ಜಿಲ್ಲೆಯಲ್ಲಿ ಮನೆ-ಮನೆಗೆ ಪೊಲೀಸ್

22rajesh2
Published on

ಚಾಮರಾಜನಗರ: ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರ ಕಲ್ಪನೆಯ ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ನಗರದ ಸಿದ್ಧಾರ್ಥ ಬಡಾವಣೆಯ ಶ್ರೀಸಾಯಿಬಾಬಾ ಮಂದಿರದ ಮುಂಭಾಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು 26ನೇ ವಾರ್ಡ್‌ನ ಕ್ಲಸ್ಟರ್ ಸಿಬ್ಬಂದಿಗಳನ್ನು ಪರಿಚಯಿಸಿದರು. ವಾರ್ಡ್‌ನ ಮನೆಮನೆಗಳಿಗೂ ತೆರಳಿ ಬೀಟ್ ಸಿಬ್ಬಂದಿಗಳ ಮಾಹಿತಿಯನ್ನು ಒಳಗೊಂಡ ಸ್ಟಿಕ್ಕರ್ ಅಂಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಗೃಹ ಸಚಿವರು ಮತ್ತು ಪೊಲೀಸ್ ಮಹಾನಿರ್ದೇಶಕರ ಕಲ್ಪನೆಯ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಪೊಲೀಸ್ ಸೇವೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವುದು ಇದರ ಉದ್ದೇಶವಾಗಿದೆ. ಇಂದಿಗೂ ಹೆಚ್ಚಿನ ಜನರು ಪೊಲೀಸ್ ಠಾಣೆಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಈ ಕಾರ್ಯಕ್ರಮದ ಮೂಲಕ ಪೊಲೀಸರೆ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಸಾರ್ವಜನಿಕರಿಂದ ಅಗತ್ಯವಾದ ಸಲಹೆಗಳನ್ನು ಪಡೆಯಲಿದ್ದಾರೆ ಎಂದು ಹೇಳಿದರು.

ನಗರದ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುವುದರಿಂದಲೇ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ. ಸಾರ್ವಜನಿಕರ ಒಡನಾಟ ಪೊಲೀಸರೊಂದಿಗೆ ಉತ್ತಮವಾಗಿ ಇರುವಂತೆ ನೋಡಿಕೊಳ್ಳಲು ಇದು ಸಹಕಾರಿಯಾಗಿದೆ. ಜತೆಗೆ ತಿಂಗಳ 2ನೇ ಶನಿವಾರ ಸಾರ್ವಜನಿಕ ಸಂಪರ್ಕ ಸಭೆಯನ್ನು ನಡೆಸುವ ಮೂಲಕ ಬೀಟ್ ಮಟ್ಟದಲ್ಲಿಯೇ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್ ಮಾತನಾಡಿ, ಸಾರ್ವಜನಿಕರು ರಾತ್ರಿಯ ವೇಳೆಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡುವಂತ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದೆ. ಇದು ಪ್ರಕರಣಗಳು ಸಂಭವಿಸುವ ಮುನ್ನವೇ ತಡೆಯುವ ಪ್ರಯತ್ನವಾಗಿದೆ. ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವುದು ಇದರ ಉದ್ದೇಶವಾಗಿದೆ ಎಂದರು.

ನಗರಸಭಾ ಸದಸ್ಯೆ ಕುಮುದಾ ಕೇಶವಮೂರ್ತಿ ಮಾತನಾಡಿ, ಇತ್ತೀಚಿಗೆ ಹೊರ ರಾಜ್ಯಗಳಿಂದ ಜನರು ಹೆಚ್ಚಾಗಿ ಬಾಡಿಗೆಗೆ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರನ್ನು ನಂಬುವುದು, ಬಿಡುವುದು ಎಂದು ಗೊತ್ತಾಗುವುದಿಲ್ಲ. ವಾರ್ಡ್‌ನ ಉದ್ಯಾನವನ ಮತ್ತು ಇನ್ನಿತರೆ ಕಡೆಗಳಲ್ಲಿ ಅನುಚಿತ ವರ್ತನೆಗಳು ನಡೆಯುತ್ತಿರುತ್ತದೆ. ಈ ಸಂಬಂಧ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದಾಗ ತಕ್ಷಣಕ್ಕೆ ಸ್ಪಂದಿಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಡಿವೈಎಸ್ಪಿ ಧರ್ಮೆಂದ್ರ, ಬೀಟ್ ಮುಖ್ಯಸ್ಥರಾದ ಮಮತಾ ಮಹದೇವಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.

ಈ ಮೊದಲು ವಾರ್ಡ್‌ನಲ್ಲಿ ಹೆಚ್ಚು ಕಳ್ಳತನವಾಗುತ್ತಿತ್ತು. ಆಗ ಮಾತ್ರ ಪೊಲೀಸರು ಗಸ್ತು ಹಾಕುತ್ತಿದ್ದರು. ಆದರೇ ಈಗ ಅದು ಬದಲಾಗಿದೆ. ಪೊಲೀಸ್‌ನವರು ಹೆಚ್ಚಾಗಿ ಗಸ್ತು ತಿರುಗುತ್ತಿದ್ದಾರೆ. ಪೊಲೀಸ್‌ನವರು ಗಸ್ತು ತಿರುಗುತ್ತಿದ್ದಾರೆ ಎಂದು ಸಾರ್ವಜನಿಕರು ನಿರ್ಲಕ್ಷ್ಯ ಮಾಡುವುದು ಬೇಡ. ಸಾರ್ವಜನಿಕರು ಕೂಡ ಅಗತ್ಯ ಎಚ್ಚರಿಕೆ ವಹಿಸಬೇಕಿದೆ.

-ಗುರುಸ್ವಾಮಿ, ಬೀಟ್ ಮುಖ್ಯಸ್ಥ ಹಾಗೂ ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ, ಸಿದ್ದಾರ್ಥನಗರ, ಚಾಮರಾಜನಗರ

ನಗರದಲ್ಲಿ ಇತ್ತೀಚಿಗೆ ಮನೆಗಳ್ಳತನಗಳು ಹೆಚ್ಚಾಗಿತ್ತು. ಹೆಚ್ಚಿನ ಪ್ರಕರಣಗಳಲ್ಲಿ ಕಳ್ಳರನ್ನು ಪತ್ತೆ ಹಚ್ಚಿದ್ದೇವೆ. ಜನರ ಸೇವೆಗೆ ಪೊಲೀಸ್ ಇಲಾಖೆ ಸದಾ ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಮನೆ-ಮನೆಗೆ ಪೊಲೀಸ್ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ನಗರೀಕರಣ ಆದ ಮೇಲೆ ಸಾರ್ವಜನಿಕರು ಅಪರಿಚಿತರಾಗುತ್ತಿದ್ದೇವೆ. ಅಕ್ಕ-ಪಕ್ಕದಲ್ಲಿ ಇರುವವರೊಂದಿಗೆ ಉತ್ತಮ ಬಾಂಧವ್ಯವನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

-ಲಕ್ಷ್ಮಯ್ಯ, ಡಿವೈಎಸ್ಪಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net