ಜಿಲ್ಲೆಯಲ್ಲಿ ಮುಂದುವರಿದ ಮಳೆ ರಗಳೆ : ತುಮಕೂರಿನ ಅಮಾನಿಕೆರೆ, ಕಡಬ, ಇರಕಸಂದ್ರ ಕೆರೆ ಕೋಡಿ

Kuripalya (2)
Published on

ತುಮಕೂರು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, 19 ವರ್ಷದ ಬಳಿಕ ತುಮಕೂರಿನ ಅಮಾನಿಕೆರೆ, ಗುಬ್ಬಿ ತಾಲೂಕು ಕಡಬ, 5 ವರ್ಷದ ನಂತರ ಕೊರಟಗೆರೆಯ ಇರಕಸಂದ್ರ ಕೆರೆ ಸೇರಿ ಜಿಲ್ಲೆಯ ಬಹುತೇಕ ಕೆರೆಗಳು ಕೋಡಿ ಹರಿದಿವೆ. ಗುರುವಾರ ಇಡೀ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ತುಮಕೂರು ನಗರ ತತ್ತರಿಸಿದೆ.

ಗುಬ್ಬಿ ತಾಲೂಕು ವರಹಸಂದ್ರದಲ್ಲಿ ತಾಯಿ ಜತೆ ಕಟ್ಟೆಯ ಬಳಿ ತೆರಳಿದ್ದ ಇಬ್ಬರು ಬಾಲಕಿರು ಕಾಲುಜಾರಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಗುಬ್ಬಿಯಲ್ಲಿ ವಾಸವಿದ್ದ ಅಲೆಮಾರಿ ಕುಟುಂಬಗಳು ವಾಸವಿರುವ ಟೆಂಟ್‌ಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ದೇವರಾಯದುರ್ಗ ಯೋಗನರಸಿಂಹಸ್ವಾಮಿ ಬೆಟ್ಟದಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. ಕೊರಟಗೆರೆ ತಾಲೂಕು ಮಲ್ಲಪ್ಪನಹಳ್ಳಿಯಲ್ಲಿ ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಕೊಚ್ಚಿಹೋಗಿದೆ.

ಇರಕಸಂದ್ರ ಕೆರೆಯಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಸುತ್ತಿದ್ದ ಜಾಗಕ್ಕೆ ನೀರು ಬಂದಿದ್ದು ಸಂಪೂರ್ಣ ಜಲಾವೃತವಾಗಿದೆ. ಕಾರ್ಮಿಕರು ತಂಗಿದ್ದ ಟೆಂಟ್ ಸಂಪೂರ್ಣ ಜಲಾವೃತವಾಗಿದ್ದು, ಕಾರ್ಮಿಕರನ್ನು ರಕ್ಷಿಸಲಾಗಿದೆ.

ಜಿಲ್ಲೆಯಲ್ಲಿಯೇ ಅತೀ ಹೆಚ್ಚು 200ಮಿಮೀ ಮಳೆ ಗುಬ್ಬಿ ತಾಲೂಕು ಅಮ್ಮನಘಟ್ಟದಲ್ಲಿ ಸುರಿದಿದೆ. ಮೂಕನಾಯಕನಕೋಟೆಯಲ್ಲಿ 170 ಮಿಮೀ ಹಾಗೂ ಎಂ.ಎಚ್.ಪಟ್ಟಣದಲ್ಲಿ 160 ಮಿಮೀ ಮಳೆಯಾಗಿರುವುದು ದಾಖಲೆ ಎನಿಸಿದೆ. ಹೇಮಾವತಿ ನೀರಿನಿಂದ ಭರ್ತಿಯಾಗಿದ್ದ ತಾಲೂಕಿನಲ್ಲಿ ಮಳೆ ಹೆಚ್ಚಾಗಿರುವುದು ಜಲಪ್ರವಾಹವನ್ನೇ ಸೃಷ್ಟಿಸಿದೆ. ಅರಿವೆಸಂದ್ರ ಕೆರೆ ಒಡೆದು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿದೆ.

ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಹುಟ್ಟಿ ತೀತಾ ಜಲಾಶಯ ಮಾರ್ಗವಾಗಿ ಹರಿಯುವ ಜಯಮಂಗಲಿ ಎರಡು ದಶಕದ ನಂತರ ಹರಿಯಲಾರಂಭಿಸಿದೆ, ಕೊರಟಗೆರೆ, ಮಧುಗಿರಿ, ಪಾವಗಡ ತಾಲೂಕಿನಲ್ಲಿ ನದಿ ಹರಿಯುತ್ತಿದ್ದು ಮಾರ್ಗಮಧ್ಯೆಯ ಎಲ್ಲ ಕೆರೆಗಳು ತುಂಬಿವೆ. ತುಮಕೂರು ನಗರದ ಸದಾಶಿವನಗರ, ಕೋತಿತೋಪು, ಆರ್.ಟಿ.ನಗರದಲ್ಲಿ ಆಳುದ್ದದ ನೀರು ನಿಂತಿದ್ದು ಜನರು ಪರದಾಡಿದರು.

ತುಮಕೂರು ತಾಲೂಕು ಅರಕೆರೆ ಸಮೀಪದ ಮಲ್ಲೇನಹಳ್ಳಿಯ ಶಿವಕುಮಾರ್ ಎಂಬುವವರ ಕೋಳಿ ಫಾರಂಗೆ ನೀರು ನುಗ್ಗಿದ್ದು ಆರು ಸಾವಿರ ಕೋಳಿಹಳು ಸಾವಿಗೀಡಾಗಿವೆ.

ಅಮ್ಮನಘಟ್ಟದಲ್ಲಿ 2ಸೆಮೀ ಮಳೆ...: ಚಿಕ್ಕನಾಯಕನಹಳ್ಳಿ ತಾಲೂಕು ಸಿಂಗದಹಳ್ಳಿ 91ಮಿಮೀ, ಮತಿಘಟ್ಟ 60.5, ಬೋರನಕಣಿವೆ 60.4, ಶೆಟ್ಟಿಕೆರೆ 40.2, ಹುಳಿಯಾರು 68.2, ದೊಡ್ಡಎಣ್ಣೆಗೆರೆ 20.4ಮಿಮೀ ಮಳೆಯಾಗಿದೆ. ಕೊರಟಗೆರೆಯಲ್ಲಿ 80ಮಿಮೀ, ತುಂಬಾಡಿ 50, ಹೊಳವನಹಳ್ಳಿ 56.2, ಮಾವತ್ತೂರು 80.3, ಇರಕಸಂದ್ರಕಾಲನಿ 92.2, ಕೋಳಾಲ 72.2 ಹಾಗೂ ತೋವಿನಕೆರೆಯಲ್ಲಿ 88.6ಮಿಮೀ ಮಳೆಯಾಗಿದೆ.

ಪಾವಗಡ 67, ನಾಗಲಮಡಿಕೆ 86.2, ಅರಸೀಕೆರೆ 60, ವೈ.ಎನ್.ಹೊಸಕೋಟೆ 74ಮಿಮೀ ಮಳೆಯಾಗಿದೆ, ತಿಪಟೂರು 51.1, ಹಾಲ್ಕುರಿಕೆ 58, ಹೊನ್ನವಳ್ಳಿ 47.1, ನೊಣವಿನಕೆರೆ 60.2ಮಿಮೀ ಮಳೆಯಾಗಿದೆ. ತುರುವೇಕೆರೆ 100.6ಮಿಮೀ, ದಂಡಿನಶಿವರ 128.4, ಮಾಯಸಂದ್ರ 39, ದಬ್ಬೇಘಟ್ಟ 29.6, ಸಂಪಿಗೆ 54ಮಿಮೀ ಮಳೆ ಸುರಿದಿದೆ.

ಕುಣಿಗಲ್ 36.2, ಹುಲಿಯೂರುದುರ್ಗ 28, ಮಾರ್ಕೋನಹಳ್ಳಿ 25, ಅಮೃತೂರು 31.6, ಕೆ.ವನಮಾಚನಹಳ್ಳಿ23 ಹಾಗೂ ನಿಡಸಾಲೆಯಲ್ಲಿ 25.8ಮಿಮೀ ಮಳೆಯಾಗಿದೆ. ತುಮಕೂರು 148.8, ಹೆಬ್ಬೂರು 42.6, ಬೆಳ್ಳಾವಿ 83.6, ಊರ್ಡಿಗೆರೆ 25.1, ಹಿರೇಹಳ್ಳಿ 86.8, ನೆಲಹಾಲ್ 53.2ಮಿಮೀ ಮಳೆಯಾಗಿದೆ.

ಮಧುಗಿರಿ 82, ಮಿಡಿಗೇಶಿ 20, ಬ್ಯಾಲ್ಯ 66.3, ಕೆ.ಜಿ.ಹಳ್ಳಿ 36.3, ಐ.ಡಿ.ಹಳ್ಳಿ 42.2, ಬಡುವನಹಳ್ಳಿ 65, ಶಿರಾ 62.6, ಚಿಕ್ಕನಹಳ್ಳಿ 102, ಕಳ್ಳಂಬೆಳ್ಳ 86.2, ಬುಕ್ಕಾಪಟ್ಟಣ 52.4, ಬರಗೂರು 65.6, ಹುಣುಸೆಹಳ್ಳಿ 44.8 ಹಾಹೂ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆ ಸುರಿದಿರುವ ಗುಬ್ಬಿ 105.2, ಅಮ್ಮನಘಟ್ಟ 200ಮಿಮೀ, ಚೇಳೂರು 105, ನಿಟ್ಟೂರು 115.3, ಸಿ.ಎಸ್.ಪುರ 36, ಹಾಗಲವಾಡಿ 113, ಕಡಬ 75.8 ಹಾಗೂ ಅಂಕಸಂದ್ರದಲ್ಲಿ 94ಮಿಮೀಯಾಗಿದೆ.

ಕೊಚ್ಚಿ ಹೋದ ಬೈಕ್  ಕೊರಟಗೆರೆ ತಾಲೂಕು ಮಲ್ಲಪ್ಪನಹಳ್ಳಿಯಲ್ಲಿ ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಶುಕ್ರವಾರ ಬೈಕ್ ಕೊಚ್ಚಿಹೋಗಿದೆ.

ಕುರುಡುಗಾನಹಳ್ಳಿಯ ಶಿಕ್ಷಕ ನಾಗರಾಜಪ್ಪ ಅವರ ಮಗ ಬೈಚೇಗೌಡ ಅವರ ಬೈಕ್ ನೀರಿನ ರಭಸಕ್ಕೆ ಬಿದ್ದಿದ್ದು ಸ್ಥಳೀಯ ಇಬ್ಬರು ಯುವಕರು ಸಹಾಯ ಮಾಡಿ ಬೈಕ್ ರಕ್ಷಣೆ ಮಾಡಲು ಮುಂದಾದರೂ ನೀರಿನಲ್ಲಿ ಕೊಚ್ಚಿ ಹೋಯಿತು. ನಂತರ ಸ್ಥಳೀಯರಾದ ಕುಮಾರ್ ಮತ್ತು ತಂಡ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಅನ್ನು ನೀರಿಗಿಳಿದು ಹಗ್ಗಗಳ ಸಹಾಯದಿಂದ ಮೇಲೆತ್ತಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net