

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಡೆಂೆ ಪ್ರಕರಣ ತಡೆಯಲು ಹಾಗೂ ಮಳೆಯಿಂದ ಆಗಿರುವ ಹಾನಿ ಬಗ್ಗೆ ಶೀಘ್ರವೇ ವರದಿ ತಯಾರಿಸಿ ಸರ್ಕಾರಕ್ಕೆ ನೀಡುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚನೆ ನೀಡಿದರು.
ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ 2023-24ನೇ ಸಾಲಿನ ಮಾರ್ಚ್ ಅಂತ್ಯಕ್ಕೆ 2024-25ನೇ ಸಾಲಿನ ಜೂನ್ 2024 ರ ಅಂತ್ಯಕ್ಕೆ 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದ ಅವರು, ಬೆಳೆ ನಷ್ಟ, ರಸ್ತೆ ಹಾಳಾಗಿರುವುದು, ಸಾವು-ನೋವು ಬಗ್ಗೆ ಸ್ಥಳೀಯ ಅಧಿಕಾರಿಗಳು ಡಿಸಿಗೆ ಶೀಘ್ರವೇ ವರದಿ ನೀಡಿ, ಡಿಸಿ ಅವರು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ಅವರು,ಸದ್ಯದಲ್ಲಿ ಜನರಿಗೆ ಎದುರಾಗಿರುವ ತೊಂದರೆ ನಿವಾರಣೆ ಮಾಡುವುದು ಎಲ್ಲರ ಆದ್ಯತೆ, ಕರ್ತವ್ಯ ಆಗಬೇಕು ಎಂದರು.
ಡೆಂೆ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಕಟ್ಟಡ, ಅಂಗನವಾಡಿ ಕೇಂದ್ರ ಹಾಗೂ ಸುತ್ತಮುತ್ತ ಸ್ವಚ್ಛವಾಗಿರಬೇಕು. ನಂತರ ನಾವು ಬೇರೆಯವರಿಗೆ ಹೇಳ ಬಹುದು. ಸ್ವಚ್ಛ ಕಾಪಾಡದವರಿಗೆ ಕ್ರಮ ಜರುಗಿಸಲಾಗುವುದು ಎಂದು ಅಧೀನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಎಂದರು.
ಪಿಡಿಒ ಪಂಚಾಯ್ತಿಗಳಿಗೆ ಸರಿಯಾಗಿ ಬರುವುದಿಲ್ಲ, ಕಾರ್ಯಸ್ಥಾನದಲ್ಲಿ ಇರುವುದಿಲ್ಲ ಎಂಬ ಆರೋಪ ಹಿನ್ನೆಲೆ ಎಲ್ಲೆಡೆ ಬಯೋಮೆಟ್ರಿಕ್ ಅಳವಡಿಸಿ. ಮುಂದಿನ 1 ತಿಂಗಳ ಒಳಗೆ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಈ ವ್ಯವಸ್ಥೆ ಇರಲಿ, ಜೊತೆಗೆ ಥಮ್ ಪಡೆಯಬೇಕು. ಹಾಜರಾತಿ ನೋಡಿಯೇ ಸ್ಯಾಲರಿ ಹಾಕಿ ಎಂದು ತಾಪಂ ಇಒಗಳಿಗೆ ಹೇಳಿ ಎಂದರು.
ಡಿಹೆಚ್‌ಒ ಡಾ.ಶಿವಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಸದ್ಯ 530 ಡೆಂಗ್ಯೂ ಪಾಸಿಟಿವ್ ಕೇಸ್ ಇವೆ. ಈವರೆಗೆ ಎರಡು ಇದೇ ಕಾಯಿಲೆಯಿಂದ ಘಟಿಸಿರುವುದು ಖಾತ್ರಿಯಾಗಿದೆ. 4 ಸಾವಿನ ಬಗ್ಗೆ ಶಂಕೆ ಇದೆ. 142 ಮಂದಿ ಚಿಕಿತ್ಸೆ ಹಿಮ್ಸ್ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲೆಡೆ ನೋಡೆಲ್ ಆಫೀಸರ್ ನೇಮಿಸಲಾಗಿದೆ. ಡೆಂಗ್ಯೂ ತಡೆಗೆ ಎಲ್ಲಾ ಕ್ರಮ ವಹಿಸಲಾಗಿದೆ. ಮಳೆ ಹೆಚ್ಚಾಗಿರುವ ಕಾರಣ, ಜ್ವರ ಸ್ವಲ್ಪ ಉಲ್ಬಣಗೊಂಡಿದೆ. ಸ್ವಚ್ಛತೆಗೆ ಒತ್ತು ನೀಡಿ, ಡೆಂಗ್ಯೂ ಹರಡುವ ಸೊಳ್ಳೆ ನಾಶಕ್ಕೆ ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ಹಾಟ್ ಸ್ಪಾಟ್ ಗೊತ್ತು ಮಾಡಿ ಅಲ್ಲಿ ರೋಗ ತಡೆಗೆ ನಿಗಾವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ಹಿಮ್ಸ್‌ನಲ್ಲಿ ಪಂದು ಮದರ್ ರಕ್ತನಿಧಿ ಕೇಂದ್ರ ಹಾಗೂ 8 ಸಂಗ್ರಹ ಕೇಂದ್ರಗಳಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದರು.
ಸಂಸದ ಶ್ರೇಯಸ್ ಪಟೇಲ್ ಅವರು ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಹಾಗೆ ಮಾಡಬೇಡಿ ಡೆಂಗ್ಯೂ ಗೆ ಚಿಕಿತ್ಸೆಗೆ ದರ ವಿಧಿಸಬೇಡಿ, ಉಚಿತ ಚಿಕಿತ್ಸೆ ನೀಡಿ ಎಂದು ಸೂಚಿಸಿದರು.
ನಂತರ ಮಾತನಾಡಿದ ಸಚಿವರೂ ಸಹ ಒಂದು ರೂ.ವಸೂಲಿ ಬೇಡ, ಬಡವರು ಬಿಪಿಎಲ್ ಕಾರ್ಡ್ ಮರೆತು ಬಂದಿದ್ದರೂ ರಿಯಾಯ್ತಿ ಕೊಡಿ, ಎಂಪಿ ಅವರು ಸುಳ್ಳು ಹೇಳಲ್ಲ, ವಾದ ಮಾಡಬೇಡಿ ಎಂದು ಹಿಮ್ಸ್ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.
ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಮಾತನಾಡಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಭ್ರಷ್ಟಾಚಾರದ ಕೂಪವಾಗಿದ್ದು ಅದರಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ರೈತರ ಉದ್ದಾರವಾಗಬೇಕೆಂದರೆ ಆ ಯೋಜನೆಯನ್ನು ಮೊದಲು ರದ್ದುಪಡಿಸಬೇಕೆಂದು ಸಲಹೆ ನೀಡಿದರು.
ವಿಮೆ ಕಂಪನಿಯವರು ಸರಿಯಾಗಿ ಸಮೀಕ್ಷೆ ನಡೆಸದೆ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದಾಗ ಅದಕ್ಕೆ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಅವರೂ ದನಿಗೂಡಿಸಿದರು.
ಬೇಲೂರು ಶಾಸಕ ಎಚ್.ಕೆ.ಸುರೇಶ್ ಅವರು ಮಾತನಾಡಿ, ಧಾರಾಕಾರ ಮಳೆಯಿಂದ ಮಲೆನಾಡು ಭಾಗದಲ್ಲಿ ಸಾಕಷ್ಟು ಮನೆಗಳು ಕುಸಿದು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಸಭೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಕಲೇಶಪುರದ ಶಾಸಕ ಸಿಂಮೇಟ್ ಮಂಜು ಗೃರುಹಾಜರಾಗಿದ್ದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ, ಕೆಡಿಪಿ ನಾಮನಿರ್ದೇಶಿತ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಜಯನಾಗ್ ಭೂಷಣ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ ಹಾಗು ಇತರ ಇಲಾಖೆ ಅಧಿಕಾರಿಗಳಿದ್ದರು.
ಅಧಿಕಾರಿಗಳ ವಿರುದ್ಧ ಸಚಿವರು ಗರಂ:
ತುಮಕೂರಿಗೆ ಹೇಮಾವತಿ ನೀರು ಹರಿಯಲು ವಿಳಂಬ ಆಗಿರುವ ಬಗ್ಗೆ ಸಿಟ್ಟಾದ ಸಚಿವರು, ಅಧಿಕಾರಿಗಳು ಮೊದಲಿಂದಲೂ ಸುಮ್ಮನಿರುತ್ತಾರೆ. ನೀರು ಬಿಡುಗಡೆ ವೇಳೆ ಕಾಂಕ್ರೀಟ್ ಹಾಕಲಾಗಿದೆ, ಸೆಂಟ್ರಿಂಗ್ ನಡೆಯುತ್ತಿದೆ ಎನ್ನುತ್ತಾರೆ. ಇವರಿಗೆ ಕಾಮನ್ ಸೆನ್ಸ್ ಇದೆಯಾ, ಇಷ್ಟು ದಿನ ಏನು ಮಾಡುತ್ತಿದ್ದರು, ಹೊಟ್ಟೆಗೆ ಏನು ತಿಂತಾರೋ ಎಂದು ತರಾಟೆಗೆ ತೆಗೆದುಕೊಂಡರು. ನೀರು ಬಿಡುವ ವೇಳೆ ದುರಸ್ತಿ ಅಂತಾರೆ. ಇಲ್ಲೀವರೆಗೂ ಕತ್ತೆ ಕಾಯ್ತ ಇದ್ರಾ ಎಂದು ಕಿಡಿ ಕಾರಿದರು. ಸೋಮವಾರ ಬೆಳಗ್ಗೆಯಿಂದಲೇ ತುಮಕೂರಿಗೆ ನೀರು ಹರಿಯಬೇಕು ಎಂದರು.
ಮೂರು ಜೀವಹಾನಿ:
ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದ್ದು, ಜೂನ್‌ನಿಂದ ಈವರೆಗೆ ಚನ್ನರಾಯಪಟ್ಟಣ 1 ಮತ್ತು ಅರಕಲಗೂಡಿನಲ್ಲಿ 2 ಸೇರಿ ಮೂರು ಜೀವ ಹಾನಿಯಾಗಿದೆ. ಮೂವರು ಗಾಯಗೊಂಡಿದ್ದಾರೆ. ಅವರಿಗೂ ಪರಿಹಾರ ನೀಡಲಾಗಿದೆ. ಐದು ಮನೆಗಳು ಸಂಪೂರ್ಣ ನೆಲಸಮ ಆಗಿವೆ. ಮನೆ ಮಾಲೀಕರಿಗೂ ಪರಿಹಾರ ನೀಡಲಾಗಿದೆ. 25 ಮನೆ ಭಾಗಶಃ ಹಾನಿಗೀಡಾಗಿವೆ. 135 ಮನೆ ಅಲ್ವಸ್ವಲ್ಪ ಕುಸಿದಿವೆ ಎಂದು ಡಿಸಿ ಸತ್ಯಭಾಮ ಮಾಹಿತಿ ನೀಡಿದರು.
ಹಾಗೆಯೇ ಅರಕಲಗೂಡು ತಾಲೂಕಿನಲ್ಲಿ 50 ಹೆಕ್ಟೇರ್ ಹೊಗೆಸೊಪ್ಪು ಮಳೆಯಿಂದ ಹಾಳಾಗಿದೆ. ಜಿಲ್ಲೆಯಲ್ಲಿ 42 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಒಟ್ಟಾರೆ 125 ಎಕರೆ ಬೆಳೆ ನಾಶವಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಸಿಕ್ಕಿದೆ ಎಂದು ಕೃಷಿ ಇಲಾಖೆ ಜೆಡಿ ತಿಳಿಸಿದರು. ತಹಸೀಲ್ದಾರ್ ಪಿಡಿ ಖಾತೆಗಳಲ್ಲಿ 8 ಕೋಟಿ, ಡಿಸಿ ಪಿಡಿ ಖಾತೆಯಲ್ಲಿ 24 ಕೋಟಿ ಇದೆ. ಪರಿಹಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು. ಎನ್‌ಡಿಆರ್‌ಎಫ್ ನಿಯಮಾವಳಿ ಅಡಿ ಪರಿಹಾರ ನೀಡಲು ಹಲವು ಮಾನದಂಡ ಇವೆ. ಏಕಾಏಕಿ ಪರಿಹಾರ ಕೊಡಲು ಆಗಲ್ಲ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಡಿಸಿ ವಿರುದ್ಧ ಶಾಸಕ ಸ್ವರೂಪ್ ಅಸಮಾಧಾನ:
ಕಳೆದ 15 ದಿನಗಳಿಂದ ಕರೆ ಮಾಡಿದರೂ ಜಿಲ್ಲಾಧಿಕಾರಿ ಸ್ವಿಕರಿಸುತ್ತಿಲ್ಲ.ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಹಾಸನಾಂಬ ಜಾತ್ರೆ ಪೂರ್ವ ಸಿದ್ಧತಾ ಸಭೆಗೆ ಶಾಸಕರನ್ನು ಆಹ್ವಾನಿಸದೆ ತಮಗೆ ತೋಚಿದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರನ್ನು ಸಭೆಗೆ ಕರೆಯಬೇಕೆಂಬ ಸೌಜನ್ಯವೂ ಇಲ್ಲ. ದೇವಸ್ಥಾನದ ಪಕ್ಕದಲ್ಲಿರುವ ಮನೆಗಳನ್ನು ಬಿಡಿಸಿಕೊಡಲು ಶಾಸಕ ಬೇಕು ಆದರೆ ಸಭೆಗೆ ಬೇಡವೆಂದರೆ ಹೇಗೆ. ನಗರದಲ್ಲಿ ಸಮಸ್ಯೆಗಳು ವಿಪರೀತವಾಗಿವೆ. ನಗರಸಭೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಹೀಗಾದರೆ ಹೇಗೆ ಮೇಡಂ ಎಂದು ಏರುದನಿಯಲ್ಲಿ ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು, ಯಾವ್ಯಾವ ಕೆಲಸ ಆಗಬೇಕೆಂದು ಲಿಸ್ಟ್ ಕೊಡಿ ಸರ್ ಎಂದರು. ಮಧ್ಯ ಪ್ರವೇಶಿಸಿದ ಶಾಸಕ ಎ.ಮಂಜು ಅವರು ಲಿಸ್ಟ್ ಕೊಡುವುದು ಜನಪ್ರತಿನಿಧಿಗಳ ಕೆಲಸವಲ್ಲ. ನೀವೇ ನಮನ್ನು ಸಭೆಗೆ ಕರೆಯಬೇಕು. ನೀವು ಹೇಳಿದ ಹಾಗೆ ಮಾಡಲು ಆಗಲ್ಲ ಎಂದಾಗ ಸಚಿವ ರಾಜಣ್ಣ ಪ್ರತಿಕ್ರಿಯಿಸಿ, ನಾಳೆಯೇ ಸಭೆ ಕರೆದು ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.