ಜಿಲ್ಲೆಯಲ್ಲಿ ರೇಷ್ಮೆ ಅಭಿವೃದ್ಧಿಗೆ 15 ಕೋಟಿ ರೂ. ಮಂಜೂರು

Oplus_131072
Oplus_131072
Published on

 ಯಳಂದೂರು: ರೇಷ್ಮೆ ಬೆಳೆಯನ್ನು ಪುನಶ್ಚೇತನಗೊಳಿಸಲು ಸರ್ಕಾರದಿಂದ ಸಿಲ್ಕ್ ರೀಲರ್ ನೀಡಲು 15 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾಹಿತಿ ನೀಡಿದರು.

ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಂಬಳ್ಳಿ ಗ್ರಾಮ ದಿವಂಗತ ಸಿದ್ದಮಾದಯ್ಯ, ಕೆಂಪಮ್ಮ, ಬಿ ಬಸವಯ್ಯ, ಎಸ್ ಜಯಣ್ಣ ಸೇರಿದಂತೆ ಇನ್ನಿತರ ಶಾಸಕರನ್ನು ನೀಡಿದ್ದ ಗ್ರಾಮ. ಈ ಗ್ರಾಮದ ಬಹುತೇಕರು ಸಿಲ್ಕ್ ಫಿಲೇಚರ್‌ಗಳನ್ನು ಅವಲಂಬಿಸಿದ್ದಾರೆ. ಸಿಲ್ಕ್ ರೀಲರ್ ಗಳ ಸಂಘದಲ್ಲಿ ಸುಮಾರು ಒಂದು ಸಾವಿರ ಸದಸ್ಯರಿದ್ದು, 700ರಿಂದ 800 ಮಂದಿ ಪ.ಜಾತಿ, ಪಂಗಡದವರೇ ಇದ್ದಾರೆ. ಇಲ್ಲಿ ರೇಷ್ಮೆ ಕಾರ್ಖಾನೆ ಪುನರಾರಂಭಿಸಿದರೆ 7000 ಕುಟುಂಬಗಳು ಆರ್ಥಿಕವಾಗಿ ಸದೃಢವಾಗಲಿವೆ ಎಂದರು.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ, ಯಳಂದೂರು, ಮಾಂಬಳ್ಳಿ, ಹನೂರು ಭಾಗದಲ್ಲಿ ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರು ಹೆಚ್ಚಾಗಿ ಇರುವುದರಿಂದ ಅವರ ಅಭಿವೃದ್ಧಿಗಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 3600 ಕೋಟಿ ರೂ. ಯೋಜನೆಗಳನ್ನು ರೂಪಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಅನುದಾನದಲ್ಲಿ ಈ ಭಾಗದ ಜನರ ಅನುಕೂಲಕ್ಕಾಗಿ ಅಗತ್ಯವಿರುವ ಸಾಕಷ್ಟು ಯೋಜನೆಗಳನ್ನು ಕೈಗೊಳ್ಳಲಾಗುವುದು. ಸುವರ್ಣಾವತಿ ಜಲಾಶಯ ಅಭಿವೃದ್ಧಿಯಾದರೆ 8000 ಎಕರೆ ನೀರಾವರಿಗೆ ಅನುಕೂಲವಾಗಲಿದೆ. ಈ ಭಾಗದ ಜನರಿಗೆ ನೀರು ಕೊಡುವ ಉದ್ದೇಶದಿಂದ ವಿಸ್ತೃತ ವರದಿ ಸಿದ್ಧಪಡಿಸುಂತೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಹೇಳಿದ್ದೇನೆ. ಇದಲ್ಲದೆ 6 ದೊಡ್ಡ ಕರೆಗಳ ಅಭಿವೃದ್ಧಿಗೆ 50 ಕೋಟಿ ರೂ. ಮಂಜೂರು ಮಾಡಿದೆ.

ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಈ ಗ್ರಾಮಕ್ಕೆ ನಮ್ಮ ತಂದೆ ದಿ.ಬಿ.ರಾಚಯ್ಯ ಅವರ ಕೊಡುಗೆ ಸಾಕಷ್ಟಿದೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಇಲ್ಲಿಗೆ ಪ್ರೌಢಶಾಲೆಯನು,್ನ ಆರೋಗ್ಯ ಸಚಿವರಾಗಿದ್ದಾಗ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ರೇಷ್ಮೆ ಸಚಿವರಾಗಿದ್ದ ವೇಳೆ ಸಿಲ್ಕ್ ಫಿಲೇಚರ್ ಅನ್ನು ಮಂಜೂರು ಮಾಡಿಸಿಕೊಟ್ಟಿದ್ದರು ಎಂದರು.

ಇದಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅದ್ದೂರಿಯಾಗಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮಿಜಿ ಮಾತನಾಡಿದರು.

ಡಿವೈಎಸ್‌ಪಿ ಧರ್ಮೇಂದ್ರ, ಗ್ರಾಪಂ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷೆ ಮುಬಾರಕ್‌ಉನ್ನೀಸಾ, ದೊಡ್ಡ ಯಜಮಾನರಾದ ಬಸವರಾಜುಬುದ್ದಿ, ಮಹಾದೇವು, ಪುರುಷೋತ್ತಮ್, ದಾಸ್, ಶಿವಪ್ರಕಾಶ್, ಪ್ರತಾಪ್, ಶೀಲಾ, ಪರಶಿವಮೂರ್ತಿ, ಎನ್. ಸೋಮಣ್ಣ, ಬಸವರಾಜು, ಪುಟ್ಟಸ್ವಾಮಿ, ನಂಜುಂಡಸ್ವಾಮಿ ಸೇರಿದಂತೆ ಗ್ರಾಮದ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net