ಜಿಲ್ಲೆಯಲ್ಲಿ ಕ್ಯಾನ್ಸರ್ ತಪಾಸಣೆಗೆ ಆದ್ಯತೆ

4 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದ ಕಾರಣ ವಿಶ್ವಮಟ್ಟದಲ್ಲಿ ಪ್ರತಿ ವರ್ಷ ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಯಾವುದೇ ರೀತಿಯ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿಲ್ಲ. ಕ್ಯಾನ್ಸರ್ ತಪಾಸಣೆ ಹೆಚ್ಚಿಸಿದ್ದು, ಕ್ಯಾನ್ಸರ್ ಪೀಡಿತರಿಗೆ ಅಗತ್ಯ ಚಿಕಿತ್ಸೆ ನಡೆಸಲಾಗಿದೆ ಎಂದು ಜಿಪಂ ಸಿಇಒ ಡಾ. ಸುರೇಶ ಇಟ್ನಾಳ ಹೇಳಿದರು.
ವಿಶ್ವ ಕ್ಯಾನ್ಸರ್ ದಿನ ನಿಮಿತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಿಂದ ಶನಿವಾರ ಏರ್ಪಡಿಸಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಯಾನ್ಸರ್ ಹೆಚ್ಚಳಕ್ಕೆ ನಮ್ಮ ಜೀವನ ಕ್ರಮ, ಸೇವಿಸುವ ಆಹಾರ ಮತ್ತು ರೋಗ ಲಕ್ಷಣ ಕಂಡಾಗ ನಿರ್ಲಕ್ಷೃ ವಹಿಸುವುದು ಮುಖ್ಯ ಕಾರಣ. ರೋಗಕ್ಕೆ ಕಾರಣವಾದ ಹವ್ಯಾಸಗಳಿಗೆ ದಾಸರಾಗಿರುವವರು ಮತ್ತು ಮಹಿಳೆಯರು ಆರೋಗ್ಯ ಇಲಾಖೆ ಆಯೋಜಿಸುವ ಕ್ಯಾನ್ಸರ್ ಸ್ಕ್ರೀನಿಂಗ್ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡಿ ರೋಗ ಗುಣಪಡಿಸಬಹುದು. ಕ್ಯಾನ್ಸರ್ ತೊಲಗಿಸಲು ಸಮಾಜ ಮತ್ತು ಸಂಘಸಂಸ್ಥೆಗಳ ಸಹಕಾರವು ಇಲಾಖೆ, ಸರ್ಕಾರಕ್ಕೆ ಮುಖ್ಯ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಹಾಗೂ ಪಾರ್ಶ್ವವಾಯು ರೋಗ ತಡೆ, ನಿಯಂತ್ರಣ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ರಾಷ್ಟ್ರೀಯ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟವರ ತಪಾಸಣೆಗೆ ಕ್ರಮವಹಿಸಲಾಗಿದೆ ಎಂದರು.
ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ಸುಜಾತಾ ಹಸವಿಮಠ ಮಾತನಾಡಿ, ಜಿಲ್ಲೆಯಲ್ಲಿ 2022ರ ಏಪ್ರಿಲ್‌ನಿಂದ ಜನವರಿ ವರೆಗೆ 1,86,170 ಪುರುಷರು ಮತ್ತು 1,45,280 ಮಹಿಳೆಯರು ಕ್ಯಾನ್ಸರ್ ತಪಾಸಣೆಗೆ ಒಳಪಟ್ಟಿದ್ದಾರೆ. ರೋಗದ ಯಾವುದೇ ಹೊಸ ಪ್ರಕರಣಗಳು ಪತ್ತೆ ಆಗಿಲ್ಲ. ಹಿಂದಿನ ವರ್ಷಗಳಲ್ಲಿ ಪತ್ತೆಯಾಗಿದ್ದ 14 ಜನ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದರು.
ಆರೋಗ್ಯ ಇಲಾಖೆಯಿಂದ ಆರಂಭವಾದ ಜನಜಾಗೃತಿ ಜಾಥಾ ಹಳೇ ಬಸ್ ನಿಲ್ದಾಣ, ವಿವೇಕಾನಂದ ವೃತ್ತ, ಆಲೂರ ವೆಂಕಟರಾವ್ ವೃತ್ತ, ಜಿಲ್ಲಾ ನ್ಯಾಯಾಲಯ ಮೂಲಕ ಸಂಚರಿಸಿ, ಇಲಾಖೆ ಆವರಣದಲ್ಲಿ ಸಂಪನ್ನಗೊಂಡಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಯೋಜನೆಗಳ ಅನುಷ್ಠಾನ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net