ಜಿಲ್ಲೆಯಲ್ಲಿ ಮಂಗಳವಾರ 21 ನಾಮಪತ್ರ ಸ್ವೀಕಾರ

ಜಿಲ್ಲೆಯಲ್ಲಿ ಮಂಗಳವಾರ 21 ನಾಮಪತ್ರ ಸ್ವೀಕಾರ
Published on

ಹಾಸನ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮಂಗಳವಾರ ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 15 ಅಭ್ಯರ್ಥಿಗಳಿಂದ ಒಟ್ಟು 21 ನಾಮಪತ್ರಗಳು ಸಲ್ಲಿಕೆಯಾಗಿವೆ.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಗಳಾಗಿ ನಟರಾಜು, ಸುಬ್ರಹ್ಮಣ್ಯ ಹಾಗೂ ಎಂ.ಜಿ.ನಂಜೇಗೌಡ, ಬಿಜೆಪಿ ಅಭ್ಯರ್ಥಿ ಸಿ.ಆರ್. ಚಿದಾನಂದ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜಿ.ಕೆ. ಪವಿತ್ರಾ ಇವರು ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದಾರೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಿ.ವಿ. ಬಸವರಾಜು, ಲೋಕಶಕ್ತಿ ಪಕ್ಷದ ಅಭ್ಯರ್ಥಿ ಹೊಳೆಯಪ್ಪ, ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಉಮೇಶ್ ತಲಾ ಒಂದೊಂದು ನಾಮಪತ್ರ ಸಲ್ಲಿಸಿದರು.

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಪಿ ಪಕ್ಷದಿಂದ ಡಿ.ಎಸ್. ಗಂಗಾಧರ್ ಉಮೇದುವಾರಿಕೆ ಸಲ್ಲಿಸಿದರು.

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ಹಾಗೂ ಬಿಎಸ್‌ಪಿ ಅಭ್ಯರ್ಥಿ ತಾರೇಶ್ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯೋಗಾರಮೇಶ್, ಪಕ್ಷೇತರ ಅಭ್ಯರ್ಥಿಗಳಾಗಿ ಎ.ಎಂ.ಮಲ್ಲೇಶ್ ಹಾಗೂ ವಿಜಯ ಭಾರತಿ, ಭಾರತೀಯ ಡಾ.ಬಿ.ಆರ್ ಅಂಬೇಡ್ಕರ್ ಜನತಾ ಪಕ್ಷದಿಂದ ಎಚ್.ಪಿ ಮಂಜುನಾಥ್ ತಲಾ ಒಂದೊಂದು ನಾಮಪತ್ರ ಸಲ್ಲಿಸಿದರು.

ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್ ಮಂಜುನಾಥ ಎರಡು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿ ಜಿ.ಸಿ. ರವಿ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net