ಜಿಲ್ಲೆಯಲ್ಲಿ ಬಿತ್ತನೆ ಬೀಜ ಕೊರತೆ ಇಲ್ಲ

4 Dwd 6
Published on

ಧಾರವಾಡ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಎಲ್ಲ ರೈತ ಸಂಪರ್ಕ ಕೇಂದ್ರಗಳು ಮತ್ತು ಹೆಚ್ಚುವರಿ ಮಳಿಗೆಗಳ ಮೂಲಕ ಬಿತ್ತನೆ ಬೀಜಗಳನ್ನು ಪೂರೈಸಲಾಗುತ್ತಿದೆ. ಅಗತ್ಯ ದಾಸ್ತಾನಿದ್ದು, ಕೊರತೆಯಾಗುವುದಿಲ್ಲ. ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೆಸರುಕಾಳು ಮತ್ತು ಸೋಯಾಬೀನ್ ಬೀಜಗಳಿಗೆ ಸಾಕಷ್ಟು ಬೇಡಿಕೆ ಇದೆ. ಬೇಡಿಕೆಗನುಸಾರವಾಗಿ ಬೀಜ ಪೂರೈಸಬೇಕು. ವಿತರಣಾ ಕೇಂದ್ರಗಳಲ್ಲಿ ಅನಗತ್ಯವಾಗಿ ಜನಸಂದಣಿ ಉಂಟಾಗುವುದನ್ನು ತಡೆಯಲು ರೈತರಿಗೆ ಮುಂಚಿತವಾಗಿ ಟೋಕನ್ ನೀಡಿ, ನಿಗದಿತ ದಿನದಂದು ಆಗಮಿಸಿ ಬೀಜ ಪಡೆಯಲು ಸೂಚಿಸಬೇಕು. ಅಂದು ಬೀಜ ದಾಸ್ತಾನು ಇರುವಂತೆ ಕ್ರಮ ವಹಿಸಬೇಕು. ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು. ಅಧಿಕ ಬೀಜದ ಬೇಡಿಕೆ ಇದ್ದರೆ ಕೂಡಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಲಭ್ಯವಿರುವ ಜಿಲ್ಲೆಗಳಿಂದ ಖರೀದಿಸಬೇಕು ಎಂದು ಸೂಚಿಸಿದರು.

ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಮುಂಗಾರು ಮಳೆ ಆಧರಿಸಿ ಹೆಸರುಕಾಳಿನ ಬೇಡಿಕೆ ನಿರೀಕ್ಷೆಗಿಂತ ಹೆಚ್ಚಳವಾಗಬಹುದು. ಸೋಯಾಬೀನ್ ಬೀಜಗಳಿಗೆ ಬೇಡಿಕೆ ಇದೆ. ಶೇಂಗಾ ಮತ್ತಿತರ ಬೆಳೆಗಳ ಬೀಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಬೀಜ ವಿತರಣಾ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ ಸಹಕಾರ ಪಡೆದು ಪರಿಸ್ಥಿತಿಯನ್ನು ಅಚ್ಟುಕಟ್ಟಾಗಿ ನಿರ್ವಹಿಸಲು ಯೋಜಿಸಿರಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ ಮಾತನಾಡಿ, ಜಿಲ್ಲೆಯ 14 ರೈತ ಸಂಪರ್ಕ ಕೇಂದ್ರಗಳು ಹಾಗೂ 15 ಹೆಚ್ಚುವರಿ ಮಳಿಗೆಗಳಲ್ಲಿ ಬೀಜ ವಿತರಣೆ ನಡೆಯುತ್ತಿದೆ. ಕಳೆದ ವರ್ಷ 255.25 ಕ್ವಿಂಟಾಲ್ ಹೆಸರುಕಾಳು ಮಾರಾಟವಾಗಿತ್ತು. 2018- 19ರಲ್ಲಿ 905.4 ಕ್ವಿಂಟಾಲ್ ಗರಿಷ್ಠ ಮಾರಾಟವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈವರೆಗೆ 732 ಕ್ವಿಂಟಾಲ್ ಮಾರಾಟವಾಗಿದೆ. 978.9 ಕ್ವಿಂಟಾಲ್ ಹೆಸರುಕಾಳು ಬೀಜಗಳಿಗೆ ಬೇಡಿಕೆ ನಿರೀಕ್ಷಿಸಲಾಗಿದೆ. 8088.7 ಕ್ವಿಂಟಾಲ್ ಸೋಯಾಬೀನ್ ಮಾರಾಟವಾಗಿದ್ದು, 14,030 ಕ್ವಿಂಟಾಲ್ ಸೋಯಾಬೀನ್

ಬೀಜಗಳಿಗೆ ಬೇಡಿಕೆ ನಿರೀಕ್ಷಿಸಲಾಗಿದೆ. 883.5 ಕ್ವಿಂಟಾಲ್ ಶೇಂಗಾ ಬೀಜ ಮಾರಾಟವಾಗಿದ್ದು, 1664 ಕ್ವಿಂಟಾಲ್ ಬೀಜಗಳಿಗೆ ಬೇಡಿಕೆ ನಿರೀಕ್ಷಿಸಲಾಗಿದೆ ಎಂದರು. ಜೂನ್ ಅಂತ್ಯದವರೆಗೆ 10,200 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದೆ. ಪ್ರಸ್ತುತ 12,544 ಮೆಟ್ರಿಕ್​ಟನ್ ರಸಗೊಬ್ಬರಗಳ ದಾಸ್ತಾನಿದೆ ಎಂದರು. ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ತೋಟಗಾರಿಕೆ ಉಪ ನಿರ್ದೇಶಕ ಡಾ. ರಾಮಚಂದ್ರ ಮಡಿವಾಳರ, ಎಲ್ಲ ತಹಸೀಲ್ದಾರರು ಹಾಜರಿದ್ದರು.

ಜಿಪಿಎಸ್​ಗೆ ಅಳವಡಿಸಲು ಸೂಚನೆ: ಕಳೆದ ವರ್ಷದ ಅತಿವೃಷ್ಟಿಯಿಂದಾಗಿ ಹಾನಿಗೀಡಾಗಿದ್ದ ಮನೆಗಳ ಪುನರ್​ನಿರ್ವಣ ಕಾರ್ಯವನ್ನು ಚುರುಕುಗೊಳಿಸಿ ಜಿಪಿಎಸ್​ಗೆ ಅಳವಡಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು. ಮನೆಗಳ ನಿರ್ಮಾಣ ಪರಿಶೀಲನೆ ನಡೆಸಿದ ಅವರು, ಜೂ. 3ರವರೆಗೆ ಎ ಕೆಟಗರಿಯ 110 ಮನೆಗಳ ನಿರ್ಮಾಣ ಆರಂಭವಾಗಿದೆ. ಇನ್ನು 8 ಮನೆಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕು. ಬಿ ಕೆಟಗರಿಯಲ್ಲಿ 1466 ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಸಿ ಕೆಟಗರಿಯ 19170 ಮನೆಗಳಲ್ಲಿ ಈಗಾಗಲೇ ಬಹುತೇಕ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಅವುಗಳನ್ನು ತ್ವರಿತವಾಗಿ ಜಿಪಿಎಸ್ ಮಾಡಬೇಕು ಎಂದು ಸೂಚಿಸಿದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net