

ಹಾಸನ: ಜಿಲ್ಲೆಯಲ್ಲಿ ಪ್ರತಿ ತಿಂಗಳು 45 ರಿಂದ 50 ಹೊಸ ಹೆಚ್.ಐ.ವಿ. ಸೋಂಕಿತ ಪ್ರಕರಣಗಳು ದಾಖಲಾಗುತ್ತಿದೆ. ಅದರಲ್ಲಿಯೂ ಹದಿಯರೆಯದವರೇ ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬಿ. ಸಂಧ್ಯಾ ಬೇಸರ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ ಕಾಲೇಜಿನ ರೆಡ್ ರಿಬ್ಬನ್ ಘಟಕದ ವತಿಯಿಂದ ಆಯೋಜಿಸಿದ್ದ ಎಚ್.ಐ.ವಿ. ಏಡ್ಸ್ ಅರಿವು ಕಾರ‌್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಎಚ್.ಐ.ವಿ. ಪ್ರಕರಣಗಳಲ್ಲಿ ಜೀವನಪೂರ್ತಿ ಚಿಕಿತ್ಸೆ ತೆಗೆದುಕೊಳ್ಳಬೇಕು. ಅಸುರಕ್ಷಿತ ಲೈಂಗಿಕತೆಯಿಂದ, ತಾಯಿಯಿಂದ ಮಗುವಿಗೆ ಬರುವಂತಹದ್ದು, ಎಚ್‌ಐವಿ ಸೋಂಕಿತರ ಸೂಜಿಯನ್ನು ಮತ್ತೆ ಬೇರೆ ವ್ಯಕ್ತಿಗೆ ಉಪಯೋಗಿಸಿದರೆ ಎಚ್.ಐ.ವಿ. ಬರುತ್ತಿದೆ. ತಾಯಿ-ತಂದೆ ಇಬ್ಬರು ಸೋಂಕಿತರಿದ್ದರೂ ಮಕ್ಕಳಿಗೆ ಬಾರದಂತೆ ತಡೆಗಟ್ಟುವಂತೆ ಈಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಂತೆ ಮತ್ತು ಮಾರುಕಟ್ಟೆಗಳಲ್ಲಿ ಟ್ಯಾಟೂ ಹಾಕುವುದರಿಂದಲೂ ಪದೇ ಪದೇ ಅದೇ ಸೂಜಿಯನ್ನು ಬಳಸುವುದರಿಂದ ಸೋಂಕು ಹರಡಬಹುದು. ಡ್ರಗ್ ತೆಗೆದುಕೊಳ್ಳುವಾಗಲೂ ಕೆಲವೊಮ್ಮೆ ಬರಬಹುದು. ಆದರೆ ಹೆಚ್ಚಿನ ಪ್ರಕರಣಗಳು ಅಸುರಕ್ಷಿತ ಲೈಂಗಿಕತೆಯಿಂದಲೇ ದಾಖಲಾಗುತ್ತಿದೆ. ಕೆಲ ಹುಚ್ಚಾಟಕ್ಕೆ ಸಿಲುಕಿ ಎಷ್ಟೋ ಹೆಣ್ಣು ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ರೀತಿಯ ಜಾಗೃತಿಯನ್ನು ಪ್ರತಿಯೊಬ್ಬರೂ ಅನುಭವಿಸಿದರೆ ಹೆಚ್‌ಐವಿ ಸೋಂಕನ್ನು ನಿಯಂತ್ರಿಸಬಹುದು. ಪದೇ ಪದೇ ಅರಿವು ಕಾರ‌್ಯಕ್ರಮಗಳನ್ನು ನಡೆಸುವ ಅನಿವಾರ್ಯತೆಯಿದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಬೇರೆ ಬೇರೆ ವಿಚಾರವನ್ನು ಅನುಕರಿಸುವುದಿದೆ. ಈ ವಿಚಾರವನ್ನು ಅನುಸರಿಸುವುದಿಲ್ಲ. ಹೆಚ್‌ಐವಿ ಪ್ರಕರಣದಲ್ಲಿ ಇಂಡಿಯಾ ಫಸ್ಟ್ ಎಂಬುದು ಆತಂಕಕಾರಿ ವಿಚಾರವಾಗಿದೆ ಎಂದು ಹೇಳಿದರು.
ಕಾಲೇಜಿನ ರೆಡ್ ರಿಬ್ಬನ್ ಘಟಕದ ಸಂಚಾಲಕಿ ಪ್ರಮೀಳಾ ಮಾತನಾಡಿ, ಎಚ್.ಐ.ವಿ. ಮತ್ತು ಏಡ್ಸ್ ಬಗ್ಗೆ ಅರಿವು ಪ್ರತ್ಯೇಕವಾಗಿ ವಿದ್ಯಾರ್ಥಿಗಳಿಗೆ ತಲುಪಸಲೇಬೇಕು ಎಂಬ ಉದ್ದೇಶದಿಂದ ಕಾರ‌್ಯಕ್ರಮ ಆಯೋಜಿಸಲಾಗಿತ್ತು. ಎಚ್.ಐ.ವಿ. ಎನ್ನುವ ಸೋಂಕು ಬಂದರೆ ವ್ಯಕ್ತಿಯಲ್ಲಿರುವ ರೋಗ ನಿರೋಧಕ ಶಕ್ತಿಯನ್ನ ಕುಂದಿಸುತ್ತದೆ. ಆ ಮೂಲಕ ವ್ಯಕ್ತಿಯ ದೇಹವನ್ನ ಅನೇಕ ಕಾಯಿಲೆಗಳಿಗೆ ಆವಾಸ ಸ್ಥಾನವಾಗಿಸುತ್ತದೆ. ಚಿಕಿತ್ಸೆ ಪಡೆಯದೆ ಹೋದರೆ 10 ವರ್ಷದ ನಂತರ ಏಡ್ಸ್ ಆಗಿ ಪರಿವರ್ತನೆ ಆಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡ್ಯಾಪ್ಕ್ಯೊ ವಿಭಾಗದ ಜಿಲ್ಲಾ ಮೇಲ್ವಿಚಾರಕ ರವಿಕುಮಾರ್ ಬಲ್ಲೇನಹಳ್ಳಿ ಮಾತನಾಡಿ, ಯುವಜನತೆ ಸಣ್ಣ ಸಣ್ಣ ಆಸೆಗಳಿಗೆ ಮಾರು ಹೋಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸೋಂಕಿತ ಎಷ್ಟೋ ಪ್ರಕರಣಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಆದರ್ಶಗಳೇ ಇಲ್ಲದಂತೆ ಯುವಜನತೆ ಬದುಕುತ್ತಿದ್ದಾರೆ. ತಂದೆ-ತಾಯಿಗಳು ಎಂದಿಗೂ ತಮ್ಮ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ ಬೇರೊಬ್ಬರ ಮೇಲೆ ಅದರ ಹೊರೆಯನ್ನು ಹಾಕುತ್ತಾರೆ. ಆದರೆ ಮಕ್ಕಳು ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಜೀವನ ಎನ್ನುವುದು ಅಮೂಲ್ಯವಾದುದ್ದು. ನಿಮ್ಮ ಆಸೆ-ಆಮಿಷಗಳಿಗೆ ನೀವೇ ಬಲಿಯಾಗುತ್ತಿದ್ದೀರಿ. ಏಡ್ಸ್ ಬರುವ 4 ಮಾರ್ಗಗಳಿಂದ ದೂರವಿರಿ. ಆ ರೀತಿಯ ಕೀ ನಿಮ್ಮಲ್ಲಿಯೇ ಇದೆ. ಅದನ್ನು ಅರಿಯಿರಿ ಎಂದು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ. ಇರ್ಷಾದ್ ಮಾತನಾಡಿ, ಪ್ರತಿ ಮನೆಯಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ. ಅವರ ತಂದೆ-ತಾಯಿಗಳು ನೂರಾರು ಕನಸನ್ನು ಕಾಣುತ್ತಿರುತ್ತಾರೆ. ಜಾಗೃತವಾಗಿ ಜೀವನವನ್ನು ನಡೆಸಬೇಕಾಗಿದೆ ಎಂದು ಆತಂಕವ್ಯಕ್ತಪಡಿಸಿರು. ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವುದು ಬಹಳ ಅಗತ್ಯವಿದೆ. ಕ್ಷಣಿಕ ಸುಖ ಬದುಕನ್ನು ಬಲಿತೆಗೆದುಕೊಳ್ಳಬೇಕು. ಆಕರ್ಷಣೆಯ ಪ್ರಪಂಚಕ್ಕೆ ಮಾರು ಹೋಗದೆ ಸಮಾಜಕ್ಕೆ ಆಸ್ತಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ, ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಿ.ಕೆ.ಪವನ್, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಎಂ.ಪಿ.ಗೋಪಾಲ್, ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಿ. ಸುರೇಶ್ ಇತರರು ಇದ್ದರು.