ ಜಿಲ್ಲೆಯಿಂದ ನಿತ್ಯ ಆಕ್ಸಿಜನ್ ಬರಬೇಕು.
ಯಾವುದೇ ಅರ್ಜಿಗಳಿಲ್ಲ: ಧಾರವಾಡ ಜಿಲ್ಲೆಯಲ್ಲಿ ಯಾವುದೇ ಆಕ್ಸಿಜನ್ ಉತ್ಪಾದನೆ ಘಟಕಗಳು ಇಲ್ಲ. ಅಲ್ಲದೆ, ಆಕ್ಸಿಜನ್ ಉತ್ಪಾದನೆ ಘಟಕ ಆರಂಭಕ್ಕೆ ಇದುವರೆಗೂ ಅರ್ಜಿಗಳೂ ಬಂದಿಲ್ಲ. ಇದೀಗ ಕರೊನಾ ಇರುವುದರಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಹಾಗಾಗಿ, ಕೈಗಾರಿಕೆ ಉದ್ದೇಶಕ್ಕೆ ಬಂದ್ ಮಾಡಿ ಕೇವಲ ಮೆಡಿಕಲ್ಗಾಗಿ ಪೂರೈಸಲಾಗುತ್ತಿದೆ ಎಂದು ಜಿಲ್ಲಾ ಕೈಗಾರಿಕೆ ಕೇಂದ್ರದ (ಡಿಐಸಿ) ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೂಡ ಆಕ್ಸಿಜನ್ ಉತ್ಪಾದನೆ ಕುರಿತು ಚರ್ಚೆ ನಡೆದಿತ್ತು. ಅಗತ್ಯಕ್ಕೆ ತಕ್ಕಷ್ಟು ಆಕ್ಸಿಜನ್ ಇಲ್ಲ ಎಂದು ಕೈಗಾರಿಕೆ ಬಳಕೆಗೆ ಆಕ್ಸಿಜನ್ ಕೊಡುವುದನ್ನು ನಿಲ್ಲಿಸಲಾಗಿದೆ. ಎಲ್ಲವನ್ನೂ ಮೆಡಿಕಲ್ ಉದ್ದೇಶದ ಬಳಕೆಗೆ ಮೀಸಲಿರಿಸಲಾಗಿದೆ. ಕಿಮ್್ಸ ಆಸ್ಪತ್ರೆಯಲ್ಲಿ 20 ಸಾವಿರ ಕಿಲೋ ಲೀಟರ್ ಸಾಮರ್ಥ್ಯ ಘಟಕಗಳಿದ್ದು, ಎರಡು ದಿನಕ್ಕೊಮ್ಮೆ ಭರ್ತಿ ಮಾಡಲಾಗುತ್ತಿದೆ.
ಆಸ್ಪತ್ರೆಗಳಲ್ಲಿ ಬೇಕು
ಆಸ್ಪತ್ರೆಗಳಂತಹ ಆರೋಗ್ಯ ಸಂಸ್ಥೆಗಳಲ್ಲಿ ಆಮ್ಲಜನಕ ಇಡಲಾಗುತ್ತದೆ. ಉಸಿರಾಡಲು ತೊಂದರೆ ಇರುವ ರೋಗಿಗಳಿಗೆ ಇದನ್ನು ಒದಗಿಸಲಾಗುತ್ತದೆ. ಬ್ಯಾಕ್ಟೀರಿಯಾವನ್ನು ನಾಶ ಮಾಡಲು ಆಮ್ಲಜನಕ ಬಳಸಲಾಗುತ್ತದೆ. ಸಾಮಾನ್ಯವಾಗಿ ಹಾನಿಕಾರಕ ಬ್ಯಾಕ್ಟೀರಿಯಾದಿಂದ ದೇಹವನ್ನು ಶುದ್ಧೀಕರಿಸಲು ಬಳಸುತ್ತಾರೆ. ಉಸಿರಾಟದ ಉಪಕರಣವನ್ನು ಬಾಹ್ಯಾಕಾಶದಲ್ಲಿ ನಡೆಯುವ ಗಗನಯಾತ್ರಿಗಳು, ಸ್ಕೂಬಾ ಡೈವರ್ಗಳು ಮತ್ತು ಪರ್ವತಾರೋಹಿಗಳು ಸಹ ಬಳಸುತ್ತಾರೆ. ಇದೀಗ ಕರೊನಾ ರೋಗಿಗಳಿಗೆ ಉಸಿರಾಟದ ಸಮಸ್ಯೆಯಾದರೆ ಆಕ್ಸಿಜನ್ ಅಗತ್ಯವಾಗಿ ಬೇಕು.
ಅಚ್ಚರಿಯಾದರೂ ಸತ್ಯ!
ಧಾರವಾಡ ಜಿಲ್ಲೆಯು ಎಲ್ಲ ವಲಯಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಇಲ್ಲೊಂದು ಆಕ್ಸಿಜನ್ ಉತ್ಪಾದನೆ ಘಟಕ ಇದುವರೆಗೂ ಆಗಲೇ ಇಲ್ಲ. ಕೈಗಾರಿಕೆ ಉದ್ದೇಶಕ್ಕೆ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಈ ಮೊದಲು ಬಳಸಲಾಗುತ್ತಿತ್ತು. ಆದರೆ, ಇದೀಗ ಕರೊನಾ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿರುವುದರಿಂದ ವೈದ್ಯಕೀಯ ಚಿಕಿತ್ಸೆ ಸಲುವಾಗಿ ಆಕ್ಸಿಜನ್ ಹೆಚ್ಚು ಬೇಕಾಗಿದೆ. ಸದ್ಯ ಜಿಲ್ಲೆಯಲ್ಲಿ ರೀ ಫಿಲ್ಲಿಂಗ್ ಘಟಕಗಳಿವೆ. ಸಿಲಿಂಡರ್ಗೆ ತುಂಬಿ ಮಾರಾಟ ಮಾಡುತ್ತವೆ. ಧಾರವಾಡ ಜಿಲ್ಲೆಯ ಬೇಲೂರಲ್ಲಿರುವ ಪ್ರಾಕ್ಸಿ ಕಂಪನಿ, ಸತ್ತೂರಲ್ಲಿನ ಕರ್ನಾಟಕ ಇಂಡಸ್ಟ್ರಿಯಲ್ ಗ್ಯಾಸ್ ಹಾಗೂ ತಾರಿಹಾಳದಲ್ಲಿರುವ ಸದರ್ನ್ ಗ್ಯಾಸ್ ಈ ಕಂಪನಿಗಳು ಪ್ರಸ್ತುತ ಧಾರವಾಡ ಜಿಲ್ಲೆಯ ಜತೆಗೆ ಅಕ್ಕಪಕ್ಕದ ಜಿಲ್ಲೆಗಳಿಗೂ ಆಕ್ಸಿಜನ್ ಸಿಲಿಂಡರ್ ರೀ ಫಿಲ್ ಮಾಡಿ ಪೂರೈಕೆ ಮಾಡುತ್ತಿವೆ. ಇದಕ್ಕಾಗಿ ತೋರಣಗಲ್ಲಿನಿಂದ ದ್ರವರೂಪದ ಆಕ್ಸಿಜನ್ ತರಲಾಗುತ್ತದೆ.
ಏನಿದು ಆಮ್ಲಜನಕ?
ಆಮ್ಲಜನಕ ಒಂದು ಅನಿಲ. ಇದು ಬಣ್ಣರಹಿತ, ರುಚಿಯಿಲ್ಲದ, ವಾಸನೆಯಿಲ್ಲದ ಅಂಶವಾಗಿದೆ. ನಮ್ಮ ವಾತಾವರಣದಲ್ಲಿ ಶೇ. 21ರಷ್ಟಿರುತ್ತದೆ. ಇದು ನೀರಿನಲ್ಲಿ, ಖನಿಜಗಳಲ್ಲಿ ಮತ್ತು ಹಲವಾರು ಸಾವಯವ ಸಂಯುಕ್ತಗಳಲ್ಲಿ ಕಂಡುಬರುತ್ತದೆ. ಆಮ್ಲಜನಕ ಪರಮಾಣುಗಳು ಮತ್ತು ಅನಿಲ ಇವು ಎರಡೂ ಭೂಮಿ ಮೇಲಿನ ಜೀವಗಳಿಗೆ ಅಗತ್ಯವಾದ ಪದಾರ್ಥಗಳಾಗಿವೆ.
ಎಲ್ಲೆಲ್ಲಿ ಬಳಕೆ?
ಆಮ್ಲಜನಕದ ಹೆಚ್ಚಿನ ಬಳಕೆ ಉಕ್ಕಿನ ಉದ್ಯಮದಲ್ಲಿದೆ. ನೈಟ್ರಿಕ್ ಆಮ್ಲ ಮತ್ತು ಹೈಡೊ್ರೕಜನ್ ಪೆರಾಕ್ಸೈಡ್ ಸೇರಿದಂತೆ ವ್ಯಾಪಕ ಶ್ರೇಣಿಯ ರಾಸಾಯನಿಕಗಳ ತಯಾರಿಕೆಯಲ್ಲಿ, ವೆಲ್ಡಿಂಗ್ ಮತ್ತು ಲೋಹಗಳನ್ನು ಕತ್ತರಿಸಲು ಬಳಸಲಾಗುತ್ತದೆ. ಕುಲುಮೆಗಳಲ್ಲಿ ಉಕ್ಕು ಮತ್ತು ಕಬ್ಬಿಣ ತಯಾರಿಸಲು ಬಿಸಿ ಆಮ್ಲಜನಕದ ಗಾಳಿಯ ಅಗತ್ಯವಿದೆ. ಹೀಗೆ ಹತ್ತಾರು ಕಡೆ ಬಳಕೆಯಾಗುತ್ತದೆ.
ಆಕ್ಸಿಜನ್ ಉತ್ಪಾದನೆಯ ತಾಂತ್ರಿಕತೆ ಗೊತ್ತಿರುವವರು ಯಾರಾದರೂ ಘಟಕ ಸ್ಥಾಪನೆಗೆ ಮುಂದೆ ಬಂದರೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಕಲ್ಪಿಸಿಕೊಡಲು ಸಿದ್ಧರಿದ್ದೇವೆ. ಜಿಲ್ಲೆಯಲ್ಲಿ ಉತ್ಪಾದನೆ ಘಟಕ ಮಾಡಲು ಸಮಸ್ಯೆಗಳು ಇಲ್ಲ. ಸರಿಯಾದ ರೀತಿಯಲ್ಲಿ ಘಟಕ ಆರಂಭಿಸುವವರು ಸಾಧಕ- ಬಾಧಕ ನೋಡಿಕೊಂಡು ಪ್ರಯತ್ನ ಮಾಡಬಹುದು.| ಶಿವಪುತ್ರಪ್ಪ ಹೊಸಮನಿಉಪನಿರ್ದೇಶಕರು, ಡಿಐಸಿ, ಧಾರವಾಡ