ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠ : ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ; ಪರಿಷತ್ ಚುನಾವಣೆ ಗಂಭೀರವಾಗಿ ಪರಿಗಣಿಸಿ

15 15 KUNIGAL 1
Published on

ಕುಣಿಗಲ್ : ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಗೆ ವಿಧಾನಪರಿಷತ್ ಚುನಾವಣೆ ಮೆಟ್ಟಿಲಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಪಟ್ಟಣದ ಎಸ್.ಎಸ್.ಪಾರ್ಟಿ ಹಾಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಚುನಾವಣೆಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಕೇಂದ್ರದಲ್ಲಿ ಇನ್ನೂ ಎರಡುವರೆ ವರ್ಷ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುತ್ತದೆ. ರಾಜ್ಯದಲ್ಲಿಯೂ ಇನ್ನೂ ಒಂದೂವರೆ ವರ್ಷ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುತ್ತದೆ. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಗ್ರಾಪಂ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಲೋಕಸಭಾ ಚುನಾವಣೆ, ಶಿರಾ ಉಪಚುನಾವಣೆ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲವು ಸಾಧಿಸಿರುವುದೆ ಇದಕ್ಕೆ ಸಾಕ್ಷಿಯಾಗಿದೆ. ಆದರೂ ನಾವು ಉದಾಸೀನ ಮಾಡದೆ ಪರಿಷತ್ ಚುನಾವಣೆ ಗಂಭೀರವಾಗಿ ತೆಗೆದುಕೊಂಡು ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಳ್ಳಭೇಕಾಗಿದೆ ಎಂದರು.

ರಾಜ್ಯ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾದ ಡಿ.ಕೃಷ್ಣಕುಮಾರ್, ಜಿಲ್ಲಾ ಎಸ್‌ಸಿ ಬಿಜೆಪಿ ಮೋರ್ಚಾದ ಅಧ್ಯಕ್ಷರಾದ ವೈ.ಎಚ್.ಹುಚ್ಚಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್.ಬಲರಾಮು, ವಿಧಾನ ಪರಿಷತ್ ಬೊಜೆಪಿ ಅಭ್ಯರ್ಥಿ ಹುಲಿನಾಯಕ್, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸುಜಾತಾ ಚಂದ್ರಶೇಖರ್ ಇದ್ದರು.

ಮಾರ್ಕೋನಹಳ್ಳಿ ಮಂಗಳಾ ಲಿಂಕ್ ಕೆನಾಲ್ ಮಂಜೂರು : ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳಾ ಜಲಾಶಯಕ್ಕೆ ಲಿಂಕ್ ಕೆನಾಲ್ ಯೋಜನೆಗೆ ಸರ್ಕಾರ ಬದ್ಧವಾಗಿದೆ. ಇದಕ್ಕೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ, ವಿಧಾನ ಪರಿಷತ್ ಚುನಾವಣೆ ಇಲ್ಲದಿದ್ದರೆ, ಈ ವೇಳೆಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗುತ್ತಿತ್ತು. ಚುನಾವಣೆ ನಂತರ ಲಿಂಕ್ ಕೆನಾಲ್ ಮಂಜೂರಾತಿ ನೀಡಿ ಭೂಮಿ ಪೂಜೆ ನೆರವೇರಿಸಲಾಗುವುದೆಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಡಿ.ಕೃಷ್ಣಕುಮಾರ ಅವರೇ ನಮ್ಮ ಅಭ್ಯರ್ಥಿ : ಕಳೆದ ಮೂರು ವಿಧಾನಸಭೆ ಚುನಾವಣೆಯಲ್ಲಿಯೂ ಡಿ.ಕೃಷ್ಣಕುಮಾರ್ ಸೋತ್ತಿದ್ದರೂ ಪಕ್ಷ ಸಂಘಟನೆಯಲ್ಲಿಯೇ ಮುಂದುವರಿದುಕೊಂಡು ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಖಂಡಿತಾ ಗೆದ್ದು ಶಾಸಕರಾಗಲಿದ್ದಾರೆ. ಯಾರಿಗೂ ಅನುಮಾನವೇ ಬೇಡ ಎಂದು ಸಚಿವ ಮಾಧುಸ್ವಾಮಿ ಕಾರ್ಯಕರ್ತರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಜೆಡಿಎಸ್ ಏರುಪೇರು : ಜಿಲ್ಲೆಯಲ್ಲಿ ಜೆಡಿಎಸ್ ಏರುಪೇರಾಗುತ್ತಿದೆ. ಇದರ ಲಾಭವನ್ನು ಬೇರೆಯವರಿಗೆ ಬಿಟ್ಟುಕೊಡದೆ ಬಿಜೆಪಿ ಪಾಲಾಗುವಂತೆ ಮಾಡಿಕೊಳ್ಳಬೇಕು. ಗುಬ್ಬಿ ಶಾಸಕ ಶ್ರೀನಿವಾಸ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕಾಂತರಾಜು ಜೆಡಿಎಸ್ ತೊರೆಯುವ ಯೋಚನೆಯಲ್ಲಿದ್ದಾರೆ. ಆದ್ದರಿಂದ ಬಿಜೆಪಿ ಇದರ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮೂಕರಾಗಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕುಣಿಗಲ್ ರಾಜಕೀಯವಾಗಿ ಬಹಳ ಬಲಿಷ್ಠವಾದ ತಾಲೂಕು. ವಿಧಾನ ಪರಿಷತ್ ಚುನಾವಣೆಗೆ ಅತೀ ಹೆಚ್ಚು ಮತಗಳನ್ನು ಕೊಡಿಸುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಸಂದೇಶ ರವಾನಿಸುವ ಕೆಲಸವನ್ನು ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕಾಗಿದೆ. ಬಿ.ಸುರೇಶ್‌ಗೌಡ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net