

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಕಳೆದ ನಾಲ್ಕು ವರ್ಷದಿಂದ ಜಿಲ್ಲೆಯಲ್ಲಿ ತಣ್ಣಗೆ ಸಾಗಿದ್ದ ರಾಜಕೀಯ ಚಟುವಟಿಕೆಗಳು ತಿಂಗಳಿಂದ ಬಿರುಸು ಪಡೆದುಕೊಂಡಿವೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳು ತಾಲೀಮು ಚುರುಕುಗೊಳಿಸಿವೆ. ಈಗಾಗಲೇ ಜಿಲ್ಲೆಯಲ್ಲಿ ಚುನಾವಣೆ ಕಾವು ಕಾಣಿಸಿಕೊಂಡಿದೆ.
ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಮತಕೋಟೆ ಎನಿಸಿರುವ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಈ ಬಾರಿ ಬಿಜೆಪಿ ಸಂಘಟನೆ ಜೋರಾಗಿಯೇ ಆರಂಭವಾಗಿದೆ. ಇದರೊಂದಿಗೆ ಆಮ್ ಆದ್ಮಿ ಪಕ್ಷವೂ ಖಾತೆ ತೆರೆಯಲು ಉತ್ಸುಕತೆ ತೋರುತ್ತಿದೆ. ಈ ಬಾರಿ ಪಕ್ಷೇತರ ಅಭ್ಯರ್ಥಿಗಳ ಪಟ್ಟಿಯೂ ದೊಡ್ಡದಾಗಲಿದೆ ಎಂಬ ಮಾತು ಹರಿದಾಡುತ್ತಿದೆ.
ಟೆಂಪಲ್ ರನ್: ನಾಲ್ಕು ವರ್ಷದಲ್ಲಿ ಎರಡು ವರ್ಷ ಕರೊನಾ ಸಂಕಷ್ಟದ ನಡುವೆಯೇ ಎಲ್ಲ ರಾಜಕೀಯ ಚಟುವಟಿಕೆಗಳು ಬಂದ್ ಆಗಿದ್ದವು. ಇದರ ನಡುವೆಯೂ ವಿವಿಧ ರಾಜಕೀಯ ಪಕ್ಷಗಳು ದಿನಸಿ ಕಿಟ್ ವಿತರಣೆ, ಆಹಾರ ಪೂರೈಕೆ ಮತ್ತಿತರ ಚಟುವಟಿಕೆಗಳ ಮೂಲಕ ತಮ್ಮ ಇರುವಿಕೆ ಪ್ರದರ್ಶಿಸಿದ್ದವು. ಯಾವುದೇ ಹಬ್ಬ ಹರಿದಿನ, ಉತ್ಸವಗಳಿಲ್ಲದೆ ರಾಜಕೀಯ ಚಟುವಟಿಕೆಗಳು ಸಪ್ಪಗಾಗಿದ್ದವು. ಪ್ರಸ್ತುತ ವರ್ಷ ಕಳೆದ ಚುನಾವಣೆಯ ಕೊನೇ ವರ್ಷವಾಗಿದ್ದು, ಸಾಲು ಸಾಲು ಹಬ್ಬ, ಜಾತ್ರೆ, ಮಹೋತ್ಸವಗಳು ರಾಜಕೀಯ ನಾಯಕರಲ್ಲಿ ಸಂಚಲನ ಮೂಡಿಸಿದ್ದು, ತಾ ಮುಂದು ನಾ ಮುಂದು ಎಂಬಂತೆ ರಥೋತ್ಸವಗಳಲ್ಲಿ, ಜಾತ್ರೆ ಹಬ್ಬಗಳಲ್ಲಿ ಪಾಲ್ಗೊಂಡು ಜನರನ್ನು ಸೆಳೆಯುವ ತಾಲೀಮು ಆರಂಭವಾಗಿದೆ.
ಜಲಧಾರೆ, ಮೇಕೆದಾಟು, ಕಾರ್ಯಕಾರಿಣಿ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ನೆಲಮಂಗಲ ಹಾಗೂ ದೇವನಹಳ್ಳಿಯಲ್ಲಿ ಜೆಡಿಎಸ್ ಶಾಸಕರಿದ್ದು, ಮುಂದಿನ ಚುನಾವಣೆಯಲ್ಲೂ ಜೆಡಿಎಸ್ ಭದ್ರಪಡಿಸಿಕೊಳ್ಳುವ ತಾಲೀಮು ಆರಂಭವಾಗಿದೆ, ಜೆಡಿಎಸ್‌ನ ಜನತಾ ಜಲಧಾರೆ ಕಾರ್ಯಕ್ರಮ ಮುಂದಿನ ಚುನಾವಣೆಗೆ ಪಕ್ಷದ ಪ್ರಾಬಲ್ಯ ಪ್ರದರ್ಶನಕ್ಕೆ ವೇದಿಕೆಯಾಗಲಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಇದರ ಮಧ್ಯೆ ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಹೊಸಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ಶಾಸಕರಿದ್ದು, ಪಕ್ಷ ಸಂಘಟನೆ ಚುರುಕುಗೊಂಡಿದೆ, ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ಜಿಲ್ಲೆಯಲ್ಲಿ ದೊಡ್ಡಸಂಚಲವನ್ನೇ ಹುಟ್ಟುಹಾಕಿತ್ತು, ಜಿಲ್ಲೆಯ ಮೂಲೆ ಮೂಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯಕ್ಕೆ ಇದು ಪ್ರಮುಖ ವೇದಿಕೆಯಾಗಿ ಗುರುತಿಸಿಕೊಂಡಿತ್ತು. ಏತನ್ಮಧ್ಯೆ ರಾಜ್ಯಾದ್ಯಂತ ಬಿಜೆಪಿ ಕರೆಕೊಟ್ಟಿರುವ ಕಾರ್ಯಕಾರಿಣಿ ಸಭೆ ಜಿಲ್ಲೆಯಲ್ಲಿಯೂ ದೊಡ್ಡ ಸದ್ದು ಮಾಡುತ್ತಿದೆ, ಇತ್ತೀಚೆಗೆ ರಾಷ್ಟ್ರ ಹಾಗೂ ರಾಜ್ಯದ ಪ್ರಮುಖ ನಾಯಕರ ನೇತೃತೃದಲ್ಲಿ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಕಾರ್ಯಕಾರಿಣಿ ಸಭೆಗೆ ಭಾರೀ ಸ್ಪಂದನೆ ವ್ಯಕ್ತವಾಗಿತ್ತು, ಅದೇ ರೀತಿ ಹೊಸಕೋಟೆಯಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕಾರಣಿ ಸಭೆ ಮಂದಿನ ಚುನಾವಣೆಗೆ ಪಕ್ಷದ ಬಲ ಪ್ರದರ್ಶನವಾಗಿ ಕಂಡುಬಂದಿದೆ. ಹೀಗೆ ಎರಡೂ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷದ ಬಲಾಬಲದ ನಡುವೆ ಆಮ್ ಆದ್ಮಿ ಪಕ್ಷವೂ ಜಿಲ್ಲೆಯಲ್ಲಿ ಬೇರೂರುವ ಕಸರತ್ತು ಆರಂಭಿಸಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ದೆಹಲಿ ಸಿಎಂ ಕ್ರೇಜಿವಾಲ್ ಸಮ್ಮುಖದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಜಿಲ್ಲೆಯಿಂದಲೂ ಸಾಕಷ್ಟು ಕಾರ್ಯಕರ್ತರು ಭಾಗಿಯಾಗಿದ್ದು ಸಣ್ಣಮಟ್ಟದಲ್ಲಿ ಪಕ್ಷದ ಬಲವರ್ಧನೆ ಪ್ರದರ್ಶನವಾಗಿ ಕಂಡುಬಂದಿದೆ.
ಬಿಜೆಪಿ ವರಿಷ್ಠರ 150 ಸ್ಥಾನ ಗೆಲ್ಲುವ ಗುರಿ ಸಾಕಾರಗೊಳಿಸಲು ಪ್ರತಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸುವ ಕೆಲಸ ಆರಂಭಿಸಿದ್ದಾರೆ. ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬೊಮ್ಮಾಯಿ ನೀಡಿರುವ ಅಸಂಖ್ಯಾತ ಜನಪರ ಯೋಜನೆಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಇವುಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಪಕ್ಷ ಗೆಲುವಿಗೆ ಪ್ರಯತ್ನ ನಡೆಯುತ್ತಿದೆ. ಎಂಟಿಬಿ ನಾಗರಾಜ್ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಈ ಹಿಂದಿನ ಎರಡು ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಜನಪರ ಆಡಳಿತ, ಅವರು ಜಾರಿಗೊಳಿಸಿದ ಅತ್ಯುತ್ತಮ ಯೋಜನೆಗಳು ಹಾಗೂ ಮುಂದಿನ ಬಾರಿ ಜಾರಿಗೊಳಿಸಲು ರೂಪುರೇಷೆ ಸಿದ್ಧ ಪಡಿಸಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿಗೆ ಹೋಗಲು ಜೆಡಿಎಸ್ ಸಜ್ಜಾಗಿದೆ. ಪ್ರಮುಖವಾಗಿ ಜನತಾ ಜಲಧಾರೆ ಪರಿಕಲ್ಪನೆಯನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್ ಶಾಸಕ ಹಿಂದಿನ ಕಾಂಗ್ರೆಸ್ ಸರ್ಕಾರದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ತಡೆಹಿಡಿದಿದೆ, ಅವುಗಳು ಸಾಕಾರಗೊಳ್ಳಲು ವತ್ತೆ ಪಕ್ಷ ಅಧಿಕಾರಕ್ಕೆ ಬರಬೇಕು, ಈ ನಿಟ್ಟಿನಲ್ಲಿ ಹಿಂದಿನ ಸರ್ಕಾರಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರ ಮುಂದಿಡುವ ಪ್ರಯತ್ನ ನಡೆಯುತ್ತಿದೆ, ಶಾಶ್ವತ ನೀರಾವರಿ ಯೋಜನೆ ಪ್ರಮುಖ ಅಜೆಂಡಾವಾಗಿದೆ, ತಳಮಟ್ಟದಿಂದಲೂ ಪಕ್ಷ ಸಂಘಟನೆ ನಡೆಯುತ್ತಿದೆ. ವೆಂಕಟರಮಣಯ್ಯ, ಕಾಂಗ್ರೆಸ್ ಶಾಸಕ