ಜಿಲ್ಲೆಯಲ್ಲಿ ಶೇ.81 ಲಸಿಕೆ ವಿತರಣೆ ಸಾಧನೆ, ಶೂನ್ಯದತ್ತ ಕರೊನಾ ಪ್ರಕರಣ 70 ಪಿಎಚ್‌ಸಿಗಳಲ್ಲಿ ವ್ಯಾಕ್ಸಿನ್ ಪೂರೈಕೆ

IMG20210301120321
Published on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಕರೊನಾ ಸೋಂಕಿತ ಪ್ರಕರಣ ಶೂನ್ಯದತ್ತ ದಾಖಲಾಗುತ್ತಿರುವ ನಡುವೆಯೇ ಕರೊನಾ ವ್ಯಾಕ್ಸಿನ್ ವಿತರಣೆಯಲ್ಲಿ ಜಿಲ್ಲಾಡಳಿತ ಉತ್ತಮ ಸಾಧನೆ ಮಾಡುವ ಮೂಲಕ ಕರೊನಾತಂಕ ದೂರ ಮಾಡಿದೆ.

ಇದುವರೆಗೆ 18 ವರ್ಷ ಮೇಲ್ಪಟ್ಟ 6.67 ಲಕ್ಷ ಜನರಿಗೆ ಮೊದಲ ಡೋಸ್ ನೀಡಿದ್ದರೆ 3.45 ಲಕ್ಷ ಮಂದಿಗೆ ಎರಡನೇ ಡೋಸ್ ನೀಡಿದೆ. ಜಿಲ್ಲೆಯ 70 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿನಿತ್ಯ ಲಸಿಕೆ ವಿತರಿಸಲಾಗುತ್ತಿದ್ದು, ಪ್ರತಿ ಬುಧವಾರ ಲಸಿಕಾ ಮೇಳವಾಗಿ ಸಾವಿರಾರು ಜನಕ್ಕೆ ಏಕಕಾಲದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಮುಂದುವರಿಸಿದೆ.

ಪ್ರತಿನಿತ್ಯ ಸಾವಿರಾರು ಲಸಿಕೆ: ಜಿಲ್ಲೆಯ ನಾಲ್ಕೂ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರೊನಾ ಲಸಿಕೆಗಾಗಿಯೇ ಪ್ರತ್ಯೇಕ ಸಿಬ್ಬಂದಿ ನೇಮಿಸಿದ್ದು, ಪ್ರತಿ ಗ್ರಾಮಗಳಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಮುಂದುವರಿಸಿದೆ, ಆರೋಗ್ಯ ಸಿಬ್ಬಂದಿ ಮೂಲಕ ಗ್ರಾಮಗಳಿಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮವೂ ಯಶ ಕಂಡಿದ್ದು, ಇದುವರೆಗೆ ಜಿಲ್ಲೆಯಲ್ಲಿ ಶೇ.81 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಂಕಿ-ಅಂಶದಲ್ಲಿ ದಾಖಲಾಗಿದೆ.

ಅಕ್ಟೋಬರ್ ಅಂತ್ಯದೊಳಗೆ 100ರ ಗುರಿ: ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 10,54,764 ಮಂದಿ ಲಸಿಕೆ ನೀಡುವ ಗುರಿ ಹೊಂದಲಾಗಿದೆ, ಈಗಾಗಲೇ 8,19,000 ಮಂದಿಗೆ ಮೊದಲ ಡೋಸ್ ನೀಡಿದ್ದು ಅಕ್ಟೋಬರ್ ಅಂತ್ಯದೊಳಗೆ ಶೇ.100ರ ಗುರಿ ಮುಟ್ಟಲು ಯೋಜನೆ ಹಾಕಿಕೊಳ್ಳಲಾಗಿದೆ.

61,969 ದೃಢಪಟ್ಟ ಪ್ರಕರಣಗಳು: ಇದುವರೆಗೆ ಜಿಲ್ಲೆಗೆ ಸಂಬಂಧಪಟ್ಟಂತೆ 61,969 ಕರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ, ಇದರಲ್ಲಿ 2054 ಇತರ ಜಿಲ್ಲೆ ಹಾಗೂ ಅನ್ಯರಾಜ್ಯದ ಪ್ರಕರಣಗಳಾಗಿದ್ದು, ಉಳಿದ 59,915 ಪ್ರಕರಣಗಳು ಗ್ರಾಮಾಂತರ ಜಿಲ್ಲೆ ನಿವಾಸಿಗಳದ್ದಾಗಿದೆ. ಈ 61,969 ಪ್ರಕರಣಗಳ ಪೈಕಿ 61,027 ಸೋಂಕಿತರು ಗುಣಮುಖರಾಗಿ ಅಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 54 ಸಕ್ರಿಯ ಪ್ರಕರಣಗಳಿದ್ದು ಇದುವರೆಗೆ 888 ಮಂದಿ ಕರೊನಾಗೆ ಬಲಿಯಾಗಿದ್ದಾರೆ.

716109 ಟೆಸ್ಟಿಂಗ್: ನಾಲ್ಕೂ ತಾಲೂಕುಗಳಲ್ಲಿ ಇದುವರೆಗೆ 7,78, 976 ಮಂದಿಗೆ ಕರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 61,969 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದರೆ, 7,16,109 ನೆಗೆಟಿವ್ ವರದಿ ಬಂದಿದೆ. 898 ಮಂದಿ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಕರೊನಾ ಪ್ರಕರಣ ಶೂನ್ಯದತ್ತ ಬಂದಿದ್ದರೂ ಆರ್‌ಟಿಪಿಸಿಆರ್ ಹಾಗೂ ರ‌್ಯಾಪಿಡ್ ಪರೀಕ್ಷೆಗಳು ಮುಂದುವರಿದಿದ್ದು, ಜಿಲ್ಲೆಯಲ್ಲಿ ಕರೊನಾವನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಶ್ರಮಿಸುತ್ತಿದೆ.

ಜಿಲ್ಲೆಯಲ್ಲಿ ಶೇ.100 ಗುರಿ ಸಾಧನೆಯೊಂದಿಗೆ ಕರೊನಾ ಲಸಿಕಾ ವಿತರಣೆ ಚುರುಕುಗೊಳಿಸಲಾಗಿದೆ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಅಗತ್ಯ ಲಸಿಕೆ ದಾಸ್ತಾನು ಇದೆ, ಕೆಲವೊಂದು ಗ್ರಾಮೀಣ ಪ್ರದೇಶದಲ್ಲಿ ಲಸಿಕೆಗೆ ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಅಂಥವರ ಮನವೊಲಿಸಿ ಅವರಲ್ಲಿ ಜಾಗೃತಿ ಮೂಡಿಸಿ ಲಸಿಕೆ ಹಾಕುವ ಕಾರ್ಯಕ್ರಮ ಮುಂದುವರಿದಿದೆ. ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಜಿಲ್ಲೆಯ 70ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರೊನಾ ಲಸಿಕೆ ದಾಸ್ತಾನು ಇದೆ, ಪ್ರತಿನಿತ್ಯ ಸಾವಿರಾರು ಮಂದಿಗೆ ಲಸಿಕೆ ಹಾಕಲಾಗುತ್ತಿದೆ, ಪ್ರತಿವಾರ ಅಭಿಯಾನದ ಮೂಲಕವೂ ಲಸಿಕೆ ಹಾಕಲು ವೇಗ ನೀಡಲಾಗುತ್ತಿದೆ, ಕೆಲವೇ ದಿನಗಳಲ್ಲಿ ಶೇ.100 ಗುರಿ ಸಾಧಿಸುವ ಭರವಸೆ ಇದೆ. ಡಾ.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net