ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪನೆಗೆ ಸಿದ್ಧತೆ, ಅಪರ ಜಿಲ್ಲಾಧಿಕಾರಿ ವಿಜಯಾ ಇ. ರವಿಕುಮಾರ್ ಸೂಚನೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ

ADC Meeting 01.09 (1)
Published on

ಬೆಂಗಳೂರು ಗ್ರಾಮಾಂತರ: ಪ್ರತಿ ಜಿಲ್ಲೆಯಲ್ಲಿ ಸರ್ಕಾರದಿಂದ ಗೋಶಾಲೆ ಸ್ಥಾಪಿಸುವ ಸಂಬಂಧ ಆದೇಶ ಹೊರಟಿಸಿದ್ದು, ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿಯೂ ಗೋಶಾಲೆ ಸ್ಥಾಪನೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಇ.ರವಿಕುಮಾರ್ ಸೂಚಿಸಿದರು.

ದೇವನಹಳ್ಳಿ ತಾಲೂಕು ಬೀರಸಂದ್ರದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲಿ ಗುರುವಾರ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಹಮ್ಮಿಕೊಂಡಿದ್ದ ನೂತನವಾಗಿ ಗೋಶಾಲೆ ಸ್ಥಾಪಿಸುವ ಕುರಿತ ರೂಪುರೇಷೆಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಹೊಸ ಗೋಶಾಲೆ ಸ್ಥಾಪಿಸಲು ಅಥವಾ ಈಗಾಗಲೇ ಅಸ್ತಿತ್ವದಲ್ಲಿದ್ದು, ಟ್ರಸ್ಟ್ ಮೂಲಕ ನಡೆಸುತ್ತಿರುವ ಗೋಶಾಲೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 1.80 ಲಕ್ಷ ಜಾನುವಾರುಗಳಿದ್ದು, ಗೋಶಾಲೆಗಳು ಸರ್ಕಾರದ ಮಾರ್ಗಸೂಚಿ ಅನ್ವಯ ಗರಿಷ್ಠ 1,400 ರಾಸುಗಳನ್ನು ಆರೈಕೆ ಮಾಡುವಷ್ಟು ಮೂಲ ಸೌಕರ್ಯ ಹೊಂದಿರಬೇಕು. ಈ ಸಂಬಂಧ ಜಿಲ್ಲೆಯಲ್ಲಿರುವ ಗೋಶಾಲೆಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.

ಕಂದುರೋಗ ಮಾಹಿತಿ ನೀಡಿ: ಇತ್ತೀಚಿನ ದಿನಗಳಲ್ಲಿ ಜಾನುವಾರುಗಳಲ್ಲಿ ಕಂದುರೋಗ(ಬ್ರುಸೆಲ್ಲೊಸಿಸ್ ರೋಗ) ಹೆಚ್ಚಾಗಿದ್ದು, ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಜಿಲ್ಲೆಯಲ್ಲಿ ಕಂದುರೋಗ ನಿಯಂತ್ರಣ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ ಎಂದು ವಿಜಯಾ ಇ.ರವಿಕುಮಾರ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿರುವ ಗೋಶಾಲೆಗಳು, ಪ್ರಾಣಿದಯಾ ಸಂಘದ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಲು, ಜಿಲ್ಲಾ ಪ್ರಾಣಿದಯಾ ಸಂಘದಲ್ಲಿ ಹಲವಾರು ವರ್ಷದಿಂದ ಸೇವೆ ಸಲ್ಲಿಸಿರುವ ಓರ್ವ ಸ್ವಯಂ ಸೇವಕರನ್ನು ಗುರುತಿಸಿ, ಪ್ರಾಣಿ ಕಲ್ಯಾಣಾಧಿಕಾರಿಯಾಗಿ ಆಯ್ಕೆ ಮಾಡಬೇಕು ಎಂದರು.

ಸ್ಥಳ ಪರಿಶೀಲನೆ: ಜಿಲ್ಲೆಯಲ್ಲಿ ಗೋಶಾಲೆ ನಿರ್ಮಾಣ ಸಂಬಂಧ ತಾಲೂಕು ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಜಿ.ಎಂ.ನಾಗರಾಜ್ ಸಭೆಯ ಗಮನಕ್ಕೆ ತಂದರು.

ದೊಡ್ಡಬಳ್ಳಾಪುರ ಉಪ ವಲಯ ಅರಣ್ಯಾಧಿಕಾರಿ ಸುಬ್ಬಾರಾವ್, ಸಿಆರ್‌ಬಿ ಡಿವೈಎಸ್ಪಿ ದೀಪಕ್, ನೆಲಮಂಗಲ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸಿದ್ದಪ್ಪ, ಜೀವದಯಾ ಗೋಶಾಲೆ ಮುಖ್ಯಸ್ಥ ದೀಪಕ್ ಜೈನ್, ಓಂಕಾರ ಗೋಶಾಲೆ ಮುಖ್ಯಸ್ಥ ಶಿವಯೋಗಿ, ರಾಷ್ಟ್ರೋತ್ಥಾನ ಗೋಶಾಲೆ ಮುಖ್ಯಸ್ಥ ಸುನೀಲ್, ಗೋಕುಲ ಗೋಶಾಲೆ ಸಿಬ್ಬಂದಿ ಉಮೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net