

ರಾಮನಗರ : ಕರೊನಾ ಸೋಂಕು ಹೆಚ್ಚುತ್ತಿರುವುದನ್ನು ನಿಯಂತ್ರಿಸುವ ಸಲುವಾಗಿ ಮತ್ತೊಮ್ಮೆ ಜಾರಿಗೆ ತಂದಿರುವ ವಾರಾಂತ್ಯ ಕರ್ಫ್ಯೂಗೆ ಎರಡನೇ ದಿನವಾದ ಭಾನುವಾರ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತೊಮ್ಮೆವಾರಾಂತ್ಯದ ಕರ್ಫ್ಯೂ ಜಾರಿಗೆ ತಂದಿದ್ದು, ಮೊದಲ ದಿನವಾದ ಶನಿವಾರ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿತ್ತು. ಇದರಂತೆ ಎರಡನೇ ದಿನವೂ ಉತ್ತಮವಾಗಿ ಸ್ಪಂದಿಸಿದ ಜನತೆ ಖರೀದಿ ಅವಧಿಯ ನಂತರ ಮನೆಗಳಿಗೆ ತೆರಳುವ ಮೂಲಕ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದರು.
ಅೋಷಿತ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳು ಬಹುತೇಕ ಸ್ತಬ್ಧಗೊಂಡಿದ್ದವು. ಆರಂಭದ ಕೆಲ ಹೊತ್ತು ಮತ್ತು ಗ್ರಾಮೀಣ ಭಾಗದಲ್ಲಿ ವಾಹನ ಸವಾರರರು ಬೇಕಾಬಿಟ್ಟಿ ಓಡಾಟ ನಡೆಸಿದರಾದರೂ ಬಿಸಿಲೇರುತ್ತಿದ್ದಂತೆ ಮನೆಗಳಿಗೆ ಸೇರಿದ್ದರಿಂದ ರಸ್ತೆಗಳು, ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ಅನಗತ್ಯವಾಗಿ ರಸ್ತೆಗಿಳಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ನೀಡಿತ್ತು. ಹೀಗಾಗಿ, ಬೆಂಗಳೂರು-ಮೈಸೂರು ಹೆದ್ದಾರಿ ವಾಹನಗಳಿಲ್ಲದೆ ಬಣಗುಡುತ್ತಿತ್ತು. ಕೇವಲ ತುರ್ತು ಸೇವೆ ಲಭ್ಯವಾಗಿತ್ತು. ಹಾಲು, ತರಕಾರಿ, ಮೆಡಿಕಲ್ ಸ್ಟೋರ್, ಆಸ್ಪತ್ರೆಗಳನ್ನು ಬಿಟ್ಟರೆ ಉಳಿದೆಲ್ಲವೂ ಇಡೀ ದಿನ ಬಂದ್ ಆಗಿದ್ದವು.
ಬೇಕಿದೆ ಮತ್ತಷ್ಟು ಕಠಿಣ ನಿಲುವು : ಸರ್ಕಾರ ರೋಗ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಮಾಡಿದ್ದರೂ ನಗರದ ಪ್ರದೇಶದಲ್ಲಿ ಒಂದಿಷ್ಟು ಜನರ ಓಡಾಟ ಸಾಮಾನ್ಯವಾಗಿಯೇ ಇತ್ತು. ಇವರನ್ನು ನಿಯಂತ್ರಿಸಲು ಪೊಲೀಸರು ಬಾಯಿ ಮಾತಿನ ಬುದ್ಧಿವಾದ ಹೇಳಿದ್ದು, ಸಾರ್ವಜನಿಕರ ಮನಸ್ಸಿಗೆ ತಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಬೇಕಾ ಬಿಟ್ಟಿ ಓಡಾಡುವವರ ವಿರುದ್ಧ ಮತ್ತಷ್ಟು ಕಠಿಣ ನಿಲುವು ಪ್ರದರ್ಶನ ಮಾಡಬೇಕಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಂತೂ ಪೊಲೀಸರು ಹೇಳಿದ ಮೇಲಷ್ಟೇ ಕಿರಾಣಿ ಅಂಗಡಿಗಳು ಬಾಗಿಲು ಹಾಕಿದ್ದು ಕಂಡು ಬಂತು. ಅಲ್ಲದೆ, ಜನರ ಓಡಾಟವೂ ಸಾಮಾನ್ಯವಾಗಿಯೇ ಇತ್ತು.
ಮಾಂಸಕ್ಕೆ ಮುಗಿ ಬಿದ್ದ ಜನ : ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈ ವೇಳೆ ಬಹುತೇಕ ಕಡೆಗಳಲ್ಲಿ ಮಾಂಸ ಮತ್ತು ಕೋಳಿ ಖರೀದಿಸಲು ಮುಗಿಬಿದ್ದ ಘಟನೆಗಳು ನಡೆದವು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ 10 ಗಂಟೆಯೊಳಗೆ ಖರೀದಿ ಮುಗಿಸಬೇಕು ಎನ್ನುವ ಧಾವಂತದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂತು.
ಪೊಲೀಸರ ಮೇಲೆಯೇ ಟಿಟಿ ಚಲಾಯಿಸಲು ಯತ್ನ? : ರಾಮನಗರದಲ್ಲಿ 10 ಗಂಟೆ ನಂತರ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದ ವಾಹನ ಸವಾರರು ಮತ್ತು ಪಾದಚಾರಿಗಳ ಮೇಲೆ ಐಜೂರು ಪೊಲೀಸರು ಲಾಠಿ ಬೀಸಿದ್ದಾರೆ. ಮಾಗಡಿ ರಸ್ತೆಯಲ್ಲಿ ಅವಧಿ ಮೀರಿದ ನಂತರವೂ ತೆರಳುತ್ತಿದ್ದ ಟಿಟಿಯನ್ನು ತಡೆಯಲು ಹೋದ ಪೊಲೀಸರ ಮೇಲೆ ಚಾಲಕ ಟಿಟಿ ಚಲಾಯಿಸಲು ಮುಂದಾಗಿದ್ದಾನೆ. ಈ ವೇಳೆ ತಕ್ಷಣ ವಾಹನ ನಿಲ್ಲಿಸುವಲ್ಲಿ ಯಶಸ್ವಿಯಾದ ಪೊಲೀಸರು ಚಾಲಕನನ್ನು ಕೆಳಗಿಳಿಸಿ ಕರೆದು ಲಾಠಿ ರುಚಿ ತೋರಿಸಿದ್ದಾರೆ.
ಎಚ್ಚರಿಕೆ ಇರಲಿ : ಸರ್ಕಾರ ಘೋಷಣೆ ಮಾಡಿರುವ ವೀಕೆಂಡ್ ಲಾಕ್‌ಡೌನ್ ಸೋಮವಾರ ಬೆಳಗ್ಗೆ 6ಗಂಟೆಗೆ ಅಂತ್ಯವಾಗಲಿದೆ. ಆದರೆ ಜಿಲ್ಲೆಯಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 1200 ಮೀರಿದ್ದು, ಎಚ್ಚರ ತಪ್ಪಿದರೆ ಮತ್ತಷ್ಟು ಅನಾಹುತ ಗ್ಯಾರಂಟಿ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕರ್ಫ್ಯೂ ತೆಗೆದರೂ ಮುನ್ನೆಚ್ಚರಿಕೆವಹಿಸುವುದು ಒಳಿತು. ಅನಗತ್ಯ ಓಡಾಟಕ್ಕೆ ಖುದ್ಧು ಕಡಿವಾಣ ಹಾಕುವ ಜತೆಗೆ, ತಮ್ಮ ಸುತ್ತ ಮುತ್ತಲಿನವರೂ ಸಹ ಓಡಾಡದಂತೆ ಮನವೊಲಿಸುವ ಕೆಲಸ ಮಾಡಬೇಕಿದೆ.
ಹೋಂ ಐಸೋಲೇಷನ್ : ಇನ್ನು ಗಂಭೀರ ಲಕ್ಷಣಗಳಿಲ್ಲದ ಪಾಸಿಟಿವ್ ರೋಗಿಗಳಿಗೆ ಇನ್ನು ಮುಂದೆ ಹೋಂ ಐಸೋಲೇಷನ್ ದೊರೆಯಲಿದೆ. ಈ ಮೊದಲು ಹೋಂ ಐಸೋಲೇಷನ್ ನೀಡಲು ನಿರಾಕರಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗಂಭೀರವಾಗಿ ಸೋಂಕು ಇಲ್ಲದ, ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಬಯಸುವ ಹೈ ರಿಸ್ಕ್ ಇಲ್ಲದವರಿಗೆ ಹೋಂ ಐಸೋಲೇಷನ್ ದೊರೆಯಲಿದ್ದು, ಇವರು ಆರೋಗ್ಯ ಇಲಾಖೆ ಸಿಬ್ಬಂದಿಯ ನಿಗಾದಲ್ಲಿ ಇರಲಿದ್ದಾರೆ.