ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಬಾಲ್ಯವಿವಾಹ

22rajesh8
Published on

ಚಾಮರಾಜನಗರ: ಸಮಾಜದ ಬಹುದೊಡ್ಡ ಪಿಡುಗಾಗಿರುವ ಬಾಲ್ಯವಿವಾಹ ಗಡಿಜಿಲ್ಲೆ ಚಾಮರಾಜನಗರದಲ್ಲಿ ಹೆಚ್ಚಾಗುತ್ತಲೇ ಇದ್ದು, ಹೆಚ್ಚಿನ ಜಾಗೃತಿ ಮೂಡಿಸುವುದೇ ಇದಕ್ಕೆ ಮದ್ದಾಗಿದೆ.

ಜಿಲ್ಲೆಯ ಮಕ್ಕಳ ರಕ್ಷಣಾ ಘಟಕ ನೀಡಿರುವ ಮಾಹಿತಿಯ ಪ್ರಕಾರ 2022-23 ನೇ ಸಾಲಿನಲ್ಲಿ ಚಾಮರಾಜನಗರ 17, ಗುಂಡ್ಲುಪೇಟೆ 8, ಯಳಂದೂರು 1 ಹಾಗೂ ಹನೂರು-ಕೊಳ್ಳೇಗಾಲ ವ್ಯಾಪ್ತಿಯಲ್ಲಿ 22 ದೂರುಗಳನ್ನು ಒಳಗೊಂಡಂತೆ ಒಟ್ಟು 48 ಬಾಲ್ಯವಿವಾಹ ದೂರುಗಳು ದಾಖಲಾಗಿದೆ. ಅದರಲ್ಲಿ 45 ಬಾಲ್ಯವಿವಾಹಗಳನ್ನು ತಡೆಯಲಾಗಿದ್ದು, 3 ರಲ್ಲಿ ೆಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 2023-24 ನೇ ಸಾಲಿನಲ್ಲಿ ಚಾಮರಾಜನಗರ 21, ಗುಂಡ್ಲುಪೇಟೆ 71, ಯಳಂದೂರು 6 ಹಾಗೂ ಹನೂರು-ಕೊಳ್ಳೇಗಾಲ ವ್ಯಾಪ್ತಿಯಲ್ಲಿ 48 ದೂರುಗಳನ್ನು ಒಳಗೊಂಡಂತೆ ಒಟ್ಟು 146 ದೂರುಗಳು ದಾಖಲಾಗಿದೆ. ಅದರಲ್ಲಿ 142 ಪ್ರಕರಣಗಳಲ್ಲಿ ಬಾಲ್ಯವಿವಾಹ ತಡೆಯಲಾಗಿದ್ದು, 4 ರಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 2024-25 ನೇ ಸಾಲಿನಲ್ಲಿ ಈ ವರಗೆ ಚಾಮರಾಜನಗರ ತಾಲೂಕಿನಲ್ಲಿ 36, ಗುಂಡ್ಲುಪೇಟೆ 22, ಯಳಂದೂರು 11, ಕೊಳ್ಳೇಗಾಲ 20 ಹಾಗೂ ಹನೂರು 9 ಪ್ರಕರಣಗಳು ಕಂಡುಬಂದಿದೆ. ಒಟ್ಟಾರೆ 98 ಪ್ರಕರಣಗಳಲ್ಲಿ 97 ಬಾಲ್ಯವಿವಾಹಗಳನ್ನು ತಡೆದಿದ್ದು, 1 ಪ್ರಕರಣದಲ್ಲಿ ಪ್ರಕರಣ ದಾಖಲಾಗಿದೆ. ಅದಾಗ್ಯೂ ಗ್ರಾಮೀಣ ಪ್ರದೇಶದಲ್ಲಿ ಬೆಳಕಿಗೆ ಬರದೇ ಎಷ್ಟೋ ಬಾಲ್ಯವಿವಾಹಗಳು ನಡೆದುಹೋಗುತ್ತದೆ. ಈ ಸಂಬಂಧ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಳಹಂತದಲ್ಲಿ ಜಾಗೃತಿ ಮೂಡಿಸುತ್ತಿದ್ದರೂ, ಬಾಲ್ಯವಿವಾಹಗಳು ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಆಸಕ್ತಿಯನ್ನು ವಹಿಸಿ ಇನ್ನೂ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೇ ಇದಕ್ಕೆ ಮದ್ದಾಗಿದೆ.

ಶೇ.50 ರಷ್ಟು ೆಕ್ಸೋ ಪ್ರಕರಣ:

ಜಿಲ್ಲೆಯಲ್ಲಿ ಶೇ.50 ರಷ್ಟು ಯುವಕರು ೆಕ್ಸೋ ಪ್ರಕರಣಗಳಲ್ಲಿ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಒಂದು ಕಡೆಯಾದರೇ, ಬಾಲ್ಯವಿವಾಹದಡಿ ಸಿಲುಕಿಕೊಂಡವರು ಕೂಡ ಇದರಲ್ಲಿ ಹೆಚ್ಚಾಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾದಾಗ ಆಸ್ಪತ್ರೆಗಳಲ್ಲಿ ಬಾಲ್ಯವಿವಾಹಕ್ಕೆ ಸಿಲುಕಿರುವುದು ಬೆಳಕಿಗೆ ಬರುತ್ತಿದೆ. ಇವೆಲ್ಲವೂ ಇಂದಿಗೂ ಬಾಲ್ಯವಿವಾಹಗಳು ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತಿದೆ ಎಂಬುದರ ಉದಾಹರಣೆಯಾಗಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದ್ದು, ಬಾಲ್ಯವಿವಾಹ ನಡೆಯುವ ಮೊದಲೇ ಸೂಕ್ಷ್ಮ ನಿಗಾವಹಿಸಿ ಪ್ರಕರಣಗಳು ಜರುಗದಂತೆ ನೋಡಿಕೊಳ್ಳಬೇಕಿದೆ. ಈ ಮೂಲಕ ಬಾಲ್ಯವಿವಾಹಗಳನ್ನು ತಡೆಯಲು ಜಿಲ್ಲಾಡಳಿತ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ.

ರಾಜ್ಯದಲ್ಲೇ ವಿಶೇಷ ಪ್ರಯತ್ನ:

ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಜಿಲ್ಲಾಡಳಿತ ಬಾಲ್ಯವಿವಾಹ ಮುಕ್ತ ೋಷಣೆಗೆ ರಾಜ್ಯದಲ್ಲಿಯೇ ಮಾದರಿಯಾಗುವಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿಶೇಷವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಸಹಯೋಗದೊಂದಿಗೆ ನಡೆಸಿದೆ. ಮಾ.1 ರಿಂದ ನ.17 ರವರೆಗೆ ಜಿಲ್ಲೆಯ 130 ಗ್ರಾಮ ಪಂಚಾಯಿತಿ ಹಾಗೂ ತಾಲೂಕುಗಳನ್ನು ಬಾಲ್ಯವಿವಾಹ ಮುಕ್ತಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಂಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ, ಬೀದಿ ನಾಟಕ ಹಾಗೂ ವಿಶೇಷ ಸಂಗೀತದ ಮೂಲಕ ಜನಸಂದಣಿ ಪ್ರದೇಶಗಳಲ್ಲಿ ಜಾಗೃತಿ, ಮೊಬೈಲ್ ಕಾಲರ್ ಟೋನ್ ಅಳವಡಿಸುವುದು, ಸಾರ್ವಜನಿಕ ಸ್ಥಳ, ಕಟ್ಟಡ ಹಾಗೂ ಇನ್ನಿತರೆ ಕಡೆಗಳಲ್ಲಿ ಬಾಲ್ಯವಿವಾಹ ನಿಷೇಧದ ಬೋರ್ಡ್ ಮತ್ತು ಸ್ಟಿಕ್ಕರ್‌ಗಳನ್ನು ಅಳವಡಿಸುವುದು ಹಾಗೂ ಇನ್ನಿತರೆ ವಿಭಿನ್ನವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಬೃಹತ್ ವಾಕಥಾನ್ ಇಂದು:

ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಮಾಡುವ ಸಂಬಂಧ ಮೇ 23 ರಂದು ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಬೆಳಗ್ಗೆ ಬೃಹತ್ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಮತ್ತು ರಂಗಭೂಮಿ ಕಲಾವಿದ ಗಣೇಶ್ ರಾವ್ ಅವರು ಭಾಗವಹಿಸಲಿದ್ದಾರೆ. ಅವರೊಂದಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಜಿಲ್ಲಾ ಪಂಚಾಯಿತಿ ಸಿಇಓ ಮೋನಾರೋತ್ ಹಾಗೂ ಇತರೆ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಸಂಬಂಧ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೂ ಸಹ ಬಾಲ್ಯವಿವಾಹಗಳು ಹೆಚ್ಚಾಗುತ್ತೇಲೆ ಇದೆ. ಈ ನಿಟ್ಟಿನಲ್ಲಿ ಆಯೋಗದ ವತಿಯಿಂದ ಚಾಮರಾಜನಗರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ವಿಶೇಷ ಗಮನಹರಿಸಲಾಗಿದೆ. ವರ್ಷವಿಡೀ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ವರ್ಷದ ಅಂತ್ಯದವರೆಗೆ ಜಿಲ್ಲೆಯ 100 ಪಂಚಾಯಿತಿಗಳನ್ನಾದರೂ ಬಾಲ್ಯವಿವಾಹಮುಕ್ತಗೊಳಿಸಲು ಕೆಲಸಮಾಡುತ್ತಿದ್ದೇವೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ವಿಶೇಷ ಆಸಕ್ತಿಯಿಂದ ಇದು ನಡೆಯುತ್ತಿದೆ.

-ವೆಂಕಟೇಶ್, ಸದಸ್ಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net