

ಬೆಂಗಳೂರು ಗ್ರಾಮಾಂತರ: ಗ್ರಾಮಾಂತರ ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿಮಾಡುವ ನಿಟ್ಟಿನಲ್ಲಿ ಸರ್ಕಾರದ ಮೂಲಕ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಲಾಗುತ್ತಿದೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕು ದೊಡ್ಡಗಟ್ಟಿಗನಬ್ಬೆ ಪಂಚಾಯಿತಿಯ ಕಣ್ಣೂರಹಳ್ಳಿ ಹಾಗೂ ಜಿನ್ನಾಗರದಲ್ಲಿ ಎಂಎಲ್‌ಸಿ ಅನುದಾನದಡಿ ತಲಾ 5 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೆಸಿ ವ್ಯಾಲಿ, ಏತನೀರಾವರಿ ಮೂಲಕ ಗ್ರಾಮಾಂತರ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿ ಜಿಲ್ಲೆಯನ್ನು ಹಸಿರುಮಯ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಲೇ ಇದೆ, ಸರ್ಕಾರವೂ ಸ್ಪಂದಿಸುತ್ತಿದೆ ಎಂದು ಹೇಳಿದರು.
ದೊಡ್ಡಗಟ್ಟಿಗನಬ್ಬೆಯಲ್ಲಿ ಅಭಿವೃದ್ಧಿ ಪರ್ವ:
ಈ ಹಿಂದೆ ಶಾಸಕನಾಗಿದ್ದಾನ ದೊಡ್ಡಗಟ್ಟಿಗನಬ್ಬೆ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿ, ಕುಡಿಯುವ ನೀರಿನ ಸೌಲಭ್ಯ ಸೇರಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ. ಉಪಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ವಿಧಾನಪರಿಷತ್ ಸದಸ್ಯರ ಅನುದಾನದಡಿ ಅಭಿವೃದ್ಧಿ ಕಾಮಗಾರಿ ಮುಂದುವರೆಸಿದ್ದೇನೆ ಎಂದು ಸಚಿವ ಎಂಟಿಬಿ ಹೇಳಿದರು.
ಪ್ರತಿ ಗ್ರಾಮಗಳಲ್ಲೂ ಸುಮಾರು 2 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕೆಲಸಗಳು ಆಗಿವೆ, ಮುಂದಿನ ದಿನಗಳಲ್ಲೂ ಇದು ಮುಂದುವರಿಯಲಿದೆ ಎಂದು ಭರವಸೆ ನೀಡಿದರು.
35 ಕೋಟಿ ರೂ. ಮೀಸಲು: ಬಿ.ಎಸ್.ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಹೊಸಕೋಟೆ ತಾಲೂಕಿನ ಅಭಿವೃದ್ಧಿಗೆ 35 ಕೋಟಿ ರೂ.ಅನುದಾನ ಮೀಸಲಿಟ್ಟಿದ್ದರು. ಅದರ ಅನುದಾನದಡಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ, ಲೋಕೋಪಯೋಗಿ, ಜಿಪಂ, ನಗರೋತ್ಥಾನ ಸೇರಿ ವಿವಿಧ ಅನುದಾನಗಳಡಿ ಕೆಲಸ ಆರಂಭವಾಗಿವೆ ಎಂದು ಸಚಿವರು ಹೇಳಿದರು.
ನೀರು ಹರಿಸಲು ಹೆಚ್ಚುವರಿ ಅನುದಾನ: ಈ ಹಿಂದೆ ಸರ್ಕಾರ ಕೆರೆಗಳಿಗೆ ನೀರು ಹರಿಸುವ ಯೋಜನೆಯಡಿ 100 ಕೋಟಿ ರೂ.ಅನುದಾನ ಬಿಡುಗಡೆ ಮಾಡಿತ್ತು, ಈಗ ಇದೇ ಯೋಜನೆಯಡಿ ಮತ್ತಷ್ಟು ಕೆರೆಗಳನ್ನು ಸೇರಿಸಿದ್ದು ಹೆಚ್ಚುವರಿಯಾಗಿ 48 ಕೋಟಿ ರೂ.ಅನುದಾನ ನೀಡಿದೆ, ಈ ಯೋಜನೆಯಡಿ ದೊಡ್ಡಗಟ್ಟಿಗನಬ್ಬೆ ಪಂಚಾಯಿತಿ ವ್ಯಾಪ್ತಿಯ ಕೆರೆಗಳು ಸೇರ್ಪಡೆಗೊಂಡಿವೆ, ಇನ್ನೇನು ಕೆಲವೇ ತಿಂಗಳಲ್ಲಿ ಕೆರೆಗಳಿಗೆ ನೀರು ಹರಿಯಲಿದ್ದು, ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ವರದಾನವಾಗುವ ಕಾಲ ಸನ್ನಿಹಿತವಾಗಿದೆ ಎಂದು ಸಚಿವರು
ವಂಚನೆ ಮಾಡಿದರೆ ಯಾವ ಪಕ್ಷವಾದರೂ ಒಂದೇ!: ಆದಾಯ ತೆರಿಗೆ ಇಲಾಖೆಯೊಂದು ಸ್ಪತಂತ್ರ ಸಂಸ್ಥೆಯಾಗಿದ್ದು ಯಾರೂ ತೆರಿಗೆ ವಂಚನೆ ಮಾಡುತ್ತಾರೋ ಅಂಥವರ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತದೆ. ಈ ಇಲಾಖೆ ಮೇಲೆ ಯಾರೂ ಪ್ರಭಾವ ಬೀರಲು ಸಾಧ್ಯವಿಲ್ಲ, ವಂಚನೆ ಮಾಡಿದರೆ ಯಾವ ಪಕ್ಷವಾದರೂ ಆ ಸಂಸ್ಥೆ ಅಧಿಕಾರಿಗಳಿಗೆ ಒಂದೇ, ಅವರಿಗೆ ಪಕ್ಷದ ನೆರಳಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ ನೀಡಿದರು.