ಜಿಲ್ಲೆಯಲ್ಲಿ ಶೇ.77.59 ಮತದಾನ ; ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಒಕ್ಕಲಿಗರ ಸಂಘದ ಚುನಾವಣೆ

Vokklingara sangha Cap (5)
Published on

ತುಮಕೂರು : ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿಣಿ ಸಮಿತಿಯ ಜಿಲ್ಲೆಯ 2 ಸದಸ್ಯತ್ವ ಸ್ಥಾನಕ್ಕೆ ಭಾನುವಾರ ಶಾಂತಿಯುತವಾಗಿ ಚುನಾವಣೆ ನಡೆಯಿತು. ಜಿಲ್ಲೆಯಲ್ಲಿ ಶೇ.77.59 ಮತದಾನವಾಗಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ.

2 ಸ್ಥಾನಕ್ಕೆ ನಡೆದ ಚುನಾವಣೆಯ ಅಂತಿಮ ಕಣದಲ್ಲಿ 7 ಅಭ್ಯರ್ಥಿಗಳಿದ್ದು ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯಿತು. ಜಿಲ್ಲಾ ಕೇಂದ್ರದಲ್ಲಿ ಕಾಳಿದಾಸ ಪಿಯು ಕಾಲೇಜು ಸೇರಿ ಆಯಾ ತಾಲೂಕು ಕೇಂದ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಈ ಬಾರಿ ಸಂಘದ 31181 ಸದಸ್ಯರು ಮತದಾನದ ಹಕ್ಕು ಹೊಂದಿದ್ದು 24193 ಮಂದಿ ಹಕ್ಕು ಚಲಾಯಿಸಿ, ಅಭ್ಯರ್ಥಿಗಳ ಹಣೆಬರಹ ಬರೆದರು. ಡಿ.15 ರಂದು ತುಮಕೂರಿನ ಕಾಳಿದಾಸ ಪಿಯು ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

ಮಾಜಿ ಸಚಿವ ಡಿ.ನಾಗರಾಜಯ್ಯ ಪುತ್ರ ಡಿ.ಎನ್.ಲೋಕೇಶ್, ಆರ್.ಹನುಮಂತರಾಯಪ್ಪ, ಕಪನಿಗೌಡ ಪಾಳ್ಯ, ಶಿವರಾಮಯ್ಯ, ಸಿಕೆಎಂ ಗೌಡ, ಬೆಳ್ಳಿ ಲೋಕೇಶ್, ಸುಜಾತಾ ನಂಜೇಗೌಡ ಕಣದಲ್ಲಿದ್ದು ಭಾನುವಾರ ಬೆಳಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನವು ಮಧ್ಯಾಹ್ನ 12ಗಂಟೆ ಹೊತ್ತಿಗೆ ಬಿರುಸು ಪಡೆಯಿತು. ಸಂಜೆ ಹೊತ್ತಿಗೆ ಒಟ್ಟಾರೆ ಶೇ.77.59 ಮತದಾನವಾಯಿತು.

ಕುಣಿಗಲ್ ತಾಲೂಕಿನಲ್ಲಿ ಶೇ.84.56ರಷ್ಟು ಅತಿಹೆಚ್ಚು ಮತದಾನ ನಡೆದಿದ್ದರೆ, ಶಿರಾ ತಾಲೂಕಿನಲ್ಲಿ ಶೇ.65 ಅತಿ ಕಡಿಮೆ ಪ್ರಮಾಣದ ಮತದಾನ ದಾಖಲೆಯಾಗಿದೆ. ಕಳೆದ ಬಾರಿ ಶೇ.87.91 ದಾಖಲೆ ಮತದಾನವಾಗಿತ್ತು.

ಕುಣಿಗಲ್‌ನಲ್ಲಿ ಭರ್ಜರಿ ಮತದಾನ: ಅತಿಹೆಚ್ಚು ಮತದಾರರನ್ನು ಹೊಂದಿರುವ ಕುಣಿಗಲ್ ತಾಲೂಕಿನವರೇ 4 ಮಂದಿ ಕಣದಲ್ಲಿದ್ದರಿಂದ ಮತದಾನ ಪ್ರಮಾಣವು ನಿರೀಕ್ಷೆಗಿಂತ ಹೆಚ್ಚಾಗಿತ್ತು. ಶೇ.84.56 ಭರ್ಜರಿ ಮತದಾನವಾಗಿದೆ. 9710 ಮತದಾರರ ಪೈಕಿ 8211 ಮಂದಿ ಹಕ್ಕು ಚಲಾಯಿಸಿದರು. ಇನ್ನೂ ಶಿರಾದಲ್ಲಿ 883 ಮತದಾರರಲ್ಲಿ 574 ಸದಸ್ಯರು ಮತ ಚಲಾಯಿಸಿದರು. ಶೇ.65 ಮತದಾನವಾಗಿದೆ.

ಕುಣಿಗಲ್ ನಂತರ ಜಿಲ್ಲಾಕೇಂದ್ರ ತುಮಕೂರು ಸೇರಿ ತಾಲೂಕಿನಲ್ಲಿ ಒಟ್ಟು 7812 ಸದಸ್ಯರಿದ್ದು 5700 ಮಂದಿ ಮತ ಚಲಾವಣೆ ಮಾಡಿದರು. ತುಮಕೂರು ತಾಲೂಕಿನಲ್ಲಿ ಶೇ.72.96 ಮತದಾನವಾಗಿದೆ. ತುರುವೇಕೆರೆ ತಾಲೂಕಿನಲ್ಲಿ 5523 ಮತದಾರರಿದ್ದು 4256 ಮಂದಿ ಹಕ್ಕು ಚಲಾಯಿಸಿದ್ದಾರೆ. ಒಟ್ಟು ಮತದಾನ ಪ್ರಮಾಣ ಶೇ.77.05 ಆಗಿದೆ. ಕೊರಟಗೆರೆ ಶೇ.80.78, ತಿಪಟೂರು-ಶೇ.79.43, ಪಾವಗಡ-ಶೇ.77.57, ಚಿಕ್ಕನಾಯಕನಹಳ್ಳಿ-ಶೇ.74.01, ಗುಬ್ಬಿ -ಶೇ.73.49 ಹಾಗೂ ಮಧುಗಿರಿ-ಶೇ.68.22 ಮತದಾನವಾಗಿದೆ.

ಮತದಾನ ಶಾಂತಿಯುತವಾಗಿ ನಡೆದಿದ್ದು ಎಲ್ಲಿಯೂ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. 15 ರಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.

ಅವಕಾಶ ವಂಚಿತ ಸದಸ್ಯರು! : ಈ ಬಾರಿ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸಂಘದ ಗುರುತಿನ ಚೀಟಿ ಹೊಂದಿದ್ದವರಿಗೆ ಮತದಾನ ಮಾಡಲು ಅವಕಾಶ ನೀಡಿದ್ದರಿಂದ ಜಿಲ್ಲಾ ಕೇಂದ್ರ ತುಮಕೂರಿನಲ್ಲಿ ನೂರಾರು ಮಂದಿ ಸಂಘದ ಗುರುತಿನ ಚೀಟಿ ಇಲ್ಲದ ಕಾರಣ ಮತದಾನ ಅವಕಾಶದಿಂದ ವಂಚಿತರಾದರು. ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್ ಇದ್ದರೂ ಸಂಘದ ಐಡಿ ಕಾರ್ಡ್ ಇಲ್ಲದವರಿಗೆ ಮತದಾನಕ್ಕೆ ಚುನಾವಣಾಧಿಕಾರಿಗಳು ಅವಕಾಶ ನೀಡಲಿಲ್ಲ.

ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿರುವವರು ಎಲ್ಲ ನಮ್ಮವರೇ. ಹಾಗಾಗಿ ಯಾರೇ ಗೆಲ್ಲಲಿ ಅವರು ಒಕ್ಕಲಿಗ ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಸಮುದಾಯದ ದುರ್ಬಲರ ಅಭಿವೃದ್ಧಿಗೆ ಹಾಗೂ ಜನಾಂಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಿ. ಎಸ್.ಪಿ.ಮುದ್ದಹನುಮೇಗೌಡ ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net