ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣದಲ್ಲಿ 18 ಮಂದಿ ಬಂಧನ

ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣದಲ್ಲಿ 18 ಮಂದಿ ಬಂಧನ
Published on

ಹಾಸನ: ಜಿಲ್ಲೆಯ ವಿವಿಧ ಠಾಣೆಯಲ್ಲಿ ನಡೆದಂತಹ ಅಪರಾಧ ಪ್ರಕರಣದಲ್ಲಿ ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ಕಳೆದ ಜೂನ್ 27ರಂದು ಸಕಲೇಶಪುರ ತಾಲೂಕು ಹಾನಬಾಳ್ ಹೋಬಳಿ, ಕ್ಯಾಮನಹಳ್ಳಿ ಗ್ರಾಮದ ದಯಾನಂದ ಎಂಬುವರಿಗೆ ಸೇರಿದ ಗರ್ಭಿಣಿ ಎಮ್ಮೆಯನ್ನು ಅದೇ ಗ್ರಾಮದ ಎಬಿಸಿ ಕಾಫಿ ತೋಟದೊಳಗೆ ಹತ್ಯೆ ಮಾಡಿದ ಸಂದರ್ಭದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು. ಉಳಿದ ಆರು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಮೀರ್ (27), ಮಹಮದ್ ಸಫ್ ವಾನ್ (20), ಮೊಹಮ್ಮದ್ ಅಶ್ರಫ್ (25), ಡಿ.ಕೆ. ಉಬೈದಾ (30), ಅಬ್ದುಲ್ ಸಲಾಂ (28) ಜಾಕ್ರಿಯಾ (35) ಎಂಬುವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರು ಎಲ್ಲಾ ಆರೋಪಿಗಳು ಹಾನಬಾಳ್ ಹೋಬಳಿಯ ದೇಖ್ಲಾ ಗ್ರಾಮದವರು ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.

ಜೂಜಾಡುತ್ತಿದ್ದ 9 ಮಂದಿ ವಶಕ್ಕೆ

ಮತ್ತೊಂದು ಪ್ರಕರಣದಲ್ಲಿ ಅಕ್ರಮವಾಗಿ ಹಣ ಕಟ್ಟಿಕೊಂಡು ಜೂಜಾಡುತ್ತಿದ್ದ 9 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅವರಿಂದ 52,290 ರೂ. ನಗದು, 6 ಮೊಬೈಲ್ 3 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ತಾಲೂಕಿನ ಹೊಳೇತಿಮ್ಮನಹಳ್ಳಿ ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಖಾಸಗಿ ಕಾಲೇಜು ಹಿಂಭಾಗದಲ್ಲಿ ಜೂಜಾಡುತ್ತಿರುವ ಬಗ್ಗೆ ಗ್ರಾಮಾಂತರ ಠಾಣೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ ಜೂಜಾಡುತ್ತಿದ್ದ ನಾಗೇಶ್, ಶ್ರೀನಿವಾಸ್, ನಾಗೇಶ್, ಚಂದು, ಕುಮಾರಸ್ವಾಮಿ, ಮಹೇಶ್, ಅಶೋಕ್, ಯೋಗೇಶ್, ಮೋಹನ್ ಎಂಬುವವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಾರಿನಲ್ಲಿ ಗಾಂಜಾ ಮಾರಾಟ; ಇಬ್ಬರ ಬಂಧನ

ನಗರದ 80 ಫೀಟ್ ರಸ್ತೆಯ ಹುಣಸಿನ ಕೆರೆಕೋಡಿ ಹತ್ತಿರ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್.ಪಿ.ತಿಳಿಸಿದರು.

ಆರೋಪಿಗಳು ಸಕಲೇಶಪುರ ತಾಲೂಕು, ಬೆಳಗೋಡು ಹೋಬಳಿಯ ಗೋಳಗೊಂಡ ಗ್ರಾಮದ ಮಹಮದ್ ಶಾನ್ (22) ಹಾಗೂ ಕಾಕನ ಮನೆ ಗ್ರಾಮದ ಸಲ್ಮಾನ್ ಜಾವೀದ್ (30) ಎಂಬುವವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರು ಮಾರಾಟಕ್ಕೆ ತಂದಿದ್ದ 25 ಸಾವಿರ ರೂಪಾಯಿ ಮೌಲ್ಯದ 580 ಗ್ರಾಂ ತೂಕದ ಗಾಂಜಾ ಸೊಪ್ಪು ಹಾಗೂ ಮಾರುತಿ 800 ಕಾರನ್ನ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

---

ಅವಹೇಳನಕಾರಿ ಪೋಸ್ಟ್; ಆರೋಪಿ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಂತಹ ಆರೋಪಿ ಡಿ.ಕೆ. ಸ್ವಾಮಿ ಎಂಬಾತನನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ ಪಿ ತಿಳಿಸಿದರು.

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಕೋಡಿಬೆಳಗೂಳ ಗ್ರಾಮದ ಸ್ವಾಮಿ ಎಂಬಾತ ತನ್ನ ಫೇಸ್ ಬುಕ್ ಐಡಿಯಲ್ಲಿ ಸ್ವಾಭಿಮಾನಿ ಸ್ವಾಮಿ ಎಂಬ ಪೇಜ್‌ನಲ್ಲಿ ಜು.14ರಂದು ವಿವಿಧ ಪೋಸ್ಟ್‌ಗಳನ್ನು ಹಾಕಿದ್ದು ಅದರಲ್ಲಿ ಜಾತಿಯ ವಿಷ ಬೀಜ ಬಿತ್ತುವಂತಹ ಹಾಗೂ ಹಿಂದು ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದನು. ವಿವಿಧ ಧರ್ಮಗಳ ಮತೀಯ ಭಾವನೆಗೆ ಧಕ್ಕೆ ತರುವಂತಹ ಪೋಸ್ಟ್ ಹಾಕಿರುವುದರಿಂದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net