ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ. 20ಕ್ಕೆ ಇಳಿಕೆ

29 YLP 02 (Hebbar Meeting)
Published on

ಯಲ್ಲಾಪುರ: ಪಟ್ಟಣದ ಅರಣ್ಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಶನಿವಾರ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮ, ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ. ಜಿಲ್ಲೆಯ ನಾಲ್ಕು ಕಡೆ ಸಿಟಿ ಸ್ಕ್ಯಾನ್ ವ್ಯವಸ್ಥೆ ಮಾಡುವ ಪ್ರಯತ್ನ ನಡೆದಿದೆ. ಯಲ್ಲಾಪುರ, ಮುಂಡಗೋಡ ಸೇರಿ ಅಗತ್ಯ ಇರುವ ಕಡೆಗಳಲ್ಲಿ ಡಯಾಲಿಸಿಸ್ ಸೆಂಟರ್ ಪ್ರಾರಂಭಗೊಳ್ಳಲಿದೆ. ಎಲ್ಲ ತಾಲೂಕುಗಳಲ್ಲಿ ಲಾಕ್​ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು. ಜಿಲ್ಲೆಯಲ್ಲಿ ಶೇ. 47 ದಾಟಿದ್ದ ಪಾಸಿಟಿವಿಟಿ ರೇಟ್ ಇದೀಗ ಶೇ. 20 ಕ್ಕಿಳಿದಿದೆ. ಒಂದು ವಾರದಲ್ಲಿ ಶೇ. 10ಕ್ಕಿಂತ ಕಡಿಮೆಯಾಗಲು ಶ್ರಮಿಸಬೇಕು ಎಂದು ಸೂಚಿಸಿದರು.

ಎರಡನೇ ಅಲೆ ಎದುರಿಸಲು ಅಗತ್ಯ ವ್ಯವಸ್ಥೆಗಳು ನಮ್ಮಲ್ಲಿದ್ದು, ಮೂರನೇ ಅಲೆ ಎದುರಿಸಲು ಈಗಿನಿಂದಲೇ ಸಿದ್ಧತೆ ನಡೆಯಬೇಕು. ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಎದುರಾಗಲಿದೆ ಎಂಬ ಮಾಹಿತಿ ಇದೆ. ಹೆಚ್ಚುವರಿಯಾಗಿ ಕೋವಿಡ್ ಕೇರ್ ಸೆಂಟರ್​ಗಳನ್ನು ತೆರೆಯಲು ಸೂಕ್ತ ಸ್ಥಳ ಗುರುತಿಸಿ, ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳೊಂದಿಗೆ ಆಸ್ಪತ್ರೆಗೆ ಪಾಲಕರೂ ಬರಲಿದ್ದು, ಅವರಿಗೂ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ನಿವೃತ್ತ ಮಕ್ಕಳ ತಜ್ಞರನ್ನು ಸಂರ್ಪಸಿ, ಅಗತ್ಯ ಸಲಹೆ ಪಡೆಯಬೇಕು. ಈಗಿನಿಂದಲೇ ಸಿದ್ಧಗೊಂಡರೆ ಯಾವ ಸಮಸ್ಯೆಯೂ ಆಗದಂತೆ ಮೂರನೇ ಅಲೆಯನ್ನು ಎದುರಿಸಬಹುದು ಎಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಪ್ರಿಯಾಂಗಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ ನಾಯ್ಕ, ಉಪವಿಭಾಗಧಿಕಾರಿ ಆಕೃತಿ ಬನ್ಸಾಲ್, ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ಡಿಸಿಎಫ್ ಗೋಪಾಲಕೃಷ್ಣ ಹೆಗಡೆ, ಪಿಐ ಸುರೇಶ ಯಳ್ಳೂರ, ತಾಪಂ ಇಒ ಜಗದೀಶ ಕಮ್ಮಾರ ಇತರರಿದ್ದರು. ಇದಕ್ಕೂ ಮುನ್ನ ಅಧಿಕಾರಿಗಳು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ ಕೇರ್ ಸೆಂಟರ್, ಆಕ್ಸಿಜನ್ ಪ್ಲಾಂಟ್, ಲಸಿಕೆ ವಿತರಣೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net