

ಬೆಳಗಾವಿ: ಬೇಸಿಗೆ ಕಾಲದಲ್ಲಿ ಜಿಲ್ಲೆಯ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದ್ದರಿಂದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೇಸಿಗೆ ಕಾಲವನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಮುಂದಿನ 42 ವಾರಗಳ ಕಾಲ ಅಗತ್ಯವಿರುವ ಮೇವಿದೆ ಎಂದರು.
ಹೊಸ ಡಿಸಿ ಕಚೇರಿ ನಿರ್ಮಾಣ: ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ನಿರ್ಮಾಣಕ್ಕೆ ಎರಡು ಕಡೆ ಸ್ಥಳ ಪರಿಶೀಲಿಸಲಾಗಿತ್ತು. ಆದರೆ ಅವು ನಗರದಿಂದ ದೂರ ಇರುವುದರಿಂದ ಜನರಿಗೆ ಅನನುಕೂಲ ಆಗಲಿದೆ. ಆದ್ದರಿಂದ ಈಗಿರುವ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ. ಈಗಿರುವ ಜಿಲ್ಲಾಧಿಕಾರಿ ಕಚೇರಿಯನ್ನು ನವೀಕರಿಸಲಾಗುವುದು. ಜತೆಗೆ ಹೊಸ ಕೊಠಡಿಗಳನ್ನು ನಿರ್ಮಿಸಲಾಗುವುದು. ನೂತನ ಕಟ್ಟಡ ನಿರ್ಮಾಣದ ಬಳಿಕ ಬೇರೆ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.
ಪತ್ರಕರ್ತರ ಭವನಕ್ಕೆ 10 ಕೋಟಿ ರೂ.: ಬೆಳಗಾವಿಯಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿ, ಶಂಕು ಸ್ಥಾಪನೆ ಮಾಡಲಾಗಿದೆ. ಅಲ್ಲದೇ ಈಗಾಗಲೇ ಕಟ್ಟಡದ ನೀಲಿನಕ್ಷೆ ಸಿದ್ಧಪಡಿಸಲಾಗಿದ್ದು. 10 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಶೀಘ್ರ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.