ಜಿಲ್ಲೆಯಲ್ಲಿ ಬಿಜೆಪಿಗೆ ಟಾಂಗ್ ನೀಡಿದ ಜೆಡಿಎಸ್: ಕಮಲ ನಾಯಕರಿಗೆ ಹಿನ್ನಡೆ

ಜಿಲ್ಲೆಯಲ್ಲಿ ಬಿಜೆಪಿಗೆ ಟಾಂಗ್ ನೀಡಿದ ಜೆಡಿಎಸ್: ಕಮಲ ನಾಯಕರಿಗೆ ಹಿನ್ನಡೆ
Published on

ಹಾಸನ: ಭಾರೀ ಕುತೂಹಲ ಕೆರಳಿಸಿದ್ದ ಹಾಸನ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿಯ ಧರ್ಮ ಪಾಲನೆಯಾಗದ ಮೂಲಕ ಜಿಲ್ಲೆಯಲ್ಲಿ ಮೈತ್ರಿಗೆ ಸಹಮತವಿಲ್ಲ ಎಂಬುದು ಬಹಿರಂಗವಾಗಿ ವ್ಯಕ್ತವಾಗಿದೆ.
ನಗರಸಭೆ ಚುನಾವಣೆಯಲ್ಲಿ ಮೈತ್ರಿಯ ಧರ್ಮಪಾಲನೆಯಂತೆ ಉಳಿದಿರುವ 20 ತಿಂಗಳ ಆಡಳಿತದಲ್ಲಿ 10:10 ಅನುಪಾತದಲ್ಲಿ ಅಧಿಕಾರ ಹಂಚಿಕೊಳ್ಳೋಣ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ, ಬಹುಮತ ಹೊಂದಿದ್ದ ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟುಕೊಡಲು ಒಪ್ಪಲಿಲ್ಲ. ಉಪಾಧ್ಯಕ್ಷ ಸ್ಥಾನ ಬಿಜೆಪಿ ಸದಸ್ಯೆಯ ಪಾಲಾದರೂ ಅದು ಜೆಡಿಎಸ್ ಬೆಂಬಲಿತ ಸದಸ್ಯೆಗೆ ಸಮ್ಮತ ಸೂಚಿಸಿ ಬಿಜೆಪಿಯಿಂದ ಅಧಿಕೃತವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಪರಾಭವಗೊಳಿಸುವ ಮೂಲಕ ಜೆಡಿಎಸ್ ಬಿಜೆಪಿಗೆ ಮರ್ಮಾಘಾತ ಉಂಟು ಮಾಡಿದೆ.
35 ಸದಸ್ಯರ ಬಲವನ್ನು ಹೊಂದಿರುವ ನಗರಸಭೆಯಲ್ಲಿ 17 ಜೆಡಿಎಸ್, 14 ಬಿಜೆಪಿ ಹಾಗೂ ಕಾಂಗ್ರೆಸ್ 2, ಪಕ್ಷೇತರರಾಗಿ ಇಬ್ಬರು ಸದಸ್ಯರಿದ್ದರು. ಪಕ್ಷೇತರರು ಹಾಗೂ ಬಿಜೆಪಿಯ ಇಬ್ಬರು ಸದಸ್ಯರು ಜೆಡಿಎಸ್ ಜತೆಗೆ ಗುರುತಿಸಿಕೊಂಡಿದ್ದರು. ಬುಧವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್‌ನ 9ನೇ ವಾರ್ಡಿನ ಸದಸ್ಯ ಚಂದ್ರೇಗೌಡ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದರು. ಇನ್ನು ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಗೆದ್ದು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ 35 ನೇ ವಾರ್ಡಿನ ಸದಸ್ಯೆ ಕೆ. ಲತಾ ಸುರೇಶ್ ಅವರನ್ನು ಉಪಾಧ್ಯಕ್ಷಯನ್ನಾಗಿ ಆಯ್ಕೆ ಮಾಡುವ ಮೂಲಕ ಜೆಡಿಎಸ್ ಬಿಜೆಪಿಗೆ ತಿರುಗೇಟು ನೀಡಿದೆ. ಬಿಜೆಪಿಯಿಂದ ಶಿಲ್ಪಾ ವಿಕ್ರಂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ ಜೆಡಿಎಸ್‌ನವರು ಮೈತ್ರಿ ಧರ್ಮ ಪಾಲನೆ ಮಾಡಿದಂತೆ ಮಾಡಿ ತಮ್ಮ ಪಕ್ಷಕ್ಕೆ ಬೆಂಬಲ ನೀಡಿದ ಲತಾ ಸುರೇಶ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತನ್ನ ವಿರುದ್ಧ ಮತ ಹಾಕಿಕೊಂಡರು ಉಪಾಧ್ಯಕ್ಷರಾದ ಲತಾ:
ತನ್ನ ವಿರುದ್ಧ ತನ್ನ ಮತ ಹಾಕಿಕೊಂಡರೂ ಉಪಾಧ್ಯಕ್ಷರಾಗುವ ಮೂಲಕ ಲತಾ ಸುರೇಶ್ ಅವರು ನಗರಸಭೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಬಿಜೆಪಿ ಪಕ್ಷದಿಂದ ಶಿಲ್ಪಾ ವಿಕ್ರಂ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸಲಾಗಿತ್ತು. ಬಿಜೆಪಿಯ ಎಲ್ಲ ಸದಸ್ಯರಿಗೂ ವಿಪ್ ಜಾರಿಯಾಗಿದ್ದರಿಂದ ಎಲ್ಲ 14 ಸದಸ್ಯರು ಶಿಲ್ಪಾ ವಿಕ್ರಂ ಪರವಾಗಿ ಮತ ಚಲಾಯಿಸಿದರು. ಅದರಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಿಜೆಪಿಯ ಮತ್ತೋರ್ವ ಸದಸ್ಯೆ ಲತಾ ಸುರೇಶ್ ಅವರು ಕೂಡ ಶಿಲ್ಪಾ ವಿಕ್ರಂ ಪರವಾಗಿ ಕೈಯೆತ್ತಿದ್ದರು. ಆನಂತರ ಲತಾ ಸುರೇಶ್ ಪರವಾಗಿ ಜೆಡಿಎಸ್‌ನವರು ಕೈ ಎತ್ತುವ ಮೂಲಕ ಅವರನ್ನು ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದರು.

ಜಿಲ್ಲೆಯಲ್ಲಿಲ್ಲ ಮೈತ್ರಿ:
ಜೆಡಿಎಸ್ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡರು ಜಿಲ್ಲೆಯಲ್ಲಿ ಮಾತ್ರ ಬಿಜೆಪಿ-ಜೆಡಿಎಸ್ ಈವರೆಗೂ ಒಂದಾಗುವ ಲಕ್ಷಣಗಳು ಕಾಣುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲೂ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಅದರಲ್ಲೂ ಮಾಜಿ ಶಾಸಕ ಪ್ರೀತಂ ಗೌಡ ಬಣ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿತು. ಈ ಮೊದಲಿನಿಂದಲೂ ರೇವಣ್ಣ ಕುಟುಂಬದ ವಿರುದ್ಧ ಕೆಂಡಕಾರುತ್ತಲೇ ಬಂದಿರುವ ಪ್ರೀತಂಗೌಡ ಜಿಲ್ಲೆಯಲ್ಲಿ ಮೈತ್ರಿಗೆ ಅಪಸ್ವರ ಎತ್ತುತ್ತಲೇ ಬಂದಿದ್ದಾರೆ. ಇದೀಗ ನಗರಸಭೆಯಲ್ಲಿ ಜೆಡಿಎಸ್ ಬಿಜೆಪಿಗೆ ಟಾಂಗ್ ನೀಡುವ ಮೂಲಕ ಮೈತ್ರಿಯ ರಾಷ್ಟ್ರಮಟ್ಟದಲ್ಲಿ ಹೊರತು ಜಿಲ್ಲೆಯಲ್ಲಿ ಮೈತ್ರಿ ಇಲ್ಲ ಎಂಬುದನ್ನು ಸಾರಿದ್ದಾರೆ.

ಮೈತ್ರಿ ಕತೆ ಮುಂದೇನು?:
ಜಿಲ್ಲೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗದ ಕಾರಣ ಇದು ಮುಂದೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಬಿರುಕು ಮೂಡಿಸಬಹುದು ಎಂಬುದು ರಾಜಕೀಯ ವಿಮರ್ಶಕರ ಲೆಕ್ಕಾಚಾರವಾಗಿದೆ. ಮುಂದೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಈ ವೇಳೆ ಹಾಸನದಲ್ಲಿ ನಡೆದಂತೆ ಆಯಾ ಜಿಲ್ಲೆ, ತಾಲೂಕುಗಳಲ್ಲಿ ಸ್ಥಳೀಯ ಮುಖಂಡರು ಮೈತ್ರಿ ಧರ್ಮಪಾಲನೆಗೆ ಒಪ್ಪಿಗೆ ಸೂಚಿಸುವುದು ಕಷ್ಟ ಎನ್ನಲಾಗುತ್ತಿದೆ. ಹಾಸನದಲ್ಲಿ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ನಡೆದಂತೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿ ಎಂಬ ವಾದವನ್ನು ಎರಡೂ ಪಕ್ಷಗಳ ಸ್ಥಳೀಯ ಮುಖಂಡರು ಮುಂದಿಡಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಪ್ರೀತಂ ಗೌಡಗೆ ಹಿನ್ನಡೆ:
ಎಚ್.ಡಿ. ದೇವೇಗೌಡ ಕುಟುಂಬದ ತವರು ಜಿಲ್ಲೆಯಾದ ಹಾಸನದಲ್ಲಿ ಮಾಜಿ ಶಾಸಕ ಪ್ರೀತಂ ಗೌಡಗೆ ಮೈತ್ರಿಯಿಂದಾಗಿ ರಾಜಕೀಯ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಮೈಸೂರು ಚಲೋ ಪಾದಯಾತ್ರೆಯಲ್ಲಿ ಬಿಜೆಪಿ ಪ್ರೀತಂ ಗೌಡ ಅವರನ್ನು ಹೊರಗಿಟ್ಟಿತು. ಇದೀಗ ನಗರಸಭೆಯಲ್ಲಿ 10:10 ಅಧಿಕಾರ ಹಂಚಿಕೆಯಾಗುವ ಮೂಲಕ ಮೈತ್ರಿ ಧರ್ಮ ಪಾಲನೆಗೆ ಬದ್ಧರಾಗೋಣ ಎಂದು ಹೇಳಿದ್ದರು. ಅದಕ್ಕಾಗಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಕೂಡ ನಿಲ್ಲಿಸದೆ ಕೇವಲ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿತ್ತು. ಆದರೆ, ಜೆಡಿಎಸ್ ನೀಡಿದ ಮಾಸ್ಟರ್ ಸ್ಟ್ರೋಕ್ ಪ್ರೀತಂ ಗೌಡಗೆ ತೀವ್ರ ಮುಜುಗರ ಉಂಟು ಮಾಡಿದೆ.

ಶಾಸಕ ಸ್ವರೂಪ್ ಮೆಲುಗೈ:
ಈ ಬಾರಿ ನಗರಸಭಾ ಚುನಾವಣೆ ಅತ್ಯಂತ ಕುತೂಹಲ ಮೂಡಿಸಿತ್ತು. ಈ ಚುನಾವಣೆಯನ್ನು ಅತ್ಯಂತ ಚಾಣಾಕ್ಷತನದಿಂದ ಎದುರಿಸಿದ ಶಾಸಕ ಎಚ್.ಪಿ. ಸ್ವರೂಪ್ ಅವರು ತಮ್ಮ ಪಕ್ಷದ ಸದಸ್ಯರಿಗೆ ಅಧ್ಯಕ್ಷ ಸ್ಥಾನವನ್ನು ಕೊಡಿಸುವಲ್ಲಿ ಹಾಗೂ ತಮ್ಮ ಪಕ್ಷಕ್ಕೆ ಬೆಂಬಲ ನೀಡಿದಂತಹ ಬಿಜೆಪಿಯ ಸದಸ್ಯೆಗೆ ಉಪಾಧ್ಯಕ್ಷ ಸ್ಥಾನ ಕೊಡಿಸುವ ಮೂಲಕ ಎದುರಾಳಿ ಪಕ್ಷಕ್ಕೆ ತಿರುಗೇಟು ನೀಡಿ ಮೇಲುಗೈ ಸಾಧಿಸಿದ್ದಾರೆ. ಆದರೆ ಪ್ರೀತಂ ಗೌಡ ಅವರು ತಮ್ಮೆಲ್ಲ ಸದಸ್ಯರಿಗೆ ಪಕ್ಷದಿಂದ ವಿಪ್ ಜಾರಿ ಮಾಡಿಸುವ ಮೂಲಕ ತಮ್ಮ ಪಕ್ಷದ ಶಿಲ್ಪಾ ವಿಕ್ರಂ ಅವರನ್ನು ಉಪಾಧ್ಯಕ್ಷನ್ನಾಗಿ ಮಾಡಲು ಸಾಕಷ್ಟು ರಣತಂತ್ರ ಹೆಣೆದಿದ್ದರು. ಆದರೆ ಆ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಹೊಡೆದು ಪ್ರೀತಂ ಗೌಡ ಮತ್ತು ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net