

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಬೈಕ್ ರೈಸಿಂಗ್ ಸ್ಪರ್ಧೆ ನಡೆಯುತ್ತಿರುವುದು ಖುಷಿಯ ಸಂಗತಿ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಗಳು ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಮೈದಾನದಲ್ಲಿ ಗಾಡ್‌ಸ್ಪೀಡ್ ಸಂಘಟನೆ ವತಿಯಿಂದ ಭಾನುವಾರ ಆಯೋಜಿಡಿದ್ದ ಎಂಆರ್‌ಎಫ್ ಡರ್ಟ್ ಟ್ರಾೃಕ್ ಎಫ್‌ಎಂಎಸ್‌ಸಿಐ ನ್ಯಾಷನಲ್ ಚಾಂಪಿಯನ್ ಶಿಪ್ ಬೈಕ್ ರೈಡಿಂಗ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೈಕ್ ರೈಡಿಂಗ್ ಸೇರಿ ವಿವಿಧ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲ ಸ್ಪರ್ಧಾಳುಗಳಿಗೆ ಶುಭವಾಗಲಿ ಎಂದು ಹಾರೈಸಿದರು.
ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ.ಗುಡಸಿ, ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಕೋಶ ಪ್ರಧಾನ ಕಾರ್ಯದರ್ಶಿ ಅಲಿ ಗೊರವನಕೊಳ್ಳ, ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ಕೆಪಿಸಿಸಿ ಸಮನ್ವಯಾಧಿಕಾರಿ ಜಿ. ದೇವಕಿ ಯೋಗಾನಂದ, ಮಯೂರ ಮೋರೆ, ವಿಜಯ ಅರೋರಾ, ಮಧುಸೂದನ ಆರ್., ವಿಜಯ ದಂಡಗಿ, ಇತರರು ಇದ್ದರು.