ಜಿಲ್ಲೆಯಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್ ಬೀಳುವುದು ಖಚಿತ.!

ಜಿಲ್ಲೆಯಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್ ಬೀಳುವುದು ಖಚಿತ.!
Published on

ಅರಕಲಗೂಡು: ಜಿಲ್ಲೆಯಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್ ಬೀಳುವುದು ಖಚಿತವಾಗಿದೆ. ಈಗಾಗಲೇ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಪಕ್ಷ ತೊರೆದು ಕಾಂಗ್ರೆಸ್ ಸೇರುವುದು ನಿಕ್ಕಿಯಾಗಿದ್ದು, ಈಗ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಸಹ ಜೆಡಿಎಸ್ ತೊರೆಯುವ ಮಾತನ್ನಾಡಿದ್ದಾರೆ.


ಅರಕಲಗೂಡಿನಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಟಿ. ರಾಮಸ್ವಾಮಿ, ತಾವು ಜೆಡಿಎಸ್‌ನಲ್ಲಿ ಮುಂದುವರೆಯುವ ಸಾಧ್ಯತೆ ಕಡಿಮೆ ಅನಿಸುತ್ತಿದೆ ಎಂದು ನೇರವಾಗಿಯೇ ಹೇಳಿದರು.
‘ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರ ಮನೆಯಲ್ಲಿ ನನ್ನನ್ನು ಕೆಟ್ಟವನು ಎಂಬುದಾಗಿ ಬಿಂಬಿಸುವ ಹುನ್ನಾರ ನಡೆಯಿತು. ನಾನು ಕೆಟ್ಟವನು, ಅವರೆಲ್ಲಾ ಒಳ್ಳೆಯವರು; ಕೆಟ್ಟವನು ಒಳ್ಳೆಯವರ ಜೊತೆ ಇದ್ದು ಅವರನ್ನೇಕೆ ಹಾಳು ಮಾಡಬೇಕು’ ಎಂದು ಮಾರ್ಮಿಕ ಮತ್ತು ಬೇಸರದ ಮಾತುಗಳನ್ನಾಡಿದರು.


‘ರೇವಣ್ಣನವರು ದೊಡ್ಡವರ ಜೊತೆ ಮನೆಗೆ ಬಂದಿದ್ದು ನಿಜ, ಕೆಲ ಸಮಸ್ಯೆ ಇದೆ, ಅದೆಲ್ಲಾ ಬಗೆಹರಿಸಿ ಮುಂದೆ ಹೋಗೋಣ ಅಂತ ಹೇಳಿದ್ದೆ. ಅಲ್ಲದೆ, ನಾನು ಜೆಡಿಎಸ್ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದೆ. ಜ.22 ರಂದು ಅರಕಲಗೂಡಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಒಪ್ಪಿದ್ದರು. ಆದರೆ ಜ.21ನೇ ತಾರೀಖು ಹೊಳೆನರಸೀಪುರದ ರೇವಣ್ಣ ಅವರ ಮನೆಯ ಎದುರು ನನ್ನ ವಿರುದ್ಧ ಪ್ರತಿಭಟನೆ ನಡೆಸಿ, ಮರುದಿನದ ಕಾರ್ಯಕ್ರಮದಲ್ಲಿ ದೇವೇಗೌಡರು ಭಾಗವಹಿಸದಂತೆ ಮಾಡಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.


‘ನಾನು ರಾಜಕಾರಣಕ್ಕೆ ಬಂದಿದ್ದು ನನ್ನ ಜನರಿಗೋಸ್ಕರ ಹೊರತು ಸ್ವಾರ್ಥಕಲ್ಲ, ನನ್ನ ಮುಂದಿನ ನಡೆಯನ್ನು ಜನರೇ ತೀರ್ಮಾನ ಮಾಡುತ್ತಾರೆ’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net