ಜಿಲ್ಲೆಯಲ್ಲಿ ಮತ್ತೆ ಕರೊನಾ ಢವಢವ

11-gdg-1a
Published on

ಗದಗ: ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಐದು ಕರೊನಾ ವೈರಸ್ ಪ್ರಕರಣಗಳ ಪೈಕಿ ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಒಬ್ಬ ವೃದ್ಧೆ ಮೃತಪಟ್ಟಿದ್ದಾರೆ. ಹೀಗಾಗಿ ಜಿಲ್ಲೆ ಸದ್ಯಕ್ಕೆ ಕರೊನಾ ಮುಕ್ತ ಎನ್ನುವ ಮುನ್ನವೇ ಮತ್ತೆ ಢವಢವ ಶುರುವಾಗಿದೆ.

ಗುಜರಾತ್ ರಾಜ್ಯದಿಂದ 16 ಜನರು ಭಾನುವಾರ ಜಿಲ್ಲೆಗೆ ಆಗಮಿಸಿದ್ದಾರೆ. ಇದರಿಂದಾಗಿ ಮತ್ತೆ ಮಹಾಮಾರಿ ವಕ್ಕರಿಸಲಿದೆಯಾ ಎಂಬ ಭೀತಿ ಜಿಲ್ಲೆಯ ಜನರಲ್ಲಿ ಆವರಿಸಿದೆ. ಸದ್ಯಕ್ಕೆ 16 ಜನರನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಿದ್ದು, ಅವರೆಲ್ಲರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ಇವರು ಯಾವಾಗ ಗುಜರಾತ್​ಗೆ ಹೋಗಿದ್ದರು? ಹೇಗೆ ತವರು ಜಿಲ್ಲೆಗೆ ಮರಳಿದರು? ಎಂಬಿತ್ಯಾದಿ ವಿವರಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ನಿರತವಾಗಿದೆ. ಗುಜರಾತ್​ನಿಂದ ಬಂದಿರುವ ಎಲ್ಲ 16 ಜನರ ವೈದ್ಯಕೀಯ ವರದಿ ಮಂಗಳವಾರ ಬೆಳಗ್ಗೆ ಬರುವ ಸಾಧ್ಯತೆಗಳಿವೆ.

289 ವರದಿಗಳು ಬಾಕಿ: ಜಿಲ್ಲೆಯ ಜನರಲ್ಲಿ ಕರೊನಾ ವೈರಸ್ ಹರಡುವ ಆತಂಕ ಇನ್ನೂ ದೂರವಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಕರೊನಾ ಸೋಂಕಿತರು ಇಲ್ಲದ್ದಿದ್ದರೂ ಇನ್ನೂ 289 ಶಂಕಿತರ ವರದಿಗಳು ಬರಬೇಕಿದೆ. ಇದಕ್ಕಾಗಿ ಗದಗ ಜಿಲ್ಲಾಡಳಿತ ಕಾಯುತ್ತಿದೆ. ಗದಗ ನಗರದ ರಂಗನವಾಡಿ ಗಲ್ಲಿ ಮತ್ತು ಗಂಜಿ ಬಸವೇಶ್ವರ ಓಣಿ ಸೇರಿ ಎರಡು ಕಂಟೇನ್ಮೆಂಟ್ ಪ್ರದೇಶದಲ್ಲಿ ಒಟ್ಟು ಐದು ಕರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಸೋಂಕಿತರ ಪೈಕಿ ಒಬ್ಬ ವೃದ್ಧೆ ಮೃತಪಟ್ಟಿದ್ದು, ನಾಲ್ವರು ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿರುವುದು ಜಿಲ್ಲೆಯ ಜನರಿಗೆ ತುಸು ನೆಮ್ಮದಿ ತಂದಿದೆ. ಈಗಾಗಲೇ ಕಂಟೇನ್ಮೆಂಟ್ ಪ್ರದೇಶದಲ್ಲಿ ಪ್ರತಿ ಮನೆ- ಮನೆಗಳನ್ನು ಸರ್ವೆ ಮಾಡಿ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಈ ಎರಡೂ ಪ್ರದೇಶಗಳು ಸೇಫ್ ಎಂಬ ಲೆಕ್ಕಾಚಾರ ನಡೆದಿದೆ. ಬಾದಾಮಿ ತಾಲೂಕಿನ ಡಾಣಕಶಿರೂರ ಗ್ರಾಮದಿಂದ ತವರುಮನೆ ರೋಣ ಪಟ್ಟಣ ವ್ಯಾಪ್ತಿಯ ಕೃಷ್ಣಾಪುರಕ್ಕೆ ಆಗಮಿಸಿದ್ದ ಗರ್ಭಿಣಿಯೊಬ್ಬಳು ಸೋಂಕಿಗೆ ಒಳಗಾಗಿದ್ದಾರೆ. ಈ ಸೋಂಕಿತೆಯ ಪ್ರಥಮ, ದ್ವಿತೀಯ ಸಂಪರ್ಕದಲ್ಲಿದ್ದವರ ಗಂಟಲ ಮಾದರಿ ದ್ರವವನ್ನು ಪರೀಕ್ಷೆಗೆ ಕಳುಹಿಸುವ ಕಾರ್ಯ ಮುಂದುವರಿದಿದೆ. ಈ ಕುರಿತು ಈಗಾಗಲೇ 151 ಜನರ ಸ್ವ್ಯಾಬ್ ಟೆಸ್ಟ್ ನೆಗೆಟಿವ್ ಬಂದಿದೆ.

ಗೋವಾದಿಂದ ಮತ್ತೆ 226 ಜನ: ನಾಗಾವಿತಾಂಡಾ, ಬೆಳದಡಿ, ಅಡವಿಸೋಮಾಪುರ ತಾಂಡಾ, ಕಳಸಾಪುರತಾಂಡಾ ಮೊದಲಾದೆಡೆಯಿಂದ ಗೋವಾಕ್ಕೆ ವಲಸೆ ಹೋಗಿದ್ದ 200ಕ್ಕೂ ಹೆಚ್ಚು ಜನರು ಮರಳಿ ಬಂದಿದ್ದಾರೆ. ಲಾಕ್​ಡೌನ್ ಸಡಿಲಿಕೆ ಬಳಿಕ ಗೋವಾ ಸರ್ಕಾರವು 6 ಕದಂಬ ಬಸ್​ಗಳ ಮೂಲಕ 226 ಕಾರ್ವಿುಕರನ್ನು ಗದಗ ನಗರಕ್ಕೆ ಸೋಮವಾರ ಕಳುಹಿಸಿಕೊಟ್ಟಿದೆ. ನಗರದ ಹೊಸ ಬಸ್ ನಿಲ್ದಾಣದಲ್ಲಿ ಇವರೆಲ್ಲರ ಆರೋಗ್ಯ ತಪಾಸಣೆ ಮಾಡಲಾಯಿತು. ಗೋವಾದಿಂದ ಬಂದ ಎಲ್ಲರೂ 14 ದಿನ ಹೋಂ ಕ್ವಾರಂಟೈನ್​ನಲ್ಲಿ ಇರಬೇಕು. ಯಾರೂ ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು. ಸರ್ಕಾರದ ಲಾಕ್​ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಕೂಡಲೆ ಆಸ್ಪತ್ರೆಗೆ ದಾಖಲಾಗಬೇಕು ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯು ಕಾರ್ವಿುಕರಿಗೆ ತಿಳಿವಳಿಕೆ ನೀಡಿದರು. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಈ ಎಲ್ಲ ಕಾರ್ವಿುಕರ ಸಂಪೂರ್ಣ ಮಾಹಿತಿ ಪಡೆದ ಬಳಿಕ ಬಸ್​ಗಳ ಮೂಲಕ ಅವರ ಸ್ವಗ್ರಾಮಗಳಿಗೆ ಕಳಿಸಿಕೊಡಲಾಗಿದೆ.

ಸ್ವಗ್ರಾಮಗಳತ್ತ 807 ವಲಸೆ ಕಾರ್ವಿುಕರು: ಗದಗ ಜಿಲ್ಲೆಯಿಂದ ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದ 807 ಕಾರ್ವಿುಕರು ಸೋಮವಾರ ಬಸ್ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ- 681, ಹಾಸನ-21, ಧಾರವಾಡ-20, ಉತ್ತರ ಕನ್ನಡ-16, ಬಳ್ಳಾರಿ-10, ಉಡುಪಿ-34, ಬೆಂಗಳೂರು-6, ರಾಮನಗರ-16, ಶಿವಮೊಗ್ಗ ಜಿಲ್ಲೆ-3 ಕಾರ್ವಿುಕರು ನಗರಕ್ಕೆ ಆಗಮಿಸಿ, ನಂತರ ತಮ್ಮ ಸ್ವಂತ ಊರಿಗೆ ತೆರಳಿದ್ದಾರೆ. ಎಲ್ಲ ಕಾರ್ವಿುಕರ ಆರೋಗ್ಯ ತಪಾಸಣೆ ಮಾಡಿ, ಕೋವಿಡ್-19 ತಡೆಗೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ತಿಳಿಸಿದೆ.

ಜಿಲ್ಲೆಗೆ ಭಾನುವಾರ ಬಂದಿರುವ 16 ಜನರು ಗುಜರಾತ್ ರಾಜ್ಯದ ಪಾಲನ್​ಪುರದಲ್ಲಿ ಆಯೋಜಿಸಿದ್ದ ಮುಸ್ಲಿಂ ಸಮಾಜದ ಸಮಾವೇಶದಲ್ಲಿ ಭಾಗವಹಿಸಿದ್ದರು. ಸದ್ಯಕ್ಕೆ ಅವರೆಲ್ಲರೂ ಆರೋಗ್ಯದಿಂದ ಇದ್ದಾರೆ.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net