

ಧಾರವಾಡ: ಜಿಲ್ಲೆಯಲ್ಲಿ ಸೋಮವಾರ 193 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3380ಕ್ಕೆ ಜಿಗಿದಿದೆ.
ಕರೊನಾದಿಂದ ಮೃತಪಟ್ಟ 8 ಜನರ ಸ್ಥೂಲ ಮಾಹಿತಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಚೀನಿ ವೈರಸ್ನಿಂದ ಮೃತಪಟ್ಟವರ ಸಂಖ್ಯೆ 103ಕ್ಕೆ ಏರಿದೆ. ಇದುವರೆಗೆ ಒಟ್ಟು 1389 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1888 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಪ್ರಕರಣ ಪತ್ತೆಯಾದ ಸ್ಥಳಗಳ ವಿವರ
ಧಾರವಾಡ ತಾಲೂಕು: ಕರಡಿಗುಡ್ಡ ಗ್ರಾಮ, ಟೋಲ್ ನಾಕಾ, ಗಣಪತಿ ಗುಡಿ ಹತ್ತಿರ ಸಂಗೊಳ್ಳಿ ರಾಯಣ್ಣ ನಗರ, ಮರಾಠ ಕಾಲನಿ, ಕೆಎಚ್ಬಿ ಕಾಲನಿ ದೊಡ್ಡನಾಯಕನಕೊಪ್ಪ, ಅಂಬ್ಲಿಕೊಪ್ಪ ಗ್ರಾಮ, ಹೊಸಯಲ್ಲಾಪುರದ ವಾಲ್ಮೀಕಿ ಓಣಿ, ಮುಮ್ಮಿಗಟ್ಟಿ ಗ್ರಾಮ, ದೊಡ್ಡಮನಿ ಹಾಲ್ ಹತ್ತಿರ ಮೆಹಬೂಬನಗರ, ಕುಮಾರೇಶ್ವರ ನಗರ, ಮೃತ್ಯುಂಜಯ ನಗರ, ಕಮಲಾಪುರ, ಎಸ್ಡಿಎಂ ಆಸ್ಪತ್ರೆ ಸತ್ತೂರ, ಜನ್ನತ ನಗರ, ವಿದ್ಯಾಗಿರಿ ವಿವೇಕಾನಂದ ನಗರ, ನರೇಂದ್ರ ಗ್ರಾಮ, ನಾರಾಯಣಪುರ, ವಿಠ್ಠಲ ದೇವಸ್ಥಾನ ಹತ್ತಿರ ಮದಿಹಾಳ, ಕಾಮನ ಕಟ್ಟಿ, ಮನಕಿಲ್ಲಾ, ತಪೋವನ ನಗರ, ಹಾರೋಬೆಳವಡಿ ಗ್ರಾಮ, ಹಾವೇರಿ ಪೇಟೆ ನದಾಫ ಗಲ್ಲಿ, ಗಾಂಧಿನಗರ ಬಂಡೆಮ್ಮನ ಗುಡಿ ಹತ್ತಿರ, ಕೊಪ್ಪದಕೇರಿ, ವನಶ್ರೀ ನಗರ ಸತ್ತೂರ, ಶಿವಗಂಗಾ ನಗರ, ಸಾಧನಕೇರಿ, ಜೋಶಿ ಗಲ್ಲಿ, ಸಂಪಿಗೆ ನಗರ, ಮಟ್ಟಿ ಪ್ಲಾಟ್, ಬನಶ್ರೀ ನಗರ, ಕಲ್ಯಾಣನಗರ, ಸೈದಾಪುರ, ಚನ್ನಬಸವೇಶ್ವರ ನಗರ, ಶಿವಬಸವ ನಗರ, ಮುಳಮುತ್ತಲ ಗ್ರಾಮ, ಮಾಳಾಪುರ, ಟಿಕಾರೆ ರಸ್ತೆ, ಗಿರಿನಗರ, ಗಾಂಧಿಚೌಕ್, ಜಿಲ್ಲಾ ಆಸ್ಪತ್ರೆ ಹತ್ತಿರ, ಹಳೇ ಎಸ್ಪಿ ಸರ್ಕಲ್, ಯಾಲಕ್ಕಿ ಶೆಟ್ಟರ ಕಾಲನಿಯ ಹುಕ್ಕೇರಿಕರ ನಗರ, ತಡಸಿನಕೊಪ್ಪ, ಮಂಗಳವಾರ ಪೇಟೆ, ರಜತಗಿರಿ ಮತ್ತು ತೇಗೂರು ಗ್ರಾಮ.
ಹುಬ್ಬಳ್ಳಿ ತಾಲೂಕು: ನಾಗಶೆಟ್ಟಿಕೊಪ್ಪ, ಸಿಬಿಟಿ ಹತ್ತಿರ ಮಕಾನದಾರ ಗಲ್ಲಿ, ದುರ್ಗದಬೈಲ, ಅಯೋಧ್ಯಾ ನಗರ, ಉಣಕಲ್ಲ, ನವಅಯೋಧ್ಯಾ ನಗರ, ಸುಭಾಸ ನಗರ, ಕೇಶ್ವಾಪುರ ರಮೇಶ ಭವನ ಬಳಿ, ರೈಲ್ವೆ ಕ್ವಾರ್ಟರ್ಸ್, ಹಳೇಹುಬ್ಬಳ್ಳಿ, ಶಿವಶಂಕರ ಕಾಲನಿ, ತಾರಿಹಾಳ, ಸೆಟ್ಲ್ಮೆಂಟ್ ಮುಖ್ಯರಸ್ತೆ ಗಂಗಾಧರ ನಗರ, ವಿದ್ಯಾನಗರ, ಯಲ್ಲಾಪುರ ಓಣಿ, ವೆಂಕಟೇಶ ಕಾಲನಿ ಬೆಂಗೇರಿ, ಗದಗ ರಸ್ತೆಯ ಚೇತನಾ ಕಾಲನಿ, ಕುಸುಗಲ್ ರಸ್ತೆ ಮಧುರಾ ಕಾಲನಿ, ಲಿಂಗರಾಜನಗರ, ಕಾರವಾರ ರಸ್ತೆಯ ಇಎಸ್ಐ ಕ್ವಾರ್ಟರ್ಸ್, ಮಿಲ್ಲತ್ ನಗರ, ಮಂಜುನಾಥ ನಗರ, ನವನಗರ 6ನೇ ಅಡ್ಡ ರಸ್ತೆ, ಸಿಬಿಟಿ ಹತ್ತಿರ ಘಂಟಿಕೇರಿ ಓಣಿ, ಕಿಮ್ಸ್ ಆವರಣ, ಸಿಂಡಿಕೇಟ್ ಬ್ಯಾಂಕ್ ಹತ್ತಿರ ಬ್ಯಾಹಟ್ಟಿ, ಇಂಡಿ ಪಂಪ್ ಬ, ಗೋಕುಲ ರಸ್ತೆಯ ಕೆ.ಬಿ. ನಗರ, ರವಿ ನಗರ, ಕಾರವಾರ ರಸ್ತೆ ಪೊಲೀಸ್ ಕ್ವಾರ್ಟರ್ಸ್, ಗೋಕುಲ ರಸ್ತೆಯ ಪ್ರಶಾಂತ ನಗರ, ಕರಿಸಿದ್ಧೇಶ್ವರ ಕಾಲನಿ, ಮಂಟೂರ ರಸ್ತೆ, ಚೇತನಾ ಕಾಲನಿ, ಕುಸುಗಲ್ ರಸ್ತೆಯ ಅಲ್ಕಾಪುರಿ ಲೇಔಟ್, ಕೇಶ್ವಾಪುರದ ಹೇಮಂತ ನಗರ, ಕಾಡಸಿದ್ಧೇಶ್ವರ ಕಾಲನಿ, ವಿದ್ಯಾನಗರ ಬಿವಿಬಿ ಕಾಲೇಜ ಹತ್ತಿರ, ಮಂಟೂರ ರಸ್ತೆಯ ಶೀಲಾ ಕಾಲನಿ, ಅಮರಗೋಳ ಸರ್ಕಾರಿ ಶಾಲೆ ಹತ್ತಿರ, ಪಗಡಿ ಓಣಿ, ಕೃಪಾನಗರ, ಬೂಸಪೇಟೆ , ಭೈರಿದೇವರಕೊಪ್ಪ, ವಿನಾಯಕ ನಗರ, ಗೋಕುಲ ರಸ್ತೆ ಬಸವೇಶ್ವರ ನಗರ, ನೇಕಾರ ನಗರ, ಕರ್ಜಗಿ ಓಣಿ, ಶಿರೂರ ಪಾರ್ಕ್, ಆದರ್ಶ ನಗರ, ಭೋವಿ ಗಲ್ಲಿ, ವೀರಾಪುರ ಓಣಿ, ಈಶ್ವರ ನಗರ, ಯಲ್ಲಾಪುರ ಓಣಿ, ರೈಲ್ವೆಯ ತುಂಗಭದ್ರಾ ವಿಶ್ರಾಂತಿ ಗೃಹ, ಕೃಷ್ಣಾ ನಗರ, ನಲಗೂರ ಓಣಿ.
ನವಲಗುಂದ ತಾಲೂಕು: ನವಲಗುಂದ ಸರ್ಕಾರಿ ಆಸ್ಪತ್ರೆ, ಜಾವೂರ ಗ್ರಾಮದಲ್ಲಿ 9 ಪ್ರಕರಣಗಳು, ತಿರ್ಲಾಪುರ, ಆರೇಕುರಹಟ್ಟಿ, ನಲವಡಿ ಗ್ರಾಮ, ಪೊಲೀಸ್ ಕ್ವಾರ್ಟರ್ಸ್. ಕುಂದಗೋಳ ತಾಲೂಕು: ಬರದ್ವಾಡ. ಕಲಘಟಗಿ ತಾಲೂಕು: ಹೊನ್ನಾಪುರ, ಬೀರವಳ್ಳಿ, ಬಿ. ಹುಲಿಕಟ್ಟಿ. ? ಅಣ್ಣಿಗೇರಿ ತಾಲೂಕು: ಬಸವೇಶ್ವರ ಮಾರುಕಟ್ಟೆ , ಜಾಮಿಯಾ ಮಸೀದಿ, ಬಂಗಾರಪ್ಪ ನಗರ, ಮುರದಖಾನ್ ಓಣಿ.
ದಾವಣಗೆರೆ, ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಭಗವಾನ ಚಾಳ, ಗದಗ ನಗರದ ಹುಡ್ಕೋ ಕಾಲನಿ, ಹಾವೇರಿ ಜಿಲ್ಲೆಯ ಸಂಕ್ಲೀಪುರದಿಂದ ಪ್ರಕರಣಗಳು ವರದಿಯಾಗಿವೆ.
ಒಂದೇ ದಿನ ವೃದ್ಧ ಅಣ್ಣ-ತಮ್ಮ ಸಾವು...
ಕರೊನಾ ಸೋಂಕಿನಿಂದ ಅಣ್ಣ, ತಮ್ಮ ಒಂದೇ ದಿನ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಹುಬ್ಬಳ್ಳಿ ನಗರದ ಹೊಸೂರು ಪ್ರದೇಶದ ನಿವಾಸಿಗಳಾದ 72, 60 ವರ್ಷದವರು ಮೃತಪಟ್ಟವರು ಎಂದು ತಿಳಿದುಬಂದಿದೆ. ಕೆಲ ದಿನಗಳಿಂದ ಇಬ್ಬರೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗ್ಗೆ ಅಣ್ಣ ಮೃತಪಟ್ಟಿದ್ದರು. ಮಧ್ಯಾಹ್ನ ಅಂತ್ಯಕ್ರಿಯೆ ಮುಗಿಸಿ, ಕುಟುಂಬದವರು ಮನೆಗೆ ಮರಳಿದ್ದರು. ಅಷ್ಟರಲ್ಲಿಯೇ ಇನ್ನೊಬ್ಬರು ಮೃತಪಟ್ಟಿರುವ ಮಾಹಿತಿ ಬರಸಿಡಿಲಿನಂತೆ ಬಂದೆರಗಿತು. ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ನಿತ್ಯ ನೂರಾರು ಜನರಲ್ಲಿ ಕಂಡುಬರುತ್ತಿರುವ ಕರೊನಾ ವೈರಸ್, ಹೀಗೆಲ್ಲ ಘಾಸಿಗೊಳಿಸುತ್ತಿರುವುದು ಸಾರ್ವಜನಿಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಡಿಸಿಪಿ ಪಿ. ಕೃಷ್ಣಕಾಂತ್ ವರದಿ ನೆಗೆಟಿವ್
ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪಿ. ಕೃಷ್ಣಕಾಂತ್ ಅವರ ಕರೊನಾ ವರದಿ ನೆಗೆಟಿವ್ ಬಂದಿದೆ. ಕಳೆದ ವಾರ ಡಿಸಿಪಿ ಗನ್ವ್ಯಾನ್ಗೆ ಪಾಸಿಟಿವ್ ಪತ್ತೆಯಾಗಿದ್ದರಿಂದ ಡಿಸಿಪಿ ಗಂಟಲ ದ್ರವ ತಪಾಸಣೆಗೆ ಒಳಗಾಗಿದ್ದರು. ಇದೀಗ ವರದಿಯಲ್ಲಿ ನೆಗೆಟಿವ್ ಬಂದಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಕಳ್ಳನಿಂದ 10 ಸಿಬ್ಬಂದಿಗೆ ಸೋಂಕು ಹರಡುವ ಮೂಲಕ ಭಾರಿ ಆತಂಕಕ್ಕೆ ಒಳಗಾಗಿದ್ದ ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸೋಮವಾರ ನಿರಾಳವಾಗಿದ್ದಾರೆ. ಸೋಮವಾರ ಕಾನ್ಸ್ಟೇಬಲ್ ಬಿಡುಗಡೆಯಾಗಿದ್ದು, ಸೋಂಕಿಗೆ ತುತ್ತಾಗಿದ್ದ ಎಲ್ಲ 10 ಅಧಿಕಾರಿ, ಸಿಬ್ಬಂದಿಯೂ ಬಿಡುಗಡೆಯಾದಂತಾಗಿದೆ.
ಕಿರಾಣಿ ಅಂಗಡಿಗಳು ಸಂಜೆ 4ಕ್ಕೆ ಬಂದ್
ಧಾರವಾಡ: ಕರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದ ಕಿರಾಣಿ ಅಂಗಡಿಗಳನ್ನು ಸಂಜೆ 4ಕ್ಕೆ ಬಂದ್ ಮಾಡಲು ಕಿರಾಣಿ ವರ್ತಕರ ಸಂಘ ನಿರ್ಧರಿಸಿದೆ. ಜು. 27ರಿಂದಲೇ ಇದನ್ನು ಜಾರಿಗೆ ತರಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಎಲ್ಲ ಕಿರಾಣಿ ಅಂಗಡಿಗಳು ಈ ಕ್ರಮವನ್ನು ಪಾಲಿಸಬೇಕು. ಕಿರಾಣಿ ಖರೀದಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅವಶ್ಯಕ ಸಾಮಗ್ರಿ ಖರೀದಿಗೆ ಕುಟುಂಬದ ಒಬ್ಬರು ಮಾತ್ರ ಬರಬೇಕು ಎಂದು ಸಂಘದ ಅಧ್ಯಕ್ಷ ಅಶೋಕ ಬಿ. ದೊಡ್ಡಮನಿ ಕೋರಿದ್ದಾರೆ.
ಹಳೇ ಹುಬ್ಬಳ್ಳಿ ಠಾಣೆ ಸೀಲ್ಡೌನ್
ಹುಬ್ಬಳ್ಳಿ: ಕರೊನಾ ಕಾಟಕ್ಕೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯನ್ನು ಸೋಮವಾರ ಸೀಲ್ಡೌನ್ ಮಾಡಲಾಗಿದೆ. ಭಾನುವಾರ ಒಂದೇ ದಿನ ಮೂವರು ಸಿಬ್ಬಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಠಾಣೆಗೆ ಸ್ಯಾನಿಟೈಸೇಷನ್ ಮಾಡಿ ಸೀಲ್ಡೌನ್ ಮಾಡಲಾಗಿದೆ. ಸದ್ಯ ಠಾಣೆಯನ್ನು ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿನ ಪೊಲೀಸ್ ಹೊರ ಠಾಣೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕೆಲವರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಕರೊನಾದಿಂದ 8 ಜನ ಸಾವು
ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ 8 ಜನ 4 ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೋಮವಾರದ ಪ್ರಕಟಣೆಯಲ್ಲಿ ತಿಳಿಸಿದೆ.
ಧಾರವಾಡ ಟೋಲ್ ನಾಕಾದ 55 ವರ್ಷದ ಪುರುಷ, ಮರಾಠ ಕಾಲನಿಯ 82 ವರ್ಷದ ವೃದ್ಧ, ತಾಲೂಕಿನ ಕರಡಿಗುಡ್ಡ ಗ್ರಾಮದ 72 ವರ್ಷದ ವೃದ್ಧ, ಹಳೇ ಹುಬ್ಬಳ್ಳಿಯ ಅಯೋಧ್ಯಾ ನಗರದ 51 ವರ್ಷದ ಪುರುಷ, ಹುಬ್ಬಳ್ಳಿ ಸೋನಿಯಾಗಾಂಧಿ ನಗರದ 60 ವರ್ಷದ ಪುರುಷ, ನಾಗಶೆಟ್ಟಿಕೊಪ್ಪದ 75 ವರ್ಷದ ಪುರುಷ, ಸಿಬಿಟಿ ಮಕಾನದಾರ ಗಲ್ಲಿಯ 48 ವರ್ಷದ ಪುರುಷ, ಕೌಲಪೇಟ ಹೊಸಮನಿ ಕಾಲನಿ ಮೋಮಿನ್ ಪ್ಲಾಟ್ನ 53 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು. ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿದೆ.
ತ್ವರಿತ, ಸಮರ್ಪಕ ಚಿಕಿತ್ಸೆ ಒದಗಿಸಿ
ಹುಬ್ಬಳ್ಳಿ: ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಎಲ್ಲ ನಾಗರಿಕರಿಗೂ ಸಮಾನವಾಗಿ ತ್ವರಿತ ಮತ್ತು ಸಮರ್ಪಕ ಚಿಕಿತ್ಸೆ ಒದಗಿಸಿ ಎಂದು ಒತ್ತಾಯಿಸಿ ಸಂವಿಧಾನ ಸುರಕ್ಷಾ ಸಮಿತಿ ವತಿಯಿಂದ ಮಿನಿ ವಿಧಾನಸೌಧ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸರಿಯಾದ ಪರೀಕ್ಷೆ, ಚಿಕಿತ್ಸೆ ಸಿಗದೆ ಹಲವು ಸೋಂಕಿತರು ಸಾವಿಗೀಡಾಗುತ್ತಿದ್ದಾರೆ. ಸೋಂಕಿನ ಲಕ್ಷಣ ಕಂಡಕೂಡಲೆ ತಪಾಸಣೆ ಮಾಡಿ 24 ಗಂಟೆಗಳಲ್ಲಿ ವರದಿ ಬರುವಂತೆ ಮತ್ತು ಚಿಕಿತ್ಸೆ ದೊರೆಯುವಂತೆ ಕ್ರಮ ಜರುಗಿಸಬೇಕು. ಕರೊನಾ ಕುರಿತು ಅನಗತ್ಯ ಭಯ ಸೃಷ್ಟಿಸುವ ಮಾಧ್ಯಮಗಳ ವಿರುದ್ಧ ಕ್ರಮ ಜರುಗಿಸಬೇಕು. ಭಾನುವಾರದ ಲಾಕ್ಡೌನ್ ಕೈಬಿಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಪಿತಾಂಬರಪ್ಪ ಬಿಳಾರ, ವಿಜಯ ಗುಂಟ್ರಾಳ, ಅನ್ವರ ಮುಧೋಳ, ಮಹೇಶ ಪತ್ತಾರ, ಅಶ್ರಫ್ ಅಲಿ, ಅಯೂಬ ಸವಣೂರ, ಹನುಮಂತ ಹರಿಜನ, ಇತರರು ಇದ್ದರು.
ಕೋವಿಡ್ ನಿರ್ವಹಣೆಗೆ ಸಂಪನ್ಮೂಲ ಕೊರತೆಯಾಗದು
ಧಾರವಾಡ: ಕೋವಿಡ್ ಸೋಂಕಿತರ ಚಿಕಿತ್ಸೆ, ಹೋಂ ಐಸೊಲೇಷನ್ನಲ್ಲಿ ಇರುವವರಿಗೆ ಕೌನ್ಸೆಲಿಂಗ್, ಸೀಲ್ಡೌನ್ ಪ್ರದೇಶಗಳ ನಿರ್ವಹಣೆ, ಜನದಟ್ಟಣೆ ಕಡಿಮೆ ಮಾಡಲು ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಾನವ ಸಂಪನ್ಮೂಲ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಸೋಮವಾರ, ಕೋವಿಡ್ ನಿಯಂತ್ರಣಕ್ಕಾಗಿ ರಚಿಸಿರುವ ಕಣ್ಗಾವಲು ತಂಡಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾನಗರ ಪಾಲಿಕೆಯವರು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಕೋವಿಡ್ ನಿರ್ವಹಣೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಇಂಜಿನಿಯರ್ಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಪಾರ್ಥಿವ ಶರೀರಗಳ ಅಂತ್ಯಕ್ರಿಯೆ ನಿರ್ವಹಣೆಗೆ ನಗರ, ಸ್ಥಳೀಯ ಸಂಸ್ಥೆಗಳು, ಪ್ರತ್ಯೇಕ ಏಜೆನ್ಸಿ ಗುರುತಿಸಿ ಕಟ್ಟಿಗೆ, ಮಾನವ ಸಂಪನ್ಮೂಲ, ವಾಹನ ಮತ್ತಿತರ ಅಗತ್ಯ ಸೇವೆಗಳು 24 ಗಂಟೆಯೂ ಲಭ್ಯ ಇರುವಂತೆ ನೋಡಿಕೊಳ್ಳಬೇಕು. ಅಂತ್ಯಕ್ರಿಯೆ ಸಂದರ್ಭದಲ್ಲಿ ನಿಯಮಗಳ ಪಾಲನೆ ಪರಿಶೀಲಿಸಲು ಪೊಲೀಸ್ ಇಲಾಖೆಯ ಸಹಕಾರ ಪಡೆಯಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಜಾಗೃತಿ ಮೂಡಿಸಲು ಮಕ್ಕಳಿಂದ ಆನ್ಲೈನ್ ಮೂಲಕ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿ, ಉತ್ತಮ ಕಲಾಕೃತಿ ನೀಡಿದ ಮಕ್ಕಳನ್ನು ಜಿಲ್ಲಾಧಿಕಾರಿಯೊಂದಿಗೆ ಉಪಾಹಾರಕ್ಕೆ ಆಹ್ವಾನಿಸಿ, ಪ್ರೋತ್ಸಾಹಿಸಬೇಕು ಎಂದರು. ಇದಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿ, ಚಿತ್ರಕಲೆ, ಲೇಖನ, ಘೊಷವಾಕ್ಯ ರಚನೆ ಸೇರಿ ವೈವಿಧ್ಯಮಯ ಸ್ಪರ್ಧೆ ಏರ್ಪಡಿಸಲು ಸೂಚಿಸಿದರು.