

ತುಮಕೂರು : ಜಿಲ್ಲೆಯಲ್ಲಿ ಕಾಣೆಯಾಗುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಮಹಿಳೆಯರು, ಬಾಲಕಿಯರು, ಮಕ್ಕಳು ನಾಪತ್ತೆಯಾಗುತ್ತಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 3065 ಕಾಣೆಯಾದ ಪ್ರಕರಣ ದಾಖಲಾಗಿದ್ದು ಈ ಪೈಕಿ 1966 ಮಹಿಳೆಯರು ಮತ್ತು 312 ಬಾಲಕಿಯರಿದ್ದಾರೆ. ನಾಪತ್ತೆ ಪ್ರಕರಣದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಅನುಮಾನ ಮೂಡಿಸಿದೆ. ಕಳೆದ 2021ರಲ್ಲಿ 541 ಮಹಿಳೆಯರು, 72 ಬಾಲಕಿಯರು ಕಾಣೆಯಾಗಿದ್ದಾರೆ.
2020ರಲ್ಲಿ 420 ಮಹಿಳೆಯರು, 2019ರಲ್ಲಿ 379, 2018ರಲ್ಲಿ 307, 2017ರಲ್ಲಿ 282 ನಾಪತ್ತೆ ಪ್ರಕರಣ ದಾಖಲಾಗಿದ್ದು, 2022ರ ಎರಡು ತಿಂಗಳ ಅವಧಿಯಲ್ಲಿ 37 ಮಹಿಳೆಯರು, 5 ಬಾಲಕಿಯರು ನಾಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ 703 ಪುರುಷರು, 84 ಬಾಲಕರು ಸೇರಿ ಒಟ್ಟು 787 ಮಂದಿ ಕಾಣೆಯಾಗಿದ್ದಾರೆ. 2020ರಲ್ಲಿ ಹಾಗೂ 2021ರಲ್ಲಿ 170 ಮತ್ತು 2022ರಲ್ಲಿ 15 ಮಂದಿ ಕಣ್ಮರೆಯಾದ ಪ್ರಕರಣ ದಾಖಲಾಗಿದೆ.
ಪ್ರೇಮ ಪ್ರಕರಣಗಳೇ ಜಾಸ್ತಿ : ನಾಪತ್ತೆ ಪ್ರಕರಣದಲ್ಲಿ ಪ್ರೇಮ ಪ್ರಕರಣಗಳೇ ಜಾಸ್ತಿಯಾಗಿವೆ. ಪೊಲೀಸರು ಪತ್ತೆ ಮಾಡಿದ ನಂತರ ಒಪ್ಪಿ ಬಂದಿರುವುದಾಗಿ ಹೇಳಿಕೆ ನೀಡುತ್ತಿರುವುದೂ ಇದೆ. ಯುವತಿಯರು, ಮಕ್ಕಳು ಮನೆಬಿಟ್ಟು ಪರಾರಿಯಾಗುವಲ್ಲಿ ಮೊಬೈಲ್ ಕೂಡ ನೆರವಾಗಿರುವುದು ಬಹುತೇಕ ಪ್ರಕರಣದಲ್ಲಿ ದೃಢವಾಗಿದೆ. ಪ್ರೀತಿಗಾಗಿ ಮನೆ ಬಿಟ್ಟವರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿದೆ. ಕೆಲವು ತಿಂಗಳು ಕಳೆದರೆ ಮದುವೆಯಾಗಿ ಮನೆಗೆ ಬರುವ ಜೋಡಿಗಳೂ ಇವೆ. ಜೀವನದಲ್ಲಿ ಜಿಗುಪ್ಸೆಗೊಂಡವರು, ಮಾನಸಿಕ ಅಸ್ವಸ್ಥರು ಹಾಗೂ ಕುಟುಂಬ ನಿರ್ವಹಣೆ ಮಾಡಲಾಗದವರೂ ಮನೆ ಬಿಟ್ಟು ಹೋಗಿದ್ದಾರೆ. ಈ ಪೈಕಿ ಸಾಕಷ್ಟು ಜನ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ.
ಪತ್ತೆಯಾಗಿದ್ದು 2748 ಜನ ! : ಕಳೆದ ಐದು ವರ್ಷಗಳಲ್ಲಿ ಕಾಣೆಯಾದ 3065 ಮಂದಿಯಲ್ಲಿ 2748 ಜನರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. 317 ಜನರ ಸುಳಿವೇ ಸಿಕ್ಕಿಲ್ಲದಿರುವುದು ಮಾನವ ಕಳ್ಳಸಾಗಣೆ ಬಗ್ಗೆಯೂ ಅನುಮಾನ ಮೂಡಿಸಿದೆ. ಕಾಣೆಯಾದ ಮಕ್ಕಳ ಪೈಕಿ ಕೆಲವರು ಒಂದೆರಡು ತಿಂಗಳ ಬಳಿಕ ಪತ್ತೆಯಾಗುತ್ತಿದ್ದಾರೆ, ಮನೆಯಿಂದ ತೆಗೆದುಕೊಂಡ ಹೋದ ಹಣ ಖಾಲಿಯಾದ ನಂತರ ಪಾಲಕರ ನೆನಪು ಮಾಡಿಕೊಂಡು ವಾಪಸಾಗುತ್ತಿದ್ದಾರೆ. ಇನ್ನೂ ಕೆಲವರು ನಿರ್ಜನ ಪ್ರದೇಶಗಳಲ್ಲಿ ಶವವಾಗಿ ಪತ್ತೆಯಾಗಿದ್ದುಂಟು.
ನಾಪತ್ತೆ ಪ್ರಕರಣಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪತ್ತೆ ಕಾರ್ಯ ನಡೆಯುತ್ತಿದೆ. ಕೆಲವು ಪ್ರಕರಣದಲ್ಲಿ ದೂರು ನೀಡುವುದು ತಡವಾದಾಗ ಪತ್ತೆ ತಡವಾಗಬಹುದು, ನಾಪತ್ತೆಯಾದ ಕೂಡಲೇ ದೂರು ನೀಡಿದರೆ ಭವಿಷ್ಯದ ಅಪಾಯ ತಪ್ಪಿಸಬಹುದು. ರಾಹುಲ್‌ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ