ಜಿಲ್ಲೆಯಲ್ಲಿ ವಿಜಯದಶಮಿ ಸಡಗರ

Published on

ಚಾಮರಾಜನಗರ: ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಯ ಸಂಭ್ರಮ ಮನೆ ಮಾಡಿದ್ದಂತೆಯೇ ಪಕ್ಕದ ಜಿಲ್ಲೆ ಚಾಮರಾಜನಗರದಲ್ಲೂ ವಿಜಯದಶಮಿ ಸಡಗರ, ಸಂಭ್ರಮ ಎಲ್ಲೆಡೆ ಜೋರಾಗಿತ್ತು.

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಹನೂರು, ಯಳಂದೂರು ಹಾಗೂ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಿಂದ ದಸರಾ ಜಂಬೂ ಸವಾರಿಯನ್ನು ನೋಡಲು ಜನರು ಗುರುವಾರ ಮೈಸೂರಿಗೆ ತೆರಳಿದ್ದರು. ಹೀಗಾಗಿ ನಗರ ಮತ್ತು ಪಟ್ಟಣ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ಈ ವರ್ಷ ಚಾಮರಾಜನಗರ ದಸರಾ ಮಹೋತ್ಸವ ಇಲ್ಲದ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲೇ ಸಾರ್ವಜನಿಕರು ಮೈಸೂರಿನತ್ತಾ ಹೆಜ್ಜೆ ಹಾಕಿದರು. ಮೈಸೂರು ದಸರಾ ಜಂಬೂ ಸವಾರಿಯನ್ನು ನೋಡಿ ಖುಷಿ ಪಟ್ಟರು. ಕುಟುಂಬ ಸಮೇತ ಮೈಸೂರಿಗೆ ತೆರಳಿ ದಸರಾ ಸಂಭ್ರಮದಲ್ಲಿ ಪಾಲ್ಗೊಂಡರು.

ದೇಗುಲಗಳಲ್ಲಿ ವಿಶೇಷ ಪೂಜೆ:

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಜಯದಶಮಿ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ, ಯಳಂದೂರು ತಾಲೂಕುಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ದೇವರಿಗೆ ಅಲಂಕಾರ ಮಾಡಲಾಗಿತ್ತು. ಜಿಲ್ಲೆಯ ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳಿಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹನೂರಿನ ಮಲೆ ಮಹದೇಶ್ವರ ಬೆಟ್ಟ, ಯಳಂದೂರಿನ ಬಿಳಿಗಿರಿರಂಗನಬೆಟ್ಟ, ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಇತರೆ ಧಾರ್ಮಿಕ ಕೇಂದ್ರಗಳಿಗೆ ಭಕ್ತರ ದಂಡು ಹರಿದುಬಂದಿತ್ತು. ಪರಿಸರ ಪ್ರೇಮಿಗಳು ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಿಗೆ ಆಗಮಿಸಿದ್ದರು. ಇನ್ನಿತರೆ ಪ್ರವಾಸಿ ತಾಣಗಳಿಗೂ ಜನರು ಲಗ್ಗೆಯಿಟ್ಟರು.

ಆಯುಧ ಪೂಜೆ ಸಂಭ್ರಮ:

ವಿಶ್ವ ವಿಖ್ಯಾತ ಮೈಸೂರು ದಸರಾ ನವರಾತ್ರಿ ಹಬ್ಬದ ಭಾಗವಾಗಿರುವ ಆಯುಧ ಪೂಜೆ ಹಬ್ಬವನ್ನು ಬುಧವಾರ ಜಿಲ್ಲಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು. ವಿವಿಧ ದೇವಸ್ಥಾನಗಳು, ಅಗ್ನಿಶಾಮಕ ದಳ ಕಚೇರಿ, ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆ, ಕೆಎಸ್‌ಆರ್‌ಟಿಸಿ ಬಸ್ ಡಿಪೋ, ಲಾರಿ ಹಾಗೂ ಆಟೋ ನಿಲ್ದಾಣ, ಮನೆ, ಅಂಗಡಿಗಳಲ್ಲಿ ವಿಶೇಷ ಪೂಜೆ ನೆರವೇರಿತು. ವಿವಿಧ ವಾಹನಗಳು, ಶಸಾಸ, ಯಂತ್ರಗಳು, ಸಾಧನಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು. ಹಬ್ಬದ ಹಿನ್ನೆಲೆಯಲ್ಲಿ ಭಕ್ತರು ಕುಟುಂಬ ಸಮೇತ ಆಗಮಿಸಿ ದೇವರ ದರ್ಶನ ಪಡೆದರು. ಅಂಗಡಿಗಳಲ್ಲಿ ಆಯುಧ ಪೂಜೆ ಹಬ್ಬ ಆಚರಣೆ ಮಾಡಲಾಯಿತು. ಸಂಬಂಧಿಕರು ಮತ್ತು ಸ್ನೇಹಿತರನ್ನು ಅಂಗಡಿಗೆ ಕರೆದು ಸಿಹಿ ಹಂಚಿದರು. ಮಧ್ಯಾಹ್ನದವರೆಗೂ ಗ್ಯಾರೇಜ್‌ಗಳಲ್ಲಿ ವಾಹನಗಳ ರಿಪೇರಿ, ಸ್ವಚ್ಛತೆ ನಡೆದಿದ್ದರಿಂದ ಅಂಗಡಿಗಳು ಭರ್ತಿಯಾಗಿದ್ದವು.

ಸರ್ಕಾರಿ ಕಚೇರಿಗಳಲ್ಲೂ ಆಯುಧ ಪೂಜೆ:

ಜಿಲ್ಲಾ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲೂ ಆಯುಧ ಪೂಜೆ ಆಚರಣೆ ಮಾಡಲಾಯಿತು. ನಗರದ ಡಿವೈಎಸ್ಪಿ ಕಚೇರಿಯಲ್ಲಿ ಬೆಳಗ್ಗೆ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಸಶಸ ಮೀಸಲು ಪಡೆಯ ಕೇಂದ್ರದಲ್ಲಿ ಗನ್, ಪೊಲೀಸ್ ವ್ಯಾನ್, ಜೀಪ್, ಕಾರು ಸೇರಿದಂತೆ ಇತರ ವಸ್ತುಗಳಿಗೆ ಪೂಜೆ ಮಾಡಲಾಯಿತು. ನಗರದ ಭ್ರಮರಾಂಬ ಬಡಾವಣೆಯಲ್ಲಿರುವ ಅಗ್ನಿಶಾಮಕ ದಳ ಕಚೇರಿಯಲ್ಲಿ ಉಪಕರಣಗಳು ಮತ್ತು ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net