

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಆರ್ಭಟ ಮತ್ತೆ ಆರಂಭವಾಗಿದೆ. ಮಲೆನಾಡು ಭಾಗದಲ್ಲಿ ಎರಡು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು ಜಿಲ್ಲೆಯಲ್ಲಿ ಆ.6ರಂದು ರೆಡ್ ಅಲರ್ಟ್, 7ರಂದು ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಸಾರ್ವಜನಿಕರು ನದಿ ಅಥವಾ ತಗ್ಗು ಪ್ರದೇಶಗಳಿಗೆ ಇಳಿಯಬಾರದು. ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ, ಕೆಳಗೆ ನಿಲ್ಲದಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ.
ಕಡೂರು ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ನಿಡುವಳ್ಳಿಯ 14ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಬಹುತೇಕ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಗುರುವಾರ ರಾತ್ರಿ ಎಡಬಿಡದೆ ಸುರಿದ ಮಳೆಯಿಂದ ನಿಡುವಳ್ಳಿ ಕೆರೆ ತುಂಬಿ ಕಟ್ಟೆ ಒಡೆಯುವ ಹಂತಕ್ಕೆ ತಲುಪಿದ್ದು ಹಾಗೂ ಗ್ರಾಮದ ಮುದಿಯಪ್ಪನ ಕಟ್ಟೆಯ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆರೆ ನೀರು ಪಂಚನಹಳ್ಳಿ-ಬೆಲಗೂರು ಮಾರ್ಗದ ರಸ್ತೆ ತುಂಡರಿಸಿ ಗಂಗನಹಳ್ಳಿ ಕೆರೆಗೆ ನೀರು ಹರಿಸಲಾಯಿತು.
ಮುದಿಯಪ್ಪನ ಕಟ್ಟೆ ಭಾಗದಲ್ಲಿ ಕೆರೆಯ ಕಟ್ಟೆ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಈ ಭಾಗದ 12 ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ರಾಗಿ, ಅಕ್ಕಿ, ದವಸಧಾನ್ಯಗಳು, ನೀರು ಪಾಲಾದವು. ಎಡಬಿಡದೆ ಸುರಿದ ಮಳೆಯಿಂದ ಗ್ರಾಮಸ್ಥರು ಸಮಸ್ಯೆ ಅನುಭವಿಸುವಂತಾಯಿತು. ನೆರೆಗೆ ಸಿಲುಕಿದವರನ್ನು ಅಧಿಕಾರಿಗಳು ಗ್ರಾಮದ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸಿದರು. ಉಳಿದ ಕೆಲ ಮನೆಗಳಲ್ಲಿ ಗೋಡೆಗಳಲ್ಲಿ ತೇವಾಂಶ ಹೆಚ್ಚಾಗಿ ಉರುಳಿವೆ.
ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ರಾತ್ರಿ ತಹಸೀಲ್ದಾರ್ ಜೆ.ಉಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ನೀರು ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ತಾತ್ಕಲಿಕವಾಗಿ ರಸ್ತೆ ತುಂಡರಿಸಿದ ಜಾಗದಲ್ಲಿ ಪೈಪ್ಗಳನ್ನು ಅಳವಡಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಕೆರೆ ಕೋಡಿ ಪ್ರದೇಶದ ಜಾಗ ಮತ್ತು ಹಾನಿಗೊಳಗಾದ ಮನೆಗಳ ರಸ್ತೆಗಳ ಬದಿಯಲ್ಲಿ ಪೈಪ್ಗಳನ್ನು ಅಳವಡಿಸಿ ನೆರೆಯ ಪ್ರಮಾಣವನ್ನು ತಹಬಂದಿಗೆ ತಂದರು.
ಶಾಸಕ ಬೆಳ್ಳಿಪ್ರಕಾಶ್ ಮತ್ತು ಅಧಿಕಾರಿಗಳ ತಂಡ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಗೊಂಡ ಮನೆಗಳನ್ನು ಪರಿಶೀಲಿಸಿದರು. ಸ್ಥಳದಲ್ಲಿಯೇ ಹಾನಿಗೊಳಗಾದ 12 ಮನೆಗಳಿಗೆ ಕಂದಾಯ ಇಲಾಖೆಯಿಂದ ತಲಾ 10 ಸಾವಿರ ರೂ. ಮೊತ್ತದ ತಾತ್ಕ್ಕಾಲಿಕ ಪರಿಹಾರದ ಚೆಕ್ನ್ನು ವಿತರಿಸಿದರು.