ಜಿಲ್ಲೆಯಲ್ಲಿ ಕುಸಿದ ಜೆಡಿಎಸ್ ಭದ್ರಕೋಟೆ

jds photos (1)
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್‌ನ ಭದ್ರಕೋಟೆ ಕುಸಿದಿದೆ. ಹಲವು ಕ್ಷೇತ್ರಗಳಲ್ಲಿ ನೆಲೆ ಕಳೆದುಕೊಂಡಿರುವುದು ಪಕ್ಷಕ್ಕೆ ಇದು ಆಘಾತ ಉಂಟು ಮಾಡಿದ್ದು, ಆತ್ಮವಿಮರ್ಶೆಗೆ ಹಚ್ಚಿದೆ.

ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಅಧಿಕಾರ ದೊರೆಯಲಿದೆ ಎಂಬ ಕನಸು ಕಂಡಿದ್ದ ಜೆಡಿಎಸ್, ಕಾಂಗ್ರೆಸ್ ಅಲೆಯಲ್ಲಿ ಕೊಚ್ಚಿ ಹೋಗಿದೆ. ಮಂತ್ರಿಗಿರಿ ಆಸೆ ಕಂಡವರು ಈಗ ಸೋತು ಮನೆ ಸೇರಿಕೊಂಡಿದ್ದಾರೆ. ಈ ರೀತಿ ಹೀನಾಯ ಸೋಲನ್ನು ನಿರೀಕ್ಷಿಸದ ಪಕ್ಷದ ಕಾರ್ಯಕರ್ತರಿಗೆ ಜಂಗಾಬಲವೇ ಅಡಗಿ ಹೋಗಿದ್ದು, ಮುಂದೇನು ಎಂಬ ಚಿಂತೆ ಅವರಲ್ಲಿ ಕಾಡುತ್ತಿದೆ.

ಜಿಲ್ಲೆಯಲ್ಲಿ ಜೆಡಿಎಸ್ ಭದ್ರವಾಗಿ ಬೇರೂರಿತ್ತು. 2013ರ ಚುನಾವಣೆಯಲ್ಲಿ ಎದ್ದಿದ್ದ ಕಾಂಗ್ರೆಸ್ ಅಲೆಯಲ್ಲೂ ಪಕ್ಷ 3 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ 8 ಕ್ಷೇತ್ರಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಬಿಜೆಪಿ ಶೂನ್ಯ ಸಾಧನೆ ಮಾಡಿತ್ತು. ವಿ.ಶ್ರೀನಿವಾಸ ಪ್ರಸಾದ್ ರಾಜೀನಾಮೆಯಿಂದ ನಡೆದ 2017ರ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಮರು ಆಯ್ಕೆಗೊಂಡಿತ್ತು.

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 5, ಕಾಂಗ್ರೆಸ್ 3 ಮತ್ತು ಬಿಜೆಪಿ 3 ಸ್ಥಾನ ಪಡೆದಿತ್ತು. ಎಚ್.ವಿಶ್ವನಾಥ್ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರಿಂದ 2019ರಲ್ಲಿ ನಡೆದ ಹುಣಸೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. ಆಗ ಜೆಡಿಎಸ್‌ನ ಸಂಖ್ಯೆ 5ರಿಂದ 4ಕ್ಕೆ ಇಳಿದರೆ, ಕಾಂಗ್ರೆಸ್ 3ರಿಂದ 4 ಸ್ಥಾನವನ್ನು ಹೆಚ್ಚಿಸಿಕೊಂಡು ಸಮಬಲ ಕಾಯ್ದುಕೊಂಡಿತ್ತು.

9 ಕ್ಷೇತಗಳಲ್ಲಿ ನೆಲೆ ಇಲ
ಪ್ರಸ್ತಕ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಸಾಧನೆ ಕಳಪೆಯಾಗಿದೆ. ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಜೆಡಿಎಸ್ 4ರಿಂದ 2 ಸ್ಥಾನಕ್ಕೆ ಕುಸಿದು ತೀವ್ರ ಮುಖಭಂಗ ಅನುಭವಿಸಿದೆ. ಈ ಪಕ್ಷದ ಎದುರಾಳಿಯಾದ ಕಾಂಗ್ರೆಸ್ 3ರಿಂದ 8ಕ್ಕೆ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡು ಅಧಿಪತ್ಯ ಸಾಧಿಸಿದೆ. ಇದು ಜೆಡಿಎಸ್‌ಗೆ ಎಚ್ಚರಿಕೆಯ ಗಂಟೆಯಾಗಿದೆ. ಮೈಮರೆತಿದ್ದರೆ, ಈಗ ಧಕ್ಕಿರುವ 2 ಸ್ಥಾನವೂ ಕೈ ತಪ್ಪಿ ಹೋಗುತ್ತಿತ್ತು.

ಶಾಸಕರಾದ ಕೆ.ಮಹದೇವ(ಪಿರಿಯಾಪಟ್ಟಣ), ಸಾ.ರಾ.ಮಹೇಶ್(ಕೆಆರ್ ನಗರ), ಅಶ್ವಿನ್‌ಕುಮಾರ್(ತಿ.ನರಸೀಪುರ) ದಯನೀಯ ಸೋಲು ಕಂಡಿದ್ದಾರೆ. ಆಡಳಿತ ವಿರೋಧಿ ಅಲೆ, ಬದಲಾವಣೆ ಗಾಳಿಯಲ್ಲಿ ಇವರೆಲ್ಲ ಕೊಚ್ಚಿಹೋಗಿದ್ದಾರೆ.

ಅಪ್ಪ-ಮಗ ಗೆದ್ದರೂ ಸಂಭ್ರಮ ಇಲ್ಲ:
ಜೆಡಿಎಸ್‌ನಿಂದ ಅಪ್ಪ-ಮಗ ಗೆದ್ದಿದ್ದಾರೆ. ಆದರೆ, ಪಕ್ಷದಲ್ಲಿ ಅಂತಹ ಸಂಭ್ರಮ ಗೋಚರವಾಗುತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದ ಶಾಸಕ ಜಿ.ಟಿ.ದೇವೇಗೌಡ ಸುಲಭವಾಗಿ, ಇವರ ಪುತ್ರ ಜಿ.ಡಿ.ಹರೀಶ್‌ಗೌಡ ಹುಣಸೂರು ಕ್ಷೇತ್ರದಲ್ಲಿ ಪ್ರಯಾಸದ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್ ಸ್ವಯಂಕೃತ ತಪ್ಪಿನಿಂದ ಜಿಟಿಡಿ ಆಡಳಿತ ವಿರೋಧಿ ನಡುವೆಯೂ ಜಯದ ದಡ ಸೇರಿಕೊಂಡಿದ್ದಾರೆ. ತಂದೆ-ಮಗ ಜಯವನ್ನು ಸಡಗರಿಸುವ ಸ್ಥಿತಿಯಲ್ಲಿ ಆ ಪಕ್ಷವೂ ಇಲ್ಲ, ಸ್ವತಃ ಗೆದ್ದವರಲ್ಲೂ ಇಲ್ಲ.

ಡಬಲ್ ಟಿಕೆಟ್, ಡಬಲ್ ಜಯ ಪಕ್ಷದ ಒಳಗಿನ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿದೆ. ಉಳಿದ ನಾಯಕರ ಕಣ್ಣು ಕೆಂಪು ಮಾಡಿದೆ. ‘ಅಪ್ಪ-ಮಗ ಗೆದ್ದುಕೊಂಡಿದ್ದಾರೆ. ಉಳಿದ ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳಿಗೆ ಆರ್ಥಿಕ ಸೇರಿದಂತೆ ಇನ್ನಿತರ ಸಹಾಯ-ನೆರವು ಮಾಡಲಿಲ್ಲ’ ಎಂಬ ಆರೋಪ ಜಿಟಿಡಿ ವಿರುದ್ಧ ಹೊಗೆಯಾಡುತ್ತಿದೆ. ಈ ಚುನಾವಣೆಯಲ್ಲಿ ಜಿಟಿಡಿ ಅವರು ಕುಟುಂಬದ ಹಿತಾಸಕ್ತಿ ಕಾಯ್ದುಕೊಂಡಿದ್ದಾರೆ. ಪಕ್ಷದ ಹಿತಾಸಕ್ತಿಗಾಗಿ ಶ್ರಮಿಸಿಲ್ಲ ಎಂದು ಮಡುಗಟ್ಟಿದ ಆಕ್ರೋಶವೂ ಕೇಳಿಬರುತ್ತಿದೆ.

ಕೈಹಿಡಿಯದ ಎಚ್‌ಡಿಕೆ ತಂತ್ರ

ಮೈಸೂರಿನ ಹೊರವಲಯದಲ್ಲಿ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ ಆಯೋಜಿಸಿದರೂ ಜೆಡಿಎಸ್‌ಗೆ ಸ್ಥಳೀಯವಾಗಿ ಹೆಚ್ಚಿನ ಅನುಕೂಲವೇನೂ ಆಗಲಿಲ್ಲ. ಇಳಿವಯಸ್ಸಿನಲ್ಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಿರಿಯಾಪಟ್ಟಣ, ಕೆ.ಆರ್.ನಗರ ಸೇರಿದಂತೆ ಇನ್ನಿತರ ಕಡೆ ಪ್ರಚಾರ ನಡೆಸಿದ್ದರೂ ಫಲ ಕೊಟ್ಟಿಲ್ಲ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಬ್ಬರದ ಮತಪ್ರಚಾರ, ರೋಡ್ ಶೋ ನಡೆಸಿದ್ದರು. ಜತೆಗೆ, ಜಿಲ್ಲೆಗೆ ಮೇಲಿಂದ ಮೇಲೆ ಭೇಟಿ ನೀಡಿ ಪಕ್ಷ ಸಂಘಟನೆ ಬಲಪಡಿಸಲು ಯತ್ನಿಸಿದ್ದರೂ ಲಾಭವೇನೂ ದೊರೆಯಲಿಲ್ಲ.

ಒಳ ಒಪ್ಪಂದವಿಲ್ಲದೆ ಕುಗ್ಗಿದ ದಳ
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು. ಬಿಜೆಪಿ ದುರ್ಬಲ ಅಭ್ಯರ್ಥಿ ಹಾಕಿ ಪರೋಕ್ಷವಾಗಿ ಜೆಡಿಎಸ್‌ಗೆ ಶಕ್ತಿ ತುಂಬಿತ್ತು. ಇದರಿಂದ ಮತ ವಿಭಜಿಸಿ ಕಾಂಗ್ರೆಸ್ ಬಲವನ್ನು ಕುಗ್ಗಿಸಲಾಗಿತ್ತು. ಆದರೆ, ಈ ರೀತಿ ತೆರೆಮರೆ ರಾಜಕೀಯ ಆಟ ಈ ಸಲ ಏರ್ಪಡಲಿಲ್ಲ. ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಸ್ವಂತ ಬಲದಿಂದ ಸ್ಪರ್ಧೆಗಿಳಿಯಿತು. ಜೆಡಿಎಸ್‌ನಿಂದ ಸೆಳೆದ ದೇವರಹಳ್ಳಿ ಸೋಮಶೇಖರ್ ಅವರನ್ನು ಹುಣಸೂರು ಕ್ಷೇತ್ರದಿಂದ ಮತ್ತು ಕೃಷ್ಣನಾಯಕ ಅವರನ್ನು ಎಚ್.ಡಿ.ಕೋಟೆಯಲ್ಲಿ ಬಿಜೆಪಿ ಕಣಕ್ಕಿಳಿಸಿತು.

ಹೊಸ ಪ್ರಯೋಗದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ನಿರೀಕ್ಷೆ ಮೀರಿ ಪೈಪೋಟಿ ನೀಡಿದ್ದರಿಂದ ದಳ ಮತಗಳ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ, ಕಾಂಗ್ರೆಸ್ ವಿರುದ್ಧ ಸ್ವಂತ ಬಲದಿಂದ ಸ್ಪರ್ಧೆ ಮಾಡಲು ಜೆಡಿಎಸ್ ಈ ಸಲ ತಿಣುಕಾಡಿದೆ. ಕೆಲ ಕಡೆ ಸೋತಿದೆ. ನರಸಿಂಹರಾಜ, ಕೃಷ್ಣರಾಜ, ಚಾಮರಾಜ, ವರುಣ, ಎಚ್.ಡಿ.ಕೋಟೆಯಲ್ಲಿ ಪ್ರಬಲ ಪೈಪೋಟಿ ನೀಡಲು ಜೆಡಿಎಸ್‌ಗೆ ಸಾಧ್ಯವಾಗದೆ 3ನೇ ಸ್ಥಾನ ಪಡೆದುಕೊಂಡಿದೆ. ಈ ಕ್ಷೇತ್ರಗಳಲ್ಲಿ ಮತ ಗಳಿಕೆ 10 ಸಾವಿರದ ಗಡಿಯೂ ದಾಟಿಲ್ಲ. ಪಿರಿಯಾಪಟ್ಟಣ, ಕೆ.ಆರ್.ನಗರ ಕ್ಷೇತ್ರಗಳಲ್ಲಿ ಜಯದತ್ತ ಸುಳಿಯಲು ಸಾಧ್ಯವಾಗಿಲ್ಲ. ಕ್ಷೇತ್ರಗಳ ಮತ ಎಣಿಕೆಯಲ್ಲಿ ಒಂದು ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿಲ್ಲ. ನಂಜನಗೂಡು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನೇ ಹಾಕಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net