

ಬೆಂಗಳೂರು ಗ್ರಾಮಾಂತರ : ಜಿಲ್ಲೆಯಲ್ಲಿ ಮಾತೃವಂದನಾ ಯೋಜನೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಲಾಕ್‌ಡೌನ್ ಸಂದರ್ಭದಲ್ಲೂ ಫಲಾನುಭವಿಗಳಿಗೆ ಯೋಜನೆ ತಲುಪಿಸುವಲ್ಲಿ ಹಿಂದೆ ಬಿದ್ದಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿತ್ತು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ನಿಟ್ಟಿನಲ್ಲಿ ಯಶಕಂಡಿದೆ. ಈ ಯೋಜನೆಯಡಿ ಯಾವುದೇ ಫಲಾನುಭವಿ ವಂಚಿತರಾಗದಂತೆ ಕಾರ್ಯೋನ್ಮುಖರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಶೇ.117 ಸಾಧನೆ : ಪ್ರಸ್ತುತ ವರ್ಷದಲ್ಲಿ 6504 ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ತಲುಪಿಸುವ ಗುರಿ ನಿಗದಿಪಡಿಸಲಾಗಿತ್ತು. ಆಗಸ್ಟ್ ಅಂತ್ಯದವರೆಗೆ ಒಟ್ಟು 3179 ಗರ್ಭಿಣಿಯರನ್ನು ಗುರುತಿಸಿ, ಸೌಲಭ್ಯ ತಲುಪುವಂತೆ ಮಾಡಲಾಗಿದೆ. ಯೋಜನೆಯಡಿ ಶೇ.117 ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತ್ಯೇಕ ನೋಂದಣಿ ಶಿಬಿರ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ.ಪುಷ್ಪಾ ರಾಯರ್ ಮಾತನಾಡಿ, ಫಲಾನುಭವಿಗಳ ಬ್ಯಾಂಕ್ ಅಕೌಂಟ್, ಆಧಾರ್ ನೋಂದಣಿಯಾಗದಿದ್ದರೆ ಅಂತಹವರಿಗೆ ಪ್ರತ್ಯೇಕವಾಗಿ ಶಿಬಿರ ಕೈಗೊಳ್ಳಲಾಗುವುದು, ಆಧಾರ್ ನೋಂದಣಿ ಕೇಂದ್ರಗಳಲ್ಲಿ ಮಾತೃವಂದನಾ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
ತ್ವರಿತ ಸಹಾಯಧನ ವರ್ಗಾವಣೆ : ಯೋಜನೆಯ ನೋಂದಾಯಿತ ಫಲಾನುಭವಿಗಳಿಗೆ 3 ಕಂತುಗಳಲ್ಲಿ ವರ್ಗಾಯಿಸಬೇಕಿರುವ ಸಹಾಯಧನ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಬೇಕು. ಈ ವಿಷಯದಲ್ಲಿ ಅನಗತ್ಯ ವಿಳಂಬ ಮಾಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಡಿಸಿ ತಾಕೀತು ಮಾಡಿದರು.
ಮೊದಲ ಹಂತದ ಸಹಾಯಧನ ಪಡೆದ ಫಲಾನುಭವಿಗಳು ಎರಡನೇ ಹಂತದ ಸಹಾಯಧನ ಪಡೆಯಲು ಆರೋಗ್ಯ ತಪಾಸಣೆ ಮಾಡಿಸಿ ಅಂಗನವಾಡಿಗಳಲ್ಲಿ ನೀಡಿದಾಗ ಹಣ ಬಿಡುಗಡೆಯಾಗಲಿದೆ. ಮಗುವಿನ ಜನನ ನೋಂದಣಿ, ಮೊದಲ ಹಂತದ ಚುಚ್ಚುಮದ್ದು ಹಾಗೂ ಲಸಿಕೆ ನಂತರದಲ್ಲಿ ಮೂರನೇ ಕಂತಿನ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ. ಲಾನುಭವಿಗಳು ಮೂರು ಹಂತದ ಸಹಾಯಧನ ಪಡೆಯಲು ಅಂಗನವಾಡಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು. ಫಲಾನುಭವಿಗಳಿಗೆ ಈ ಬಗ್ಗೆ ಸಿಬ್ಬಂದಿ ಸಮರ್ಪಕ ಮಾಹಿತಿ ನೀಡಬೇಕು, ಜತೆಗೆ ಈ ಯೋಜನೆ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಬೇಕು ಎಂದು ತಿಳಿಸಿದರು.