ಜಿಲ್ಲೆಯಲ್ಲಿ ಮುಂದುವರಿದ ವರ್ಷೋಲ್ಲಾಸ; ರೈತರ ಮುಖದಲ್ಲಿ ಮಂದಹಾಸ

Delhi Rain
Published on

ಹಾಸನ: ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಸುರಿಯುತ್ತಿದ್ದು ಸೋಮವಾರ ರಾತ್ರಿ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯಾಗಿದ್ದು, ರೈತರು ನಾಟಿ, ಬಿತ್ತನೆ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಆದರೆ, ಮಲೆನಾಡು ಭಾಗವಾದ ಸಕಲೇಶಪುರ ಭಾಗಕ್ಕೆ ಪೂರ್ವ ಮುಂಗಾರು ಸಮರ್ಪಕವಾಗಿ ಆಗದ ಕಾರಣ ಕಾಫಿ ಬೆಳೆಗಾರರ ಚಿಂತೆಗೆ ಕಾರಣವಾಗಿದೆ.

ಕಳೆದ 24 ಗಂಟೆಯಲ್ಲಿ (ಸೋಮವಾರದಿಂದ ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ) ಜಿಲ್ಲೆಯ ಶ್ರವಣಬೆಳಗೊಳ (33.2 ಮಿ.ಮೀ.), ಚನ್ನರಾಯಪಟ್ಟಣ (28.2 ಮಿ.ಮೀ.) ಮತ್ತು ಹಿರೀಸಾವೆ (26.5 ಮಿ.ಮೀ.) ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉಳಿದಂತೆ ಹಾಸನ, ಅರಸೀಕೆರೆ, ಅರಕಲಗೂಡು, ಬೇಲೂರು, ಆಲೂರು ತಾಲೂಕಿನಲ್ಲೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಆದರೆ, ಹೊಳೆನರಸೀಪುರ ಮತ್ತು ಸಕಲೇಶಪುರ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ತಂಬಾಕು, ಭತ್ತ, ರಾಗಿ ಮುಸುಕಿನ ಜೋಳದ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಪ್ರಸ್ತುತ 1,920 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಭೂಮಿ ಸಿದ್ಧತೆ ಮತ್ತು ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಪ್ರಸ್ತುತ ರೈತ ಸಂಪರ್ಕ ಕೇಂದ್ರ, ಕೆಎಸ್‌ಎಸ್‌ಸಿ, ಎನ್‌ಎಸ್‌ಸಿಗಳಲ್ಲಿ ಭತ್ತ 5,712 ಕ್ವಿಂಟಾಲ್, ರಾಗಿ 3,360 ಕ್ವಿಂಟಾಲ್, ಮುಸುಕಿನ ಜೋಳ 240 ಕ್ವಿಂಟಾಲ್, ಹೆಸರು 186 ಕ್ವಿಂಟಾಲ್, ಅಲಸಂದೆ 434 ಕ್ವಿಂಟಾಲ್, ಉದ್ದು 32 ಕ್ವಿಂಟಾಲ್, ತೊಗರಿ 16 ಕ್ವಿಂಟಾಲ್, ಸೂರ್ಯಕಾಂತಿ 10 ಕ್ವಿಂಟಾಲ್ ಉಳಿದಂತೆ ಬೇಡಿಕೆ ಅನುಸಾರ ರೈತ ಸಂಪರ್ಕ ಕೇಂದ್ರ, ಕೆಎಸ್‌ಎಸ್‌ಸಿ, ಎನ್‌ಎಸ್‌ಸಿಗಳಲ್ಲಿ ಒಟ್ಟು 10,122 ಕ್ವಿಂಟಾಲ್ ಬಿತ್ತನೆ ಬೀಜಗಳ ದಾಸ್ತಾನಿದೆ. ಹಾಗೆಯೇ ಹಂಗಾಮಿಗೆ 1,38,683 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, ಅಷ್ಟು ಪ್ರಮಾಣದ ರಸಗೊಬ್ಬರ ಸಂಗ್ರಹ ಮಾಡಲಾಗಿದೆ.

ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ಜಿಲ್ಲೆಯಲ್ಲಿ ಕೃಷಿ ವಟುವಟಿಕೆ ಬಿರುಸು ಪಡೆದುಕೊಂಡಿತ್ತು. ಹೀಗಾಗಿ ರೈತರು ತಂಬಾಕು ಮಡಿಗಳನ್ನು ಬೆಳೆಸಿ ಕೆಲವರು ನಾಟಿಯನ್ನು ಮಾಡಿದ್ದರು. ಇನ್ನು ಹಲವರು ನಾಟಿಗಾಗಿ ಮಳೆಗಾಗಿ ಕಾಯುತ್ತಿದ್ದರು. ಕಳೆದ ಒಂದು ವಾರದಲ್ಲಿ ಎರಡು ಮೂರು ಮಳೆಯಾಗಿರುವ ಕಾರಣ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಹಾಗೆಯೇ ಈಗಾಗಲೇ ಬಹುತೇಕ ಜಿಲ್ಲೆಯ ಎಲ್ಲೆಡೆ ಶುಂಠಿ ನಾಟಿ ಮಾಡಲಾಗಿದ್ದು, ಮಳೆಗಾಗಿ ರೈತರು ಕಾಯುತ್ತಿದ್ದರು. ಇದೀಗ ಸುರಿದ ಮಳೆಯಿಂದ ಶುಂಠಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಈ ವರ್ಷ ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದರಿಂದ ಉತ್ತಮ ಫಸಲು ಬೆಳೆದು ಲಾಭದ ನಿರೀಕ್ಷೆಯಲ್ಲಿ ರೈತರಿದ್ದಾರೆ. ಕಳೆದ ಬಾರಿ ಬೇಸಿಗೆಯಲ್ಲಿ ಮಳೆಯಾಗದ ಕಾರಣ ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿತ್ತು. ಆದರೆ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಗೂ ಜಾನುವಾರು ಮೇವಿಗೆ ಯಾವುದೇ ತೊಂದರೆ ಎದುರಾಗಿಲ್ಲ.

ಮಳೆಯಿಂದಾಗಿ ಕೆಲವೆಡೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಿವೆ. ಸೋಮವಾರ ಸಂಜೆ ಬೇಲೂರಿನಲ್ಲಿ ಸುರಿದ ಮಳೆಗೆ ದೇವಾಲಯದ ಮುಖ್ಯ ರಸ್ತೆಯ ಚರಂಡಿಯ ತುಂಬಿ ನೀರು ರಸ್ತೆಯ ಮೇಲೆ ಹರಿಯಿತು. ಮುಂದಿನ ತಿಂಗಳಿಂದ ಮಹಾಮಳೆ ಶುರುವಾಗಲಿದೆ. ಈಗಲಾದರೂ ದೇವಾಲಯದ ಮುಖ್ಯ ರಸ್ತೆಯ ಚರಂಡಿ ಕೆಲಸವನ್ನು ಮಾಡಿಸಿ ಎಂದು ಬೇಲೂರಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net