

ಬೆಳಗಾವಿ/ಮೂಡಲಗಿ: ಮಹಾರಾಷ್ಟ್ರದಲ್ಲಿ ಹಾಗೂ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಮೂಡಲಗಿ ತಾಲೂಕಿನ ಸುಣಧೋಳಿ, ಕಮಲದಿನ್ನಿ, ಅವರಾದಿ ಸೇತುವೆಗಳು ಬುಧವಾರ ಮುಳುಗಡೆಯಾಗಿವೆ.
ಮಳೆಯ ಪ್ರಮಾಣ ಹೆಚ್ಚಾದರೆ ಗುರುವಾರದ ವೇಳೆಗೆ ಹುಣಶ್ಯಾಳ ಪಿ.ವೈ., ಢವಳೇಶ್ವರ ಸೇತುವೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಜನರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಹಸೀಲ್ದಾರ್ ಡಿ.ಜಿ. ಮಹಾತ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಶುರುವಾದ ವರ್ಷಧಾರೆ ನಿರಂತರ ಸುರಿಯುತ್ತಲೇ ಇದೆ. ಹೀಗಾಗಿ ನದಿಗಳು, ಹಳ್ಳ-ಕೊಳ್ಳಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಮಳೆ ಹೀಗೆಯೇ ಸುರಿಯುತ್ತಿದ್ದರೆ ಮಳೆಗಾಲದ ಆರಂಭದಲ್ಲಿಯೇ ಪ್ರವಾಹ ಉಂಟಾಗುವ ಸಾಧ್ಯತೆಯಿದೆ.
ಎನ್‌ಡಿಆರ್‌ಎಫ್ ತಂಡ: ಬೆಳಗಾವಿಯಲ್ಲಿ ಬುಧವಾರವೂ ಮಳೆ ಅಬ್ಬರ ಮುಂದುವರಿದಿದ್ದರಿಂದ ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಹೀಗಾಗಿ ನದಿ ತಟದ ಪ್ರದೇಶಗಳಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, 21 ಸೈನಿಕರಿರುವ ಎನ್‌ಡಿಆರ್‌ಎಫ್ ತಂಡ ಜಿಲ್ಲೆಗೆ ಆಗಮಿಸಿದೆ.
ಒಳ ಹರಿವು ಹೆಚ್ಚಳ: ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಸೇರುವ ನೀರಿನ ಪ್ರಮಾಣ ಏರುತ್ತಲೇ ಇದೆ. ರಾಜಾಪುರ ಜಲಾಶಯದಲ್ಲೂ ಒಳಹರಿವು ಹೆಚ್ಚುತ್ತಲಿದೆ. ಹಿಡಕಲ್ ಜಲಾಶಯದಲ್ಲಿ 24 ಗಂಟೆಗಳಲ್ಲಿ 7,558 ಕ್ಯೂಸೆಕ್ ನೀರು ಒಳಹರಿವು ಬಂದಿದೆ. ಬೆಳಗಾವಿ, ಗೋಕಾಕ, ಮೂಡಲಗಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಕಿತ್ತೂರು ಬುಧವಾರ ವರುಣ ಅಬ್ಬರಿಸಿದ್ದು, ಕೆಲವೆಡೆ ವಿದ್ಯುತ್ ಕಂಬ ಉರುಳಿ ಬಿದ್ದಿವೆ. ನಿರಂತರ ಮಳೆಯಿಂದಾಗಿ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗೂ ತೊಂದರೆಯಾಗಿದೆ.
ಕಳೆದ ವರ್ಷ ಪ್ರವಾಹ ಎದುರಿಸಿದ್ದ ಜಿಲ್ಲೆಯ 377 ಹಳ್ಳಿಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜಿಲ್ಲಾ, ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಪರಿಹಾರ ಕೇಂದ್ರ, ಗೋ ಶಾಲೆ ಆರಂಭಿಸಲು ಸ್ಥಳ ಗುರುತಿಸಲಾಗಿದೆ. ಎನ್‌ಡಿಆರ್‌ಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ಸದ್ಯ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ್ದರೂ ಯಾವುದೇ ಅಪಾಯ ಇಲ್ಲ. ಆದರೂ ಮಳೆ ಹೆಚ್ಚಾಗಿ ಪ್ರವಾಹ ಸಂಭವಿಸಿದರೆ ಅದನ್ನು ಸೂಕ್ತವಾಗಿ ಎದುರಿಸುವ ಕುರಿತು ಎಲ್ಲ ಅಧಿಕಾರಿಗಳ ಸಭೆ ನಡೆಸಿ ಕ್ರಮ ವಹಿಸಲು ಈಗಾಗಲೇ ಸೂಚಿಸಲಾಗಿದೆ.
ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ