

ಹಾಸನ: ಮಳೆಯ ಆರ್ಭಟ ಮುಂದುವರೆದಿರುವುದರಿಂದ ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯಕ್ಕೆ ಬರೋಬ್ಬರಿ 25,862 ಕ್ಯೂಸೆಕ್ ಒಳಹರಿವು ಬರುತ್ತಿದೆ. ಒಂದೇ ದಿನದಲ್ಲಿ 11 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ.
2,922 ಅಡಿ (37.103 ಟಿಎಂಸಿ) ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2909.15 ಅಡಿ (26.047 ಟಿಎಂಸಿ) ನೀರು ಸಂಗ್ರಹವಾಗಿದೆ. ಈ ದಿನ ಕಳೆ ವರ್ಷ ಜಲಾಶಯದಲ್ಲಿ 16.174 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 10 ಟಿಎಂಸಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ.
ಜಲಾಶಯದಿಂದ 250 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಬುಧವಾರವೂ ಸಕಲೇಶಪುರ ತಾಲ್ಲೂಕು ಮತ್ತು ಮೂಡಿಗೆರೆ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದಿಂದ ಒಳಹರಿವಿನ ಪ್ರಮಾಣ ಇನ್ನಷ್ಟೂ ಹೆಚ್ಚಳವಾಗಲಿದೆ. ಅಲ್ಲದೇ ಜು.21ರ ವರೆಗೂ ಹವಮಾನ ಇಲಾಖೆ ಮಳೆ ಮುನ್ಸೂನೆ ನೀಡಿರುವುದರಿಂದ ಅಟೆಕಟ್ಟೆ ಇನ್ನಷ್ಟು ಭರ್ತಿಯಾಗುವು ನಿರೀಕ್ಷೆ ಮೂಡಿದೆ.
ಅದೇ ರೀತಿ ಬೇಲೂರು ತಾಲ್ಲೂಕಿನಲ್ಲಿರುವ ಯಗಚಿ ಜಲಾಶಯವು 3164.90 ಅಡಿ (3.603 ಟಿಎಂಸಿ) ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಬುಧವಾರ 3157.83 ಅಡಿ (2.780 ಟಿಎಂಸಿ) ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 2762 ಕ್ಯೂಸೆಕ್ ಒಳಹರಿವು ಬರುತ್ತಿದೆ.
ಆಲೂರು ತಾಲ್ಲೂಕಿನಲ್ಲಿರುವ ವಾಟೆಹೊಳೆ ಜಲಾಶಯವು 3169.61 ಅಡಿ (1.51 ಟಿಎಂಸಿ) ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 3154.35 ಅಡಿ (0.767 ಟಿಎಂಸಿ) ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 768 ಕ್ಯೂಸೆಕ್ ಒಳಹರಿವು ಬರುತ್ತಿದೆ.
ಬೇಲೂರು, ಆಲೂರು ತಾಲ್ಲೂಕು ಭಾಗದಲ್ಲಿ ಮಳೆಯ ಆರ್ಭಟ ಕೊಂಚ ತಗ್ಗಿರುವುದರಿಂದ ಒಳಹರಿವಿನಲ್ಲಿ ಅಂತಹ ವ್ಯಾತ್ಯಾಸವೇನು ಕಂಡು ಬಂದಿಲ್ಲ. ಇದೇ ರೀತಿ ಮಳೆ ಮುಂದುವರೆದರೆ ಕಡಿಮೆ ಪ್ರಮಾಣದ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಯಗಚಿ ಹಾಗು ವಾಟೆಹೊಳೆ ಜಲಾಶಯಗಳು ಈ ತಿಂಗಳಲ್ಲಿಯೇ ಭರ್ತಿಯಾದರೂ ಆಶ್ಚರ್ಯವಿಲ್ಲ.