

ಬಳ್ಳಾರಿ : ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸೋಮವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆ ಸುರಿಯಿತು. ಬಿರುಸಿನ ಮಳೆಗೆ ನಗರದ ಪ್ರಮುಖ ಕಾಲನಿಗಳಲ್ಲಿ ನೀರು ಸಂಗ್ರಹಗೊಂಡು ಜನರು ಪರದಾಡಿದರು. ಇಲ್ಲಿನ ರಾಯಲ್ ವೃತ್ತ, ಸುಧಾಕ್ರಾಸ್, ಕೌಲಬಜಾರ್, ಮಿಲ್ಲರಪೇಟೆ, ಹುಸೇನ್ ನಗರ, ಇಂದಿರಾನಗರ ಹಾಗೂ ತಾಲೂಕಿನ ಅಮರಾಪುರ, ಬೇವಿನಹಳ್ಳಿ, ಅಸುಂಡಿ ಸೇರಿದಂತೆ ಹಲವಡೆ ಬಿರಿಸಿನ ಮಳೆ ಸುರಿಯಿತು. ಎಡಬಿಡದೆ ಸುರಿದ ಮಳೆಯಿಂದ ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಅವರಣದ ಮುಂಭಾಗದ ರಸ್ತೆಯಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ರಸ್ತೆಯ ಮೇಲೆ ಹರಿದವು. ಸಾರ್ವಜನಿಕರು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡವು ಪರಿಸ್ಥಿತಿ ಎದುರಾಯಿತು. ನಗರದ ಡಿಸಿ, ತಾಲೂಕು ಹಾಗೂ ಖಾಸಗಿ ಕಚೇರಿ ಅವರಣಗಳ ಮುಂಭಾಗದಲ್ಲಿ ನೀರು ನಿಂತು ಜಲಾವೃತವಾದವು. ಕೆಲವರು ಮಳೆಯಲ್ಲಿ ವಾಹನಗಳು ಚಲಾಯಿಸಿಕೊಂಡು ಮನೆಗಳ ಹತ್ತ ಸಾಗಿದರು.