

ಹಾಸನ: ಮುಂಬರುವ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಾಸನ ಲೋಕಸಭೆಗೆ ಎರಡನೇ ಹಂತದಲ್ಲಿ ಏ.26ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಈ ಬಾರಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರಿಗೆ ಹೆಚ್ಚಿರುವುದು ಖುಷಿಯ ವಿಚಾರ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 7ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಇಲ್ಲಿ ಪುರುಷ ಮತದಾರರು 8,58,661 ಹಾಗೂ ಮಹಿಳಾ ಮತದಾರರು 8,66,206, ಇತರೆ 41 ಜನರು ಸೇರಿ ಒಟ್ಟು 17,24,908 ಮತದಾರರು ಇದ್ದಾರೆ. ಮಾ.28 ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ನಂತರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏ.4ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏ.5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.8 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಏ.26 ರಂದು ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆದು, ಜೂ.6ಕ್ಕೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 2221 ಬೂತ್‌ಗಳನ್ನು ರಚಿಸಲಾಗುವುದು. ಹಾಸನ ಜಿಲ್ಲೆಯಲ್ಲಿ 22 ಚೆಕ್ ಪೋಸ್ಟ್ ಹಾಗೂ ಕಡೂರು ಭಾಗದಲ್ಲಿ 6 ಸೇರಿ ಒಟ್ಟು 28 ಚೆಕ್‌ಪೋಸ್ಟ್ ತೆರೆಯಲಾಗುವುದು. ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಈ ಕ್ಷಣದಿಂದಲೇ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ವಿಧಾನಸಭೆ ಕ್ಷೇತ್ರಗಳ ಹಂತದಲ್ಲಿ ಚುನಾವಣಾ ನೋಡಲ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ತಂಡಗಳು, ಜಿಲ್ಲೆಯ ಗಡಿ ಭಾಗಗಳಲ್ಲಿ ವಿಚಕ್ಷಣಾ ದಳಗಳನ್ನು ನೇಮಿಸಲಾಗಿದೆ ಎಂದರು.
ರಾಜಕೀಯ ಪಕ್ಷಗಳು ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸಲು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳ ಹಂತದಲ್ಲೇ ಅನುಮತಿಯನ್ನು ಪಡೆದುಕೊಳ್ಳಬೇಕಾಗಿದೆ. ಹಾಗೂ ಸಮಾರಂಭಗಳಿಗೆ ಜಾಗಗಳ ಅನುಮತಿ ಪಡೆಯಲು ಸುವಿಧ ಆ್ಯಪ್‌ನಲ್ಲಿ ಮೊದಲು ನೋಂದಾಯಿಸಿಕೊಳ್ಳಬೇಕು. ಮೊದಲು ನೋಂದಾಯಿಸಿಕೊಂಡವರಿಗೆ ಆದ್ಯತೆ ಮೇಲೆ ಜಾಗವನ್ನು ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಚುನಾವಣಾ ಪ್ರಚಾರಕ್ಕಾಗಿ ವಾಹನ ಬಳಕೆ ಹಾಗು ಹೆಲಿಕಾಪ್ಟರ್ ಲ್ಯಾಂಡಿಂಗ್ ಅನುಮತಿಯನ್ನು ಜಿಲ್ಲಾ ಚುನಾವಣಾಧಿಕಾರಿ ಹಂತದಲ್ಲಿ ಪಡೆದುಕೊಳ್ಳಬೇಕಿದೆ. ಮತದಾರರು ಮಾಹಿತಿಗಾಗಿ 1950 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿಗೆ 95 ಲಕ್ಷ ರೂ. ನಿಗದಿ
ಲೋಕಸಭಾ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ 95 ಲಕ್ಷ ರೂ. ನಿಗದಿ ಮಾಡಲಾಗಿದೆ. ಇಂದಿನಿಂದ ಪ್ರತಿ ಅಭ್ಯರ್ಥಿಯ ಖರ್ಚು ವೆಚ್ಚಗಳನ್ನು ಲೆಕ್ಕ ಇಡಲಾಗುವುದು. ನಿಗದಿತ ಹಣಕ್ಕಿಂತ ಹೆಚ್ಚಿನ ಖರ್ಚು ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಜತೆಗೆ ಸಾರ್ವಜನಿಕರು 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಕೊಂಡೊಯ್ಯುವಂತಿಲ್ಲ. ಒಂದು ಹೆಚ್ಚಿನ ಹಣ ಕೊಂಡೊಯ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ತೋರಿಸಬೇಕು. ಇಲ್ಲದಿದ್ದಲ್ಲಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚು ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಕಳೆದ 2019ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.75.16 ಮತದಾನವಾಗಿತ್ತು. ಈ ಬಾರಿ ಶೇ. 82ರಷ್ಟು ಮತದಾನ ಗುರಿ ಹೊಂದಲಾಗಿದೆ ಎಂದು ಹೇಳಿದರು
ಮತಗಟ್ಟೆ ವ್ಯಾಪ್ತಿಯಲ್ಲಿ ಕರಪತ್ರ, ಬೀದಿ ನಾಟಕ, ಕೋಲಾಟ ಹಾಗೂ ಇನ್ನಿತರೆ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಅಲ್ಲದೆ, ಪ್ರತಿಯೊಬ್ಬರೂ ಮತದಾನ ಮಾಡುವ ನೆಟ್ಟಿನಲ್ಲಿ ಸ್ವಿಪ್ ಸಮಿತಿಯಿಂದ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ಮನೆಯ ಬಾಗಿಲಿಗೆ ಮತದಾನ ದಿನಾಂಕವಾದ ಏ.26ರ ಸ್ಟಿಕ್ಕರ್ ಅಂಟಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ ಮಾತನಾಡಿ, ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿ ಲೋಪವಾಗದಂತೆ 2500 ಹೆಚ್ಚು ಸಿಬ್ಬಂದಿ ನೇಮಕ ಮಾಡಲಾಗುವುದು. ಅಲ್ಲದೆ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಮತ್ತು ಈಗಾಗಲೇ ಒಂದು ಸಿಆರ್‌ಪಿಎಫ್ ತುಕಡಿ ಆಗಮಿಸಿದ್ದು, ಹೆಚ್ಚಿನ ಬಂದೋಬಸ್ತ್‌ಗೆ ಇನ್ನು ಹಲವು ತುಕಡಿಗಳು ಆಗಮಿಸಲಿವೆ ಎಂದು ಹೇಳಿದರು.
ಇದೇ ವೇಳೆ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.