ಜಿಲ್ಲೆಯಲ್ಲಿ ಶೇ.82.99 ಮತದಾನ

22 vikram 9
Published on

ಧಾರವಾಡ: ಜಿಲ್ಲೆಯ 65 ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತವಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ಕೆಲ ಕಡೆಗಳಲ್ಲಿ ವಾಗ್ವಾದ, ಅಭ್ಯರ್ಥಿಯೊಬ್ಬರ ಆತ್ಮಹತ್ಯೆ ಹೊರತುಪಡಿಸಿ ಉಳಿದಂತೆ ಶಾಂತಿಯುತವಾಗಿ ಮತದಾನ ನಡೆದಿದೆ. ಶೇ. 82.99 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಧಾರವಾಡ, ಕಲಘಟಗಿ ಹಾಗೂ ಅಳ್ನಾವರ ಸೇರಿ ಒಟ್ಟು 412 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಚಳಿ ಹೆಚ್ಚಿದ್ದ ಕಾರಣಕ್ಕೆ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಮಂದಗತಿಯಲ್ಲಿ ಸಾಗಿತ್ತು. ನಂತರ ಚುರುಕಾಯಿತು. ಯುವಜನರಿಗಿಂತ ಹಿರಿಯರೇ ಮತದಾನದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದರು. 90 ವರ್ಷ ದಾಟಿದ್ದರೂ ಮತ್ತೊಬ್ಬರ ಆಸರೆಯಿಂದ ಮತದಾನಕ್ಕೆ ಆಗಮಿಸುತ್ತಿದ್ದ ದೃಶ್ಯ ಎಲ್ಲ ಮತಗಟ್ಟೆಗಳಲ್ಲಿ ಸಾಮಾನ್ಯವಾಗಿತ್ತು.

ಮತದಾನಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ನಿಯಮ ಮಾಡಲಾಗಿತ್ತು. ಆದರೆ ಅನೇಕರು ಮಾಸ್ಕ್ ಇಲ್ಲದೆ ಆಗಮಿಸಿದ್ದರು. ಮತಗಟ್ಟೆಯಲ್ಲಿದ್ದ ಅಧಿಕಾರಿಗಳು, ಪೊಲೀಸರು ಕೇಳಿದ ತಕ್ಷಣ ಕರವಸ್ತ್ರ, ಟವೆಲ್ ಅನ್ನು ಮುಖಕ್ಕೆ ಸುತ್ತಿಕೊಂಡು ಮತ ಚಲಾಯಿಸಿದರು. ಅಧಿಕಾರಿಗಳು ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಸಿಂಪಡಣೆ ಮಾಡುತ್ತಿದ್ದರು. ಆದರೆ ಪರಸ್ಪರ ಅಂತರ ಮಾತ್ರ ಬಹುತೇಕ ಕಡೆ ಮಾಯವಾಗಿತ್ತು.

ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಧಾರವಾಡ ತಾಲೂಕಿನ ಮತಪೆಟ್ಟಿಗೆಗಳನ್ನು ಧಾರವಾಡದ ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಶಾಲೆ, ಕಲಘಟಗಿ ತಾಲೂಕಿನ ಮತಪೆಟ್ಟಿಗೆಗಳನ್ನು ಸರ್ಕಾರಿ ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಅಳ್ನಾವರದ ಮತ ಪೆಟ್ಟಿಗೆಗಳನ್ನು ಪಟ್ಟಣದ ಸೇಂಟ್ ಥೆರೆಸಾ ಪ್ರೌಢಶಾಲೆಗಳಲ್ಲಿ ಇರಿಸುವ ಕಾರ್ಯ ತಡರಾತ್ರಿವರೆಗೂ ನಡೆಯಿತು.

ವಾಗ್ವಾದ: ಅಮ್ಮಿನಬಾವಿ ಗ್ರಾಮದ ಮತಗಟ್ಟೆ ಬಳಿಯೇ ಅಭ್ಯರ್ಥಿಗಳು ಮತದಾರರ ಮನವೊಲಿಕೆಗೆ ಪ್ರಯತ್ನ ನಡೆಸಿದ್ದರಿಂದ ಕೆಲ ಹೊತ್ತು ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಪೊಲೀಸರು ಎಷ್ಟೇ ಹೇಳಿದರೂ ಅಭ್ಯರ್ಥಿಗಳು ದೂರ ಹೋಗದಿದ್ದಾಗ ಜೋರು ಮಾಡಿದರು. ಆಗ ಅಭ್ಯರ್ಥಿಗಳ ಬೆಂಬಲಿಗರು ಸೇರಿ ಕೆಲ ಜನರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

1,724 ಸಿಬ್ಬಂದಿ: ಮೂರು ತಾಲೂಕುಗಳಲ್ಲಿ 1724 ಚುನಾವಣಾ ಸಿಬ್ಬಂದಿ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸಿದರು. ಧಾರವಾಡ ತಾಲೂಕಿನಲ್ಲಿ 952, ಕಲಘಟಗಿಯಲ್ಲಿ 688 ಮತ್ತು ಅಳ್ನಾವರದಲ್ಲಿ 84 ಮತಗಟ್ಟೆ ಅಧಿಕಾರಿಗಳು ಸೇರಿ ಒಟ್ಟು 1,724 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ತುರ್ತು ಸಂದರ್ಭಕ್ಕಾಗಿ 158 ಹೆಚ್ಚುವರಿ ಸಿಬ್ಬಂದಿಯನ್ನು ನಿಗದಿಪಡಿಸಲಾಗಿತ್ತು. ಡಿ. 30ರಂದು ಮತ ಎಣಿಕೆ ನಡೆಯಲಿದೆ.

ಕೋವಿಡ್ ಸೋಂಕಿತನಿಂದ ಮತದಾನ

ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಪಂನ ನೆಲ್ಲಿಹರವಿ ಮತಗಟ್ಟೆಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ಕೊನೇ ಅವಧಿಯಲ್ಲಿ ಮತದಾನ ಮಾಡಿದರು. ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಪಿಪಿಇ ಕಿಟ್ ಧರಿಸಿ, ಸ್ವಯಂ ಸುರಕ್ಷತಾ ಕ್ರಮಗಳೊಂದಿಗೆ ಮತ ಚಲಾಯಿಸಲು ಅವಕಾಶ ಮಾಡಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿ ಉಪಸ್ಥಿತರಿದ್ದರು.

ಅಧಿಕಾರಿಗಳ ಭೇಟಿ

ಜಿಲ್ಲೆಯ ವಿವಿಧ ತಾಲೂಕಗಳಲ್ಲಿನ ಮತಗಟ್ಟೆಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮತದಾನ ಪ್ರಕ್ರಿಯೆ, ವ್ಯವಸ್ಥೆಯನ್ನು ವೀಕ್ಷಿಸಿದರು. ಜಿಲ್ಲಾ ಚುನಾವಣಾ ವೀಕ್ಷಕ ಚಂದ್ರಶೇಖರ ಎನ್. ಅವರು ಧಾರವಾಡದ ಅಮ್ಮಿನಭಾವಿ, ಅಳ್ನಾವರದ ಹೊನ್ನಾಪುರ, ಕಲಘಟಗಿ ತಾಲೂಕಿನ ಮತಗಟ್ಟೆಗಳಿಗೆ ಭೇಟಿ ನೀಡಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಶಿವಳ್ಳಿಯ ವಿವಿಧ ಮತಗಟ್ಟೆಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಅಭ್ಯರ್ಥಿ ನೇಣಿಗೆ ಶರಣು

ಮತದಾನದ ದಿನವೇ ಗರಗ ಗ್ರಾಮದ 2ನೇ ವಾರ್ಡಿನ ಅಭ್ಯರ್ಥಿ ದಾಮೋದರ ಯಲಿಗಾರ (32)ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭ್ಯರ್ಥಿಯ ಸಾವು ಸಂಭವಿಸಿದರೂ ಮತದಾನ ಸೇರಿ ಎಲ್ಲ ಚುನಾವಣೆ ಕಾರ್ಯಗಳು ನಿಗದಿತವಾಗಿ ನಡೆಯುತ್ತವೆ. ಅಲ್ಲಿನ ಚುನಾವಣಾ ಕಾರ್ಯ ಅಬಾಧಿತ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ಡಿಸಿ ಜೊತೆ ಸೆಲ್ಪಿ

ಶಿವಳ್ಳಿ ಗ್ರಾಮದಲ್ಲಿ ಮತದಾನ ಪ್ರಕ್ರಿಯೆ ವೀಕ್ಷಣೆಗೆ ಆಗಮಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಸೆಲ್ಪಿ ತೆಗೆದುಕೊಳ್ಳಲು ಮುಂದಾದ ಯುವಕನೊಬ್ಬ ಮಾಸ್ಕ್ ಧರಿಸದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ಮೊದಲು 250 ರೂ. ದಂಡ ಕಟ್ಟು ಅಥವಾ ಮಾಸ್ಕ್ ಧರಿಸು ಎಂದರು. ಮಾಸ್ಕ್ ಹಾಕಿಕೊಂಡಿದ್ದವರು ತಮ್ಮ ಪಕ್ಕ ನಿಂತು ಸೆಲ್ಪಿ ತೆಗೆದುಕೊಳ್ಳಲು ಡಿ.ಸಿ.ಯವರು ಮುಕ್ತವಾಗಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net