ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ

16blk2
ಭಾಲ್ಕಿಯ ಜಿ.ಎಚ್.ಶಿವಮಠ ನಿಡಗುಂದಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಅಪ್ರೆಂಟಿಸ್ ತರಬೇತಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮವನ್ನು ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶಿವಶಂಕರ ಟೋಕರೆ ಇತರರಿದ್ದರು.
Published on

ಭಾಲ್ಕಿ:  ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸಂಸದ ಸಾಗರ ಖಂಡ್ರೆ ಭರವಸೆ ನೀಡಿದರು.

ಪಟ್ಟಣದ ಜಿ.ಎಚ್.ಶಿವಮಠ ನಿಡಗುಂದಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಪ್ರೆಂಟಿಸ್ ತರಬೇತಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಡಿಭಾಗದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಶೈಕ್ಷಣಿಕ ಕ್ರಾಂತಿಗೈದಿದ್ದಾರೆ. ಅವರ ಸಮಾಜ ಸೇವೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಅಂತಹ ಪೂಜ್ಯರ ಅಮೃತ ಮಹೋತ್ಸವದ ಸವಿನೆನಪಿಗಾಗಿ ಐಟಿಐ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ಸಂದರ್ಶನ ಏರ್ಪಡಿಸಿರುವುದು ಖುಷಿ ತಂದು ಕೊಟ್ಟಿದೆ ಎಂದರು.

ಜಿಲ್ಲೆಯಲ್ಲಿ ಹೆಚ್ಚೆಚ್ಚು ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಐಟಿಐ ಪೂರೈಸಿದವರೆಗೆ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಹಾಜರಾತಿ ಉತ್ತಮವಾಗಿರಿಸಿಕೊಂಡು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ನಮ್ಮ ಭಾಗದ ವಿದ್ಯಾರ್ಥಿಗಳಲ್ಲಿ ಅದ್ಬುತ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಲು ಸೂಕ್ತ ವೇದಿಕೆ ಕಲ್ಪಿಸುವ ಅಗತ್ಯವಿದೆ. ಪೂಜ್ಯರ ಅಮೃತ ಮಹೋತ್ಸವ ನೆಪದಲ್ಲಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಮಹೀಂದ್ರಾ ಕಂಪನಿ ಅವರು ಅಪ್ರೆಂಟಿಸ್ ತರಬೇತಿ ಸಂದರ್ಶನ ಆಯೋಜಿಸಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಜಿಲ್ಲಾ ಕಸಾಪದ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಮಾತನಾಡಿದರು. ಪ್ರಾಚಾರ್ಯ ದೇವರಾಜ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಮಹೀಂದ್ರಾ ಕಂಪನಿಯ ವ್ಯವಸ್ಥಾಪಕಿ ಯಾಸ್ಮೀನ್, ಸುನೀಲ, ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಪ್ರಭು, ಎಸ್‌ವಿಇ ಐಟಿಐ ಕಾಲೇಜಿನ ಪ್ರಾಚಾರ್ಯ ಸಂಗಪ್ಪ ಹುಲಸೂರೆ, ಪ್ರವೀಣ ಹಿರೇಮಠ, ರಾಜಕುಮಾರ ಕಲಶೆಟ್ಟೆ, ಬಸವರಾಜ ಗೊರನಾಳೆ, ಮಲ್ಲಿಕಾರ್ಜುನ ಮೇತ್ರೆ, ಪ್ರೇಮ ಕೋರಾಳೆ ಇತರರಿದ್ದರು. ಸುರೇಶ ಪುರವಂತ ಸ್ವಾಗತಿಸಿದರು. ರಾಜಕುಮಾರ ಸ್ವಾಮಿ ನಿರೂಪಣೆ ಮಾಡಿದರು.

ಹಣ, ಅಂತಸ್ತು, ಅಧಿಕಾರ ಮುಖ್ಯವಲ್ಲ, ಉತ್ತಮ ಚಾರಿತ್ರ್ಯ, ವ್ಯಕ್ತಿತ್ವ ಇರುವವರು ನಿಜವಾದ ಶ್ರೀಮಂತರು.

| ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net