ಜಿಲ್ಲೆಯಲ್ಲಿ ನಾಲ್ವರ ರಕ್ತದ ಮಾದರಿ ಪರೀಕ್ಷೆ

16gkn1-a-
Published on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾದ 6 ರೋಗಿಗಳ ರಕ್ತದ ಮಾದರಿಗಳನ್ನು ಇದುವರೆಗೆ ಕೊವಿಡ್-19 ಪರೀಕ್ಷೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕಳಿಸಲಾಗಿದೆ.

ಅದರಲ್ಲಿ 4 ಜನರಿಗೆ ಕರೊನಾ ಸೋಂಕು ಕಂಡು ಬಂದಿಲ್ಲ. ಇನ್ನಿಬ್ಬರ ಬಗ್ಗೆ ಇನ್ನಷ್ಟೇ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದ್ದಾರೆ.

ಕಾರವಾರದಲ್ಲಿ ಜ್ವರ ಹಾಗೂ ಶೀತಕ್ಕೆ ತುತ್ತಾದ ವೃದ್ಧೆಯೊಬ್ಬರನ್ನು ಕ್ರಿಮ್ಸ್​ನಲ್ಲಿರುವ ಕರೊನಾ ವಿಶೇಷ ಐಸೋಲೇಶನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ರಕ್ತದ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಇನ್ನೊಬ್ಬ ಸ್ವೀಡನ್ ದೇಶದ 72 ವರ್ಷದ ಪ್ರಜೆ ಅಸ್ತಮಾದಿಂದ ಕುಮಟಾ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನೂ ಐಸೋಲೇಶನ್ ವಾರ್ಡ್​ನಲ್ಲಿ ಇರಿಸಲಾಗಿದೆ. ಇಬ್ಬರ ರಕ್ತದ ಮಾದರಿಗಳನ್ನು ಕುಮಟಾ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಕರೊನಾ ವೈರಸ್ ಹರಡದಂತೆ ಜಿಲ್ಲೆಯಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಅವರು ವಿವರಿಸಿದ್ದಾರೆ.

ಫಾಸ್ಟ್ ಫುಡ್ ಅಂಗಡಿ ಬಂದ್ : ಸಿದ್ದಾಪುರ: ತಾಲೂಕು ಆಡಳಿತದ ಸೂಚನ ಮೇರೆಗೆ ಪಟ್ಟಣದ 150ಕ್ಕೂ ಹೆಚ್ಚು ಫಾಸ್ಟ್ ಫುಡ್ ಅಂಗಡಿಗಳು ಹಾಗೂ ಟಿಎಸ್​ಎಸ್ ಸೂಪರ್ ಮಾರ್ಕೆಟ್ ಅನ್ನು ಕೆಲ ದಿನಗಳವರೆಗೆ ಬಂದ್ ಮಾಡಲಾಗಿದೆ. ಜತೆಗೆ ಎಲ್ಲ ಕಡೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ.

ಕರೊನಾ ವ್ಯಾಪಕವಾಗಿ ಹರಡುತ್ತಿರುವ ಸುದ್ದಿಯಿಂದಾಗಿ ತಾಲೂಕಿನ ಬೇಡ್ಕಣಿಯ ಮೋಹನ ನಾಯ್ಕ ಹಾಗೂ ಆತನ ಪುತ್ರ ಬಿ.ಎಂ. ಕೌಶಿಕ ಅವರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಇಬ್ಬರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.

ಪಾರ್ಶ್ವವಾಯು ಚಿಕಿತ್ಸೆ ಬಂದ್: ಗೋಪಶಿಟ್ಟಾ ಗ್ರಾಪಂ ವ್ಯಾಪ್ತಿಯ ಸೇಂಟ್ ಮೇರಿ ಬಿಯಾತ್ರಿಸ್ ಪಾರ್ಶ್ವವಾಯು ಚಿಕಿತ್ಸೆಯ ಆಸ್ಪತ್ರೆಯನ್ನು ಮಾ.28 ರವರೆಗೆ ಬಂದ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನಿತ್ಯ ನೂರಾರು ಜನ ಬರುತ್ತಾರೆ. ಅವರಲ್ಲಿ ಸೋಂಕು ಇರುವ ಅಪಾಯವಿದ್ದು, ಕ್ರಮ ವಹಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಇದರಿಂದ ಗ್ರಾಪಂ ಆಸ್ಪತ್ರೆಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ಈ ಕ್ರಮ ವಹಿಸಿದೆ.

ವಿವಿಧ ದೇವಾಲಯಗಳಲ್ಲಿ ಪೂಜೆ: ಶಿರಸಿ: ಕರೊನಾ ವೈರಸ್​ನಿಂದ ಯಾವುದೇ ತೊಂದರೆಗಳು ಉಂಟಾಗದಂತೆ ಕಾಪಾಡೆಂದು ತಾಲೂಕಿನ ಪುಣ್ಯ ಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವರಿಗೆ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕರೊನಾ ಸೋಂಕು ಹರಡದಂತೆ ಹಾಗೂ ಸೋಂಕು ತಗುಲಿದವರ ಆರೋಗ್ಯ ಸುಧಾರಣೆಗೆ ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಜತೆಗೆ ಕರೊನಾ ಸೋಂಕು ದೇಶದಿಂದ ದೂರ ಸರಿದಲ್ಲಿ ಮಂಜುಗುಣಿಯಲ್ಲಿ ಸುದರ್ಶನ ಮತ್ತು ಧನ್ವಂತರಿ ಹವನ ಮಾಡಿಸಿಕೊಡುವದಾಗಿ ಅರಿಕೆ ಮಾಡಿಕೊಂಡರು. ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಐವರು ವಿದೇಶಿ ಪ್ರವಾಸಿಗರ ಆಗಮನ: ಗೋಕರ್ಣ: ಇಲ್ಲಿನ ಮಾದನಗೇರಿಯ ಗೋಕರ್ಣ ರೋಡ್ ರೈಲು ನಿಲ್ದಾಣದಲ್ಲಿ ಒಟ್ಟು 11 ವಿದೇಶಿಯರು ಕೇರಳದಿಂದ ಸೋಮವಾರ ಬಂದಿದ್ದಾರೆ. ಒಂದು ವಾರದ ನಂತರ ಹೊರಗಿನಿಂದ ಹೊಸದಾಗಿ ಬಂದ ವಿದೇಶಿಯರ ತಂಡ ಇದಾಗಿದೆ. ಇವರ ಪೈಕಿ ಐವರು ಜರ್ಮನ್ ಮತ್ತು ಇಟಲಿಯಿಂದ ಮಾ. 8ರಂದು ಹೊರಟು ನೇರವಾಗಿ ಕೇರಳಕ್ಕೆ ಬಂದಿದ್ದಾರೆ. ಉಳಿದ ಆರು ಜನ ವಿದೇಶಿಯರು ಒಂದು ತಿಂಗಳ ಹಿಂದೆಯೇ ಭಾರತಕ್ಕೆ ಬಂದವರಾಗಿದ್ದಾರೆ. ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಮತ್ತು ಸಿಬ್ಬಂದಿ ಇವರೆಲ್ಲರನ್ನೂ ಪರೀಕ್ಷಿಸಿ ಅವರಿಂದ ಘೊಷಣಾ ಪತ್ರ ಪಡೆದಿದ್ದಾರೆ. ಇವರಲ್ಲಿ ಕರೊನಾ ಕುರಿತಾದ ಯಾವುದೇ ಲಕ್ಷಣಗಳಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ. ಮಾ. 1ರಿಂದ ಸೋಮವಾರದವರೆಗೆ ಆರೋಗ್ಯ ಇಲಾಖೆಯು 316 ಪ್ರಯಾಣಿಕರನ್ನು ಪರೀಕ್ಷಿಸಿದೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net