ಜಿಲ್ಲೆಯಲ್ಲಿ ಮತ್ತೆ ಪುಟಿದೆದ್ದ ಕಾಂಗ್ರೆಸ್

congres
Published on

ಆರ್.ಕೃಷ್ಣ ಮೈಸೂರು
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಪ್ರಭಾವಿಗಳೇ ಸೋಲು ಕಂಡಿದ್ದ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಮತ್ತೆ ಪುಟಿದೆದ್ದಿದೆ.
ಈ ಮೂಲಕ ಸಿದ್ದರಾಮಯ್ಯ ಅವರ ಪ್ರಭಾವ ಜಿಲ್ಲೆಯಲ್ಲಿ ಕುಗ್ಗಿಲ್ಲ ಎನ್ನುವುದು ಮತ್ತೆ ಸಾಬೀತಾಗಿದ್ದು, ಆಡಳಿತ ಪಕ್ಷವಾಗಿದ್ದ ಬಿಜೆಪಿ ವಿರೋಧಿ ಅಲೆಯೂ ಈ ಬಾರಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬರುವಂತೆ ಮಾಡಿದೆ. 2018ರ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನವನ್ನಷ್ಟೇ ಪಡೆದಿದ್ದ ಕಾಂಗ್ರೆಸ್ ಈಗ 8 ಸ್ಥಾನದಲ್ಲಿ ಗೆದ್ದು ಬೀಗಿದೆ.
ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಸಿದ್ದರಾಮಯ್ಯ, ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ರವಿಶಂಕರ್ ಗೆಲ್ಲುವ ಮೂಲಕ ಸ್ಥಾನ ಹೆಚ್ಚಿಸಿಕೊಂಡಿದೆ.
ನರಸಿಂಹರಾಜ ಕ್ಷೇತ್ರದಿಂದ ತನ್ವೀರ್‌ಸೇಠ್, ಎಚ್.ಡಿ.ಕೋಟೆಯಿಂದ ಅನಿಲ್ ಚಿಕ್ಕಮಾದು ಗೆಲುವಿನ ಓಟ ಮುಂದುವರಿಸಿದ್ದಾರೆ. ಇವರೊಂದಿಗೆ ಚಾಮರಾಜ ಕ್ಷೇತ್ರದಿಂದ ಕೆ.ಹರೀಶ್‌ಗೌಡ, ನಂಜನಗೂಡಿನಿಂದ ದರ್ಶನ್ ಧ್ರುವನಾರಾಯಣ ಖಾತೆ ತೆರೆದಿದ್ದು, ಕಾಂಗ್ರೆಸ್ ಬಲ ಹೆಚ್ಚಿಸಿದೆ.
ಆದರೆ, ಕೃಷ್ಣರಾಜದಲ್ಲಿ ಮತ್ತೆ ಶಾಸಕರಾಗಬೇಕು ಎಂದು ಕನಸು ಕಂಡಿದ್ದ ಎಂ.ಕೆ.ಸೋಮಶೇಖರ್, ಉಪಚುನಾವಣೆ ಮೂಲಕ ಗೆದ್ದಿದ್ದ ಹುಣಸೂರಿನ ಎಚ್.ಪಿ.ಮಂಜುನಾಥ್, ಚಾಮುಂಡೇಶ್ವರಿಯಿಂದ ಕಾಂಗ್ರೆಸ್‌ನಿಂದ ಹೊಸ ಮುಖವಾಗಿ ಕಣಕ್ಕಿಳಿದಿದ್ದ ಮಾವಿನಹಳ್ಳಿ ಸಿದ್ದೇಗೌಡ ಸೋಲನುಭವಿಸಿದ್ದಾರೆ. ಇವರ ಸೋಲಿಗೆ ಒಳಸಂಚು ಕೆಲಸ ಮಾಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈ ಬಾರಿ ಕೈ ಹಿಡಿದ ಮತದಾರ:
ಕಳೆದ ಚುನಾವಣೆಯಲ್ಲಿ ‘ಮತ್ತೆ ಮುಖ್ಯಮಂತ್ರಿ’ ಎನ್ನುವ ಅಬ್ಬರದ ಪ್ರಚಾರ ನಡೆಸಿದ್ದರೂ ರಾಜಕೀಯವಾಗಿ ಪುನರ್ಜನ್ಮ ನೀಡಿದ್ದ ಚಾಮುಂಡೇಶ್ವರಿಯಲ್ಲಿಯೇ ಸಿದ್ದರಾಮಯ್ಯ ಸೋಲನುಭವಿಸಿದ್ದರು. ಕ್ಷೇತ್ರ ಮರು ವಿಂಗಡಣೆಯಿಂದ ನೂತನವಾಗಿ ರಚನೆಗೊಂಡ ವರುಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಎರಡು ಬಾರಿ ಗೆದ್ದು, ಪ್ರತಿಪಕ್ಷ ನಾಯಕ ಹಾಗೂ ಮುಖ್ಯಮಂತ್ರಿ ಆಗಿದ್ದರು.
ಆದರೆ, ಪುತ್ರ ಡಾ.ಯತೀಂದ್ರ ಅವರ ರಾಜಕೀಯ ಪ್ರವೇಶಕ್ಕಾಗಿ ವರುಣ ಕ್ಷೇತ್ರವನ್ನು ಬಿಟ್ಟುಕೊಟ್ಟು ತಮ್ಮ ಹಳೇ ಕ್ಷೇತ್ರ ಚಾಮುಂಡೇಶ್ವರಿಯಿಂದ ‘ಮತ್ತೆ ಮುಖ್ಯಮಂತ್ರಿ’ ಅಗುತ್ತೇನೆ ಎಂದು ಪ್ರಚಾರದೊಂದಿಗೆ ಕಣಕ್ಕಿಳಿಸಿದ್ದರು. ಆದರೆ ಕ್ಷೇತ್ರದಲ್ಲಿ ಹಿಡಿತ ಸಡಿಲಗೊಂಡಿದ್ದು, ಪಕ್ಷದಲ್ಲಿನ ಒಳೇಟು, ಪ್ರತಿಪಕ್ಷಗಳ ಹೊಂದಾಣಿಕೆಯಿಂದ ಭಾರಿ ಅಂತರದಲ್ಲಿಯೇ ಸೋಲಾಗಿತ್ತು.
ಈ ಬಾರಿ ಅಳೆದೂ ತೂಗಿ ಎಚ್ಚರಿಕೆಯ ಹೆಜ್ಜೆ ಇಟ್ಟ ಸಿದ್ದರಾಮಯ್ಯ ಅವರು, ಮತ್ತೆ ವರುಣ ಕ್ಷೇತ್ರದಿಂದಲೇ ಕಣಕ್ಕೆ ಇಳಿದರು. ಬಿಜೆಪಿ ಪ್ರಬಲ ನಾಯಕ ವಿ.ಸೋಮಣ್ಣ ಅವರನ್ನೇ ಕಣಕ್ಕಿಳಿಸಿ ಕಟ್ಟಿ ಹಾಕುವ ಯತ್ನ ನಡೆಸಿತು.
ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಅನೇಕ ನಾಯಕರು ಬಂದು ಪ್ರಚಾರ ನಡೆಸಿದ್ದರೂ ಮತದಾರರು ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪುರಸ್ಕರಿಸಿದ್ದಾರೆ. ಕಳೆದ ಬಾರಿ ಮೂರು ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಒಂದು ಸ್ಥಾನಕಷ್ಟೇ ತೃಪ್ತಿಪಟ್ಟುಕೊಳ್ಳುವಂತೆ ಆಗಿದೆ.
ಹಿಂದೊಮ್ಮೆ 8 ಕ್ಷೇತ್ರಗಳಿಗೂ ಹೆಚ್ಚು ಗೆಲುವು ಕಾಣುತ್ತಿದ್ದ ಜೆಡಿಎಸ್ ಪ್ರಭಾವ ಕಳೆದುಕೊಂಡಿರುವುದು ಈ ಚುನಾವಣೆ ಮೂಲಕ ಸಾಬೀತಾಗಿದೆ. ಕಳೆದ ಚುನಾವಣೆಯಲ್ಲಿ ನಾಲ್ಕು ಸ್ಥಾನ ಗೆದ್ದು ಬೀಗಿದ್ದ ಪಕ್ಷ ಈ ಬಾರಿ ಕೇವಲ 2 ಕ್ಷೇತ್ರದಲ್ಲಿ ಮಾತ್ರ ಗೆಲುವು ಕಂಡಿದೆ. ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡ, ಹುಣಸೂರಿನಲ್ಲಿ ಅವರ ಪುತ್ರ ಜಿ.ಡಿ.ಹರೀಶ್‌ಗೌಡ ತಮ್ಮ ಪ್ರಭಾವದಿಂದ ವಿಧಾನ ಸಭೆ ಪ್ರವೇಶಿಸಿದ್ದಾರೆ. ಮತ್ತೊಬ್ಬ ಪ್ರಭಾವಿ ನಾಯಕರಾಗಿದ್ದ ಸಾ.ರಾ.ಮಹೇಶ್ ಅವರನ್ನು ಮತದಾರರು ಈ ಬಾರಿ ತಿರಸ್ಕರಿಸಿದ್ದಾರೆ. ಹೀಗಾಗಿ ಜೆಡಿಎಸ್, ಬಿಜೆಪಿ ಎರಡು ಪಕ್ಷಕ್ಕೂ ನಿರೀಕ್ಷಿತ ಸ್ಥಾನ ಲಭಿಸಿಲ್ಲ.
ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ ದೊರೆಯದಿದ್ದರಿಂದ ಮಾಜಿ ಶಾಸಕ ವಾಸು ಅವರು ಮುನಿಸಿಕೊಂಡಿದ್ದರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹರೀಶ್‌ಗೌಡ ಗೆಲುವು ಸಾಧಿಸಿದ್ದಾರೆ. ನಂಜನಗೂಡಿನಲ್ಲಿ ಅನುಕಂಪ ಕೈ ಹಿಡಿದಿದ್ದರಿಂದ ದರ್ಶನ್ ಅವರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.
ನಾಯಕರ ಒಗ್ಗಟ್ಟಿನ ಮಂತ್ರ:
ಪಕ್ಷವನ್ನು ಗದ್ದುಗೆಗೆ ಏರಿಸುವಂತೆ ಮಾಡಲು ಕಾಂಗ್ರೆಸ್ ನಾಯಕರು ಮಾಡಿದ ಒಗ್ಗಟ್ಟಿನ ಮಂತ್ರ ಈ ಬಾರಿ ಕೆಲಸ ಮಾಡಿದೆ. ಕಾರ್ಯಕರ್ತರು, ಮುಖಂಡರನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗಬೇಕು, ಯಾವುದೇ ಕುತಂತ್ರ ಮಾಡಬಾರದು ಎನ್ನುವ ಸಂದೇಶವೂ ಕಾರ್ಯಕರ್ತರನ್ನು ಹುಮ್ಮಸ್ಸುಗೊಳಿಸಿತ್ತು.
ಪಕ್ಷದ ನಾಯಕರಾದ ರಾಹುಲ್‌ಗಾಂಧಿ, ಪ್ರಿಯಾಂಕಾ ಅವರು ಪ್ರಚಾರ ನಡೆಸಿದ್ದರೂ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರೇ ಸ್ಟಾರ್ ಪ್ರಚಾರಕರಾಗಿದ್ದರು. ಜತೆಗೆ ಅಭ್ಯರ್ಥಿಗಳ ವರ್ಚಸ್ಸು ಈ ಬಾರಿ ಹೆಚ್ಚು ಕೆಲಸ ಮಾಡಿದ್ದರಿಂದ ಪಕ್ಷ ಈ ಸಾಧನೆ ಮಾಡಿದೆ.

ಒಗ್ಗಟ್ಟಿನಿಂದ ಸಾಧನೆ
ಜಿಲ್ಲೆಯ ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಸಿದ್ದರಾಮಯ್ಯ ಅವರ ವರ್ಚಸ್ಸು ಈ ಬಾರಿ ಈ ಸಾಧನೆಗೆ ಸಾಧ್ಯವಾಯಿತು. ಜತೆಗೆ ಆಡಳಿತ ಬಿಜೆಪಿ ವಿರೋಧಿ ಅಲೆಯೂ ಕೆಲಸ ಮಾಡಿದ್ದರಿಂದ ಮೋದಿ, ಅಮಿತ್ ಷಾ ಯಾರು ಬಂದರೂ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಗ್ಯಾರಂಟಿ ಘೋಷಣೆಗಳು ಜನರು ಬೆಂಬಲ ನೀಡುವಂತೆ ಮಾಡಿವೆ.
ಬಿ.ಜೆ.ವಿಜಯ್‌ಕುಮಾರ್
ಜಿಲ್ಲಾಧ್ಯಕ್ಷ, ಕಾಂಗ್ರೆಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net