

ಶನಿವಾರಸಂತೆ: ಸರ್ಕಾರದ ಆದೇಶದಂತೆ ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ತೋಟದ ಲೈನ್‌ಮನೆಯಲ್ಲಿ ಅನೇಕ ವರ್ಷಗಳಿಂದ ವಾಸ ಮಾಡುತ್ತಿದ್ದರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗದಿರುವ ಹಿನ್ನೆಲೆಯಲ್ಲಿ ಅಂತಹವರನ್ನು ಗುರುತಿಸಿ, ಮತದಾರ ಪಟ್ಟಿಗೆ ಸೇರಿಸುವ ಕಾರ್ಯವನ್ನು ಜಿಲ್ಲಾದ್ಯಂತ ಕಂದಾಯ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದಾರೆ.
ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯ ಕಾಫಿ ತೋಟದ ಲೈನ್‌ಮನೆಯಲ್ಲಿ ವಾಸವಾಗಿರುವ ಸ್ಥಳೀಯ ಕಾರ್ಮಿಕರು ಆಧಾರ್ ಕಾರ್ಡ್ ಹೊಂದಿದ್ದು, ಅಕ್ಕಪಕ್ಕದ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರೂ ಮತದಾರ ಪಟ್ಟಿಗೆ ಸೇರ್ಪಡೆಯಾಗಿರಲಿಲ್ಲ. ಹೀಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಮಿಕರು ವಾಸವಾಗಿರುವ ಲೈನ್‌ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ.
ಈ ಸಮೀಕ್ಷಾ ಕಾರ್ಯದಲ್ಲಿ ಕೊಡ್ಲಿಪೇಟೆ ಕಂದಾಯ ಪರಿವೀಕ್ಷಕ ಮನುಕುಮಾರ್ ನೇತೃತ್ವದಲ್ಲಿ ವಿವಿಧ ಗ್ರಾಮ ಆಡಳಿತಾಧಿಕಾರಿಗಳಾದ ಶ್ವೇತಾ, ಎಸ್.ಎಸ್.ಚೈತ್ರ, ಪ್ರಕೃತಿ, ವಿದ್ಯಾ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದಾರೆ.