

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಚಿಕೂನ್ ಗುನ್ಯಾ ಮತ್ತು ಮಲೇರಿಯಾಮುಕ್ತವಾಗಿ ಸಾಂಕ್ರಾಮಿಕ ರೋಗಗಳು ನಿಯಂತ್ರಣದಲ್ಲಿದೆಯಾದರೂ ಮಳೆಗಾಲ ಆರಂಭಕ್ಕೂ ಮುನ್ನವೇ ಸುರಿಯುತ್ತಿರುವ ಮಳೆಗೆ ಕೊಳಚೆ ಪ್ರದೇಶಗಳಲ್ಲಿ ಸ್ವಚ್ಛತೆ ಇಲ್ಲದೆ ಪರಿಣಾಮ ರೋಗ ಹರಡುವ ಭೀತಿ ಎದುರಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಚಾಮರಾಜನಗರ ಜಿಲ್ಲೆ ಮಲೇರಿಯಾಮುಕ್ತವಾಗಿದೆ. ಇನ್ನುಳಿದಂತೆ 2025ರ ಜನವರಿಯಿಂದ ಮೇ 12ವರೆಗೆ ಚಿಕೂನ್‌ಗುನ್ಯಾ ಪತ್ತೆ ಹಚ್ಚಲು ಚಾಮರಾಜನಗರ ತಾಲೂಕಿನಲ್ಲಿ 324, ಕೊಳ್ಳೇಗಾಲದಲ್ಲಿ 14, ಹನೂರಿನಲ್ಲಿ 17, ಗುಂಡ್ಲುಪೇಟೆಯಲ್ಲಿ 49, ಯಳಂದೂರಿನಲ್ಲಿ 12 ಸೇರಿ ಒಟ್ಟು 416 ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಒಂದು ಪ್ರಕರಣವೂ ಪಾಸಿಟಿವ್ ಬಂದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಮಲೇರಿಯಾದೊಂದಿಗೆ ಚಿಕೂನ್‌ಗುನ್ಯಾ ಕೂಡ ಇಲ್ಲ. ಆದರೆ ಡೆಂಘೆ ಪ್ರಕರಣಗಳು 4 ಇವೆ. ರಕ್ತ ಪರೀಕ್ಷೆ ಮಾಡಿರುವ 461ರಲ್ಲಿ ನಾಲ್ವರಿಗೆ ಮಾತ್ರ ಪಾಸಿಟಿವ್ ಬಂದಿದೆ. ಚಾಮರಾಜನಗರ ತಾಲೂಕಿನಲ್ಲಿ 2 ಮತ್ತು ಗುಂಡ್ಲುಪೇಟೆ ತಾಲೂಕಿನಲ್ಲಿ 2 ಸೇರಿ ಒಟ್ಟು 4 ಪ್ರಕರಣ ವರದಿಯಾಗಿವೆ.
ಆರೋಗ್ಯ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ಮಲೇರಿಯಾ, ಚಿಕೂನ್‌ಗುನ್ಯಾ, ಡೆಂಘೆ ನಿಯಂತ್ರಣದಲ್ಲಿದೆ. ಮಳೆಗಾಲ ಶುರುವಾದರೆ ಈ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಸ್ವಚ್ಛತೆ ಇಲ್ಲದಿದ್ದರೆ ಮಲೇರಿಯಾ, ಚಿಕೂನ್‌ಗುನ್ಯಾ, ಡೆಂಘೆ ಬಾಧಿಸುತ್ತದೆ. ಅಲ್ಲದೆ ಜಿಲ್ಲೆಯ ಜನವಸತಿ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲದೆ ಇರುವುದರಿಂದ ರೋಗ ಹರಡುವಿಕೆ ಹೆಚ್ಚಾಗುವ ಭೀತಿ ಹೆಚ್ಚಾಗಿದೆ.
ರೋಗಗಳ ಲಕ್ಷಣಗಳೇನು?: ಚಿಕೂನ್‌ಗುನ್ಯಾ ಮತ್ತು ಡೆಂಘೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಗಳಿಲ್ಲ. ಚಿಕೂನ್‌ಗುನ್ಯಾ ಜ್ವರ, ಕೀಲುಗಳಲ್ಲಿ ನೋವು ಮತ್ತು ಊತದ ಲಕ್ಷಣಗಳನ್ನು ಹೊಂದಿವೆ. ಡೆಂಘೆಯಿಂದ ಜ್ವರ ಕಾಣಿಸಿಕೊಂಡು, ಕಣ್ಣಿನ ಹಿಂಭಾಗದಲ್ಲಿ ಸ್ನಾಯು ಮತ್ತು ಕೀಲುಗಳಲ್ಲಿ ನೋವಿನ ಲಕ್ಷಣಗಳು, ಕೆಲವರಿಗೆ ಬಾಯಿ, ಮೂಗು, ಒಸಡುಗಳಿಂದ ರಕ್ತಸ್ರಾವದ ಗುರುತುಗಳು, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ.
ಕೊಳಕು ಪ್ರದೇಶ, ಮಳೆಯಿಂದ ರಾಡಿ:
ಜಿಲ್ಲೆ ಮತ್ತು ತಾಲೂಕು ಕೇಂದ್ರಗಳ ಬಡಾವಣೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಮಳೆಯ ದರ್ಶನವಾಗುತ್ತಿದೆ. ನೈಋತ್ಯ ಮಾನ್ಸೂನ್ ಸಾಮಾನ್ಯಕ್ಕಿಂತಲೂ ಶೇ.5ರಷ್ಟು ಹೆಚ್ಚಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂದು ವಾರ ಮಳೆಯಾಗುವ ಸಾಧ್ಯತೆಗಳಿವೆ. ಅಂತೆಯೇ ಚಾಮರಾಜನಗರ ಜಿಲ್ಲೆಯಲ್ಲೂ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದೆ. ಒಂದೆ ತಾಸು ಸುರಿದರೂ ಮಳೆಯ ಆರ್ಭಟ ಜೋರಾಗಿಯೇ ಇದೆ. ಇದರಿಂದಾಗಿ ನಗರ ಮತ್ತು ಪಟ್ಟಣ ಪ್ರದೇಶಗಳ ಚರಂಡಿಗಳು ಉಕ್ಕಿ ಹರಿದು ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಹೂಳು ತುಂಬಿರುವ ಚರಂಡಿಗಳು ಗಬ್ಬು ನಾರುತ್ತಿವೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿರುವ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಕೊಳಚೆ ನೀರು ಹಾದಿಬೀದಿಯಲ್ಲಿ ಹರಿದು ಮನೆಗಳ ಮುಂದೆ ನಿಲ್ಲುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ.
ನಿಯಂತ್ರಣ ಮತ್ತು ಮುನ್ನೆಚ್ಚರಿಕೆ
ಸ್ಥಳೀಯ ಸಂಸ್ಥೆಗಳು ನಗರ ಮತ್ತು ಪಟ್ಟಣಗಳ ಸ್ವಚ್ಛತೆಯನ್ನು ಕಾಪಾಡುವಲ್ಲಿ ವಿಲವಾಗಿವೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿವೆ. ಮಳೆ ಬಂದರೆ ತ್ಯಾಜ್ಯ ಒದ್ದೆಯಾಗಿ ಗಬ್ಬು ನಾರುತ್ತಿದೆ. ರಸ್ತೆ ಬದಿಗಳಲ್ಲಿ ಕಸದ ಗುಡ್ಡೆಗಳು ಹರಡಿಕೊಂಡಿವೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕೆಗಾಗಿ ಅಧಿಕಾರಿಗಳನ್ನು ಕಾಯದೆ ಸಾರ್ವಜನಿಕರೇ ಎಚ್ಚರ ವಹಿಸಬೇಕಾಗಿದೆ.
ಮನೆಗಳ ಬಳಿ ನೀರು ನಿಲ್ಲುವ ಪ್ರದೇಶವನ್ನು ಸ್ವಚ್ಛಗೊಳಿಸಬೇಕು. ಸರ್ಕಾರದ ಜಾಗಗಳಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದರೆ ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ತಿಳಿಸಿ ಅಗತ್ಯವಾಗಿ ಸ್ವಚ್ಛ ಮಾಡಿಸಬೇಕು. ಮನೆ ಬಳಿ ಒಣಗಿದ ಟೈರ್, ತೆಂಗಿನ ಚಿಪ್ಪುಗಳಲ್ಲಿ ನೀರು ಶೇಖರಣೆಯಾದರೆ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕಿದೆ. ಗ್ರಾಮಗಳಲ್ಲಿ ಹಬ್ಬಗಳು ನಡೆಯುತ್ತಿದ್ದು, ತ್ಯಾಜ್ಯವನ್ನು ಒಂದೆಡೆ ಶೇಖರಣೆ ಮಾಡಬೇಕಿದೆ. ಸಕಾಲಕ್ಕೆ ಕಸ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಮನೆಯ ಕಸ ಮನೆಯವರ ಆರೋಗ್ಯವನ್ನೇ ಹಾಳು ಮಾಡುತ್ತದೆ. ನಗರ ಪ್ರದೇಶಗಳ ಮನೆಯವರು ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ಪೌರಕಾರ್ಮಿಕರಿಗೆ ನೀಡಬೇಕು. ರಸ್ತೆ ಬದಿಗಳಲ್ಲಿ ಕಸ ಎಸೆಯುವುದರಿಂದ ಪರಿಸರ ಮಾಲಿನ್ಯವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ವಾಯು ವಿಹಾರಿಗಳಿಗೆ ಕಿರಿಕಿರಿ ಉತ್ತಮ ಆರೋಗ್ಯಕ್ಕಾಗಿ ನಿತ್ಯವೂ ಮುಂಜಾನೆ ವಾಯು ವಿವಾಹಕ್ಕೆ ತೆರಳುವವರಿಗೆ ನಗರದ ಹೊರವಲಯಗಳು ಕಿರಿಕಿರಿ ಉಂಟು ಮಾಡುತ್ತಿವೆ. ಈ ಪ್ರದೇಶಗಳಲ್ಲಿ ಕಸ ತಂದು ಸುರಿಯುತ್ತಿರುವುದರಿಂದ ವಾಯುವಿಹಾರಕ್ಕೆ ತೆರಳುವವರು ಕಲುಷಿತ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಪ್ರಕರಣ ಪತ್ತೆಯಾದರೆ ರೋಗಿಯ ವಿವರ ಕಲೆ ಹಾಕಲಾಗುತ್ತಿದೆ. ರೋಗಿಯ ಮನೆಯವರು ಮತ್ತು ಸುತ್ತಮುತ್ತಲಿನ ಮನೆಯವರನ್ನು ಪರೀಕ್ಷೆ ಮಾಡಲಾಗುತ್ತಿದೆ. ಮನೆಯ ಬಳಿ ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳಿದ್ದರೆ ನಾಶ ಪಡಿಸಲಾಗುತ್ತಿದೆ. ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ. ಡಾ.ಎಂ.ಎಸ್.ರಾಜೇಶ್‌ಕುಮಾರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಚಾಮರಾಜನಗರ