ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ಶಿವರಾತ್ರಿ

Published on

ಚಾಮರಾಜನಗರ: ಜಿಲ್ಲೆಯಲ್ಲಿರುವ ಶಿವನ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಬುಧವಾರ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಕೈಂಕರ್ಯಗಳು ನೆರವೇರಿತು.

ಮಹಾಶಿವರಾತ್ರಿಯ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವ ಸ್ವಾಮಿ ದೇವಾಲಯ, ನಗರದ ಐತಿಹಾಸಿಕ ಶ್ರೀ ಚಾಮರಾಜೇಶ್ವರ ದೇವಸ್ಥಾನ, ಶ್ರೀಕಂಠೇಶ್ವರದೇವಸ್ಥಾನ, ಶ್ರೀವೀರಭದ್ರೇಶ್ವರ ದೇವಸ್ಥಾನ, ಯಡಬೆಟ್ಟದ ಶ್ರೀಮಹದೇಶ್ವರಸ್ವಾಮಿ ದೇವಾಲಯ, ಹರದನಹಳ್ಳಿಯ ಶ್ರೀದಿವ್ಯಲಿಂಗೇಶ್ವರ ದೇವಸ್ಥಾನ, ಕೂಡ್ಲೂರಿನ ಶ್ರೀಮಂಟೇಸ್ವಾಮಿ ದೇವಸ್ಥಾನ, ಶ್ರೀಮಹದೇಶ್ವರ ದೇವಸ್ಥಾನ, ಗಡಿಭಾಗದ ಕೊಂಗಳ್ಳಿ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಾಲಯ ಸೇರಿದಂತೆ ಇನ್ನೂ ಹಲವಾರು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.

ಮಹಾಶಿವರಾತ್ರಿ ಪ್ರಯುಕ್ತ ಶಿವನ ದೇವಸ್ಥಾನಗಳನ್ನು ವಿಶೇಷವಾಗಿ ಸಿಂಗಾರಗೊಳಿಸಲಾಗಿತ್ತು.

ಮುಂಜಾನೆಯಿಂದಲೇ ಶಿವನಿಗೆ ವಿಶೇಷ ಅಭಿಷೇಕ ನೆರವೇರಿತು, ಬಳಿಕ ರುದ್ರಾಭಿಷೇಕ, ಹೋಮ ಹವನ ನಡೆದವು. ಶಿವಲಿಂಗಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಭಕ್ತರು ಶಿವನಿಗೆ ನಾಮಮಂತ್ರ ಸಹಿತ ಬಿಲ್ವಪತ್ರೆಗಳನ್ನು ಅರ್ಪಿಸಿದರು. ಮೂಲಮಂತ್ರ ಜಪಿಸಿ ದೇವರನ್ನು ಸಂಕಷ್ಟ ಪರಿಹರಿಸುವಂತೆ ಪ್ರಾರ್ಥಿಸಿದರು. ಎಲ್ಲಾ ದೇವಾಲಯಗಳಲ್ಲೂ ಹೆಚ್ಚಿನ ಜನಸಂದಣಿ ಕಂಡುಬಂದಿತು. ಹಲವು ದೇವಸ್ಥಾನಗಳಲಿ ್ಲಶಿವಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಜಾಗರಣೆ ಮಾಡಿದರು.

ಶ್ರೀಚಾಮರಾಜೇಶ್ವರನಿಗೆ ವಿಶೇಷ ಪೂಜೆ:

ನಗರದ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಕೈಂಕರ್ಯಗಳನ್ನು ನಡೆಸಲಾಯಿತು. ಶ್ರೀಚಾಮರಾಜೇಶ್ವರಸ್ವಾಮಿಯನ್ನು ವಿವಿಧ ಹೂವುಗಳಿಂದ ಅಲಂಕಾರಮಾಡಲಾಗಿತ್ತು. ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಸರತಿಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಶಿವರಾತ್ರಿಯ ಅಂಗವಾಗಿ ಅನೇಕ ಭಕ್ತರು ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಮಾಡಿದರು.

ಸಹೋದರಿಯರಿಗೆ ವಸಬೆಲ್ಲ ಹಂಚಿಕೆ:

ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಹಲವರು ತಮ್ಮ ಸಹೋದರಿಯರಿಗೆ ವಸಬೆಲ್ಲ ಹಂಚುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಈ ಪದ್ಧತಿ ಲಿಂಗಾಯತ ಸಮುದಾಯದಲ್ಲಿ ಹೆಚ್ಚಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಇದು ಅಣ್ಣ-ತಂಗಿಯ ಬಾಂಧವ್ಯದ ಸಂಕೇತವೂ ಆಗಿದೆ. ತವರು ಮನೆಯಿಂದ ಜನರು ಬೆಲ್ಲ, ವಸ, ಪೂಜಾ ಸಾಮಗ್ರಿ, ಅರಿಶಿನ-ಕುಂಕುಮ, ಧನ, ಧಾನ್ಯ, ಒಡವೆಗಳನ್ನು ನೀಡಿ ಶುಭಕೋರಿದರು. ಸುಮಂಗಲಿಯರು ಶಿವನನ್ನು ವಿಶೇಷವಾಗಿ ಪೂಜಿಸುವ ಮೂಲಕ ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಸಂಭ್ರಮದ ಕೊಂಡೋತ್ಸವ:

ತಾಲೂಕಿನ ಚಂದಕವಾಡಿಯ ಶ್ರೀಲಕ್ಷ್ಮೀದೇವಿ ಅಮ್ಮನವರ ಕೊಂಡೋತ್ಸವ ಬುಧವಾರ ಬೆಳಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ರೀಲಕ್ಷ್ಮೀದೇವಿ ಅಮ್ಮನವರ ಕೊಂಡೋತ್ಸವದ ಅಂಗವಾಗಿ ಮಂಗಳವಾರ ರಾತ್ರಿಯಲ್ಲೇ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಕೊಂಡಕ್ಕೆ ಬೆಂಕಿಯನ್ನು ಹಾಕಲಾಯಿತು. ಬುಧವಾರ ಮುಂಜಾನೆ ಶ್ರೀಲಕ್ಷ್ಮೀದೇವಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿದ ಬಳಿಕ ದೇವಾಲಯದ ಅರ್ಚಕರು ಮತ್ತು ದೇವರ ಸತ್ತಿಗೆ ಸೂರಪಾನಿ ಒತ್ತುಕೊಂಡವರು ಹಾಗೂ ಇತರರು ಕೊಂಡವನ್ನು ಹಾಯ್ದರು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತಾದಿಗಳ ಜೈಕಾರ ಮುಗಿಲು ಮುಟ್ಟಿತ್ತು. ಈ ಮೂಲಕ ಜಾತ್ರಾಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಮೂರು ದಿನಗಳ ಕಾಳ ಅದ್ಧೂರಿಯಾಗಿ ಜಾತ್ರೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net