ಜಿಲ್ಲೆಯಲ್ಲಿ ಮತ್ತೆ ಪುಟಿದೇಳಲಿದೆಯಾ ಜೆಡಿಎಸ್?:

ಜಿಲ್ಲೆಯಲ್ಲಿ ಮತ್ತೆ ಪುಟಿದೇಳಲಿದೆಯಾ ಜೆಡಿಎಸ್?:
Published on

ಹಾಸನ: ಲೋಕಸಭಾ ಚುನಾವಣೆ ನಂತರ ಹಾಸನ ಜಿಲ್ಲೆ ಹಲವು ರಾಜಕೀಯ ಸ್ಥಿತ್ಯಂತರಗಳಿಗೆ ಸಾಕ್ಷಿಯಾಯಿತು. ಜಿಲ್ಲೆಯನ್ನು ಕಳೆದ 40 ವರ್ಷಗಳಿಂದ ಆಳಿದ ಎಚ್.ಡಿ. ರೇವಣ್ಣ ಕುಟುಂಬದ ಪಾಲಿಗೆ 2024 ಅಕ್ಷರಶಃ ಧಾರುಣ ವರ್ಷವಾಗಿ ಪರಿಣಮಿಸಿದೆ.
ಇಡೀ ಕುಟುಂಬ ಸದಸ್ಯರ ಮೇಲೆ ಒಂದಿಲ್ಲೊಂದು ಗಂಭೀರ ಆರೋಪಗಳು ಕೇಳಿಬಂದು ಎಚ್.ಡಿ. ರೇವಣ್ಣ ಸೇರಿದಂತೆ ಇಬ್ಬರು ಮಕ್ಕಳು ಜೈಲು ಪಾಲಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಲ್ಲಿಗೆ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಕತೆ ಮುಗಿಯಿತು ಎಂದುಕೊಳ್ಳುತ್ತಿರುವಾಗಲೇ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಪ್ರಭಾವಿ ಖಾತೆಯ ಸಚಿವರಾದರು. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆಂದು ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ‘ಕಲಾಪದ ಬಳಿಕ ಹಾಸನ ಜಿಲ್ಲೆಯಲ್ಲಿ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಕಾರ್ಯಕರ್ತರಲ್ಲಿ ಮತ್ತೆ ಆತ್ಮವಿಶ್ವಾಸ, ಧೈರ್ಯ ತುಂಬುವ ಕೆಲಸ ಮಾಡಲಾಗುವುದು,’ ಎಂದು ನೀಡಿದ ಹೇಳಿಕೆ ಜೆಡಿಎಸ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಎಚ್.ಡಿ. ರೇವಣ್ಣ ಜೈಲಿನಿಂದ ಬಿಡುಗಡೆಯಾದ ಬಳಿಕ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಜತೆಗೆ ಒಂದರ ಮೇಲೆ ಒಂದು ವಿಘ್ನಗಳು ಎದುರಾದಾಗಿನಿಂದಲೂ ಭವಾನಿ ರೇವಣ್ಣ ಅವರು ಜಿಲ್ಲೆಯಿಂದ ಕಣ್ಮರೆಯಾದರು. ಈ ಎಲ್ಲ ಬೆಳವಣಿಗೆಗಳಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಮತ್ತು ಜನರಲ್ಲಿ ಎಚ್.ಡಿ. ರೇವಣ್ಣ ಕುಟುಂಬದ ರಾಜಕೀಯ ಬಹುತೇಕ ಇಲ್ಲಿಗೆ ಮುಗಿದ ಅಧ್ಯಾಯ ಎಂದೇ ಭಾವಿಸುವಾಗ ಎಚ್.ಡಿ. ಕುಮಾರಸ್ವಾಮಿ ಅವರ ಆಗಮನದಿಂದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಂತೆ ಭಾಸವಾಗುತ್ತಿದೆ.
ನಿಖಿಲ್‌ಗೆ ಪಟ್ಟ?:
‘ಸದ್ಯದ ಬೆಳವಣಿಗೆಯಲ್ಲಿ ಜಿಲ್ಲೆಗೆ ಕುಮಾರಣ್ಣ ಬರಬೇಕು ಎಂದು ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಲಾಪ ಮುಗಿದ ಮೇಲೆ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು. ಈ ಜಿಲ್ಲೆಯ ಅಭಿವೃದ್ಧಿಗೆ ಎಚ್.ಡಿ. ರೇವಣ್ಣ ಕೊಡುಗೆ ಅಪಾರವಾಗಿದೆ. ಅವರ ಜತೆಗೂಡಿ ಜಿಲ್ಲೆಯಲ್ಲಿ ಮತ್ತೆ ಪಕ್ಷ ಸಂಘಟನೆ ಮಾಡುತ್ತೇನೆ,’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಎಚ್.ಡಿ. ರೇವಣ್ಣ ಪುತ್ರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಆರೋಪದಡಿ ಜೈಲಿನಲ್ಲಿದ್ದು, ಅವರು ಮತ್ತೆ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಜಿಲ್ಲೆಗೆ ಯುವ ನಾಯಕನ ಅಗತ್ಯವಿದ್ದು ನಿಖಿಲ್ ಕುಮಾರಸ್ವಾಮಿ ಅವರನ್ನು ಹಾಸನ ಜಿಲ್ಲೆಗೆ ಕರೆತರಲು ತೆರೆಮರೆಯ ಎಲ್ಲ ಕಸರತ್ತುಗಳು ಪಕ್ಷದಲ್ಲಿ ನಡೆಯುತ್ತಿವೆ ಹಾಗೆಯೇ ಮುಂದಿನ ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪಟ್ಟವನ್ನು ನಿಖಿಲ್ ಕುಮಾರಸ್ವಾಮಿಗೆ ಕಟ್ಟುವ ಸಾಧ್ಯತೆಗಳು ಇವೆ ಎಂಬ ಮಾತುಗಳು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದಲೇ ಕೇಳಿಬರುತ್ತಿವೆ.

ಜಿಲ್ಲೆ ಕಬ್ಜಕ್ಕೆ ಕೈ ಕಸರತ್ತು!
ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ಹಾಸನ ಜಿಲ್ಲೆ ಈಗ ಮೊದಲಿನಂತಿಲ್ಲ. ಮೂರು ಪಕ್ಷಗಳು ಸಮಬಲದ ಜಿದ್ದಾಜಿದ್ದಿನಲ್ಲಿವೆ. ಹೇಗಾದರೂ ಮಾಡಿ ಹಾಸನವನ್ನು ತನ್ನ ಕಬ್ಜ ಮಾಡಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದು ಉಳಿದ ಆರರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಜತೆಗೆ ಜೆಡಿಎಸ್ ಮಿತ್ರಪಕ್ಷವಾದರೂ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ತನ್ನ ವಿಶ್ವಾಸ ಮತ್ತು ಶಕ್ತಿಯನ್ನು ವೃದ್ಧಿಸಿಕೊಂಡಿದೆ.
ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯನ್ನು ತನ್ನ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಈಗಿನಿಂದಲೇ ತಯಾರಿ ಆರಂಭಿಸಿದೆ. ಈ ಒಂದು ತಿಂಗಳಲ್ಲಿ ಜಿಲ್ಲೆಗೆ ಗೃಹ ಸಚಿವ ಜಿ. ಪರಮೇಶ್ವರ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಆಗಮಿಸಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ತಟಸ್ಥ
ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಜಿಲ್ಲೆಯ ಬಿಜೆಪಿ ನಾಯಕರು ತಟಸ್ಥರಾಗಿದ್ದಾರೆ. ಜಿಲ್ಲೆಯಲ್ಲಿ ಹಾಸನ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಶಾಸಕ ಪ್ರೀತಂ ಗೌಡ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಾಜಧಾನಿಯಲ್ಲಿ ಉಳಿದುಕೊಂಡಿದ್ದಾರೆ. ಇಬ್ಬರು ಬಿಜೆಪಿ ಶಾಸಕರು ಕ್ಷೇತ್ರಕ್ಕೆ ಸೀಮಿತವಾಗಿದ್ದುಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದಂತೆ ಬಿಜೆಪಿಯ ಪ್ರಮುಖ ಮುಖಂಡರು ತಟಸ್ಥರಾಗಿ ಉಳಿದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ರೇವಣ್ಣ ಅವರನ್ನು ಬಿಟ್ಟು ಪಕ್ಷ ಸಂಘಟನೆ ಮಾಡಲು ಸಾಧ್ಯವಿಲ್ಲ. ಎಲ್ಲ ಶಾಸಕರು, ಮುಖಂಡರು ರೇವಣ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವಂತೆ ಕುಮಾರಣ್ಣ ಅವರು ತಿಳಿಸಿದ್ದಾರೆ. ರೇವಣ್ಣ ನೇತೃತ್ವದಲ್ಲಿ ಮುಂದಿನ ತಿಂಗಳು ಬೃಹತ್ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು.
ಎಚ್.ಕೆ. ಕುಮಾರಸ್ವಾಮಿ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net