

ವಿರಾಜಪೇಟೆ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕ ಎ.ಎಸ್.ಪೊನ್ನಣ್ಣ ಖಡಕ್ ಸೂಚನೆ
ನೀಡಿದರು.
ಪಟ್ಟಣದ ಸೆರೆನೆಟಿ ಹಾಲ್‌ನಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮತದಾರರು ಹಾಗೂ ಕಾರ್ಯಕರ್ತರಿಗೆ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ಚುನಾವಣಾ ಸಮಯದಿಂದಲೂ ನನ್ನ ವಿರುದ್ಧ ವೈಯಕ್ತಿಕ ತೇಜೋವಧೆ, ಸುಳ್ಳು ಸುದ್ದಿ ಹರಡಲಾಗುತ್ತಿದೆ. ಮತದಾರರಿಗೆ ನಾನು ಗೆದ್ದರೆ ಸ್ವಚ್ಛ ಆಡಳಿತ ನೀಡುತ್ತೇನೆ ಎಂದು ಭರವಸೆ ಕೊಟ್ಟಿದ್ದೆ. ಆ ಮಾತಿನಂತೆ ಈ ಸಭೆಯ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ನೀಡುತ್ತೇನೆ. ಈ ಕ್ಷಣದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ದ್ವೇಷ ಹರಡುವಿಕೆ, ಅಪಪ್ರಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ. ಇಲ್ಲ ಜಿಲ್ಲೆಯಿಂದ ಹೊರನಡೆಯಲು ಸಿದ್ಧ್ದರಾಗಿ ಎಂದರು.
ಯಾವ ಕಾರ್ಯಕರ್ತರು ಕೂಡ ಭ್ರಷ್ಟ ಅಧಿಕಾರಿಗಳನ್ನು ನನ್ನ ಬಳಿ ಕರೆದುಕೊಂಡು ಬರಬೇಡಿ. ಜಿಲ್ಲೆಯಲ್ಲಿ ಭ್ರಷಾಚಾರ ಮುಕ್ತ ಆಡಳಿತ ನಡೆಯಬೇಕು. ನಿಮ್ಮಿಂದ ಗೆದ್ದು ಬಂದವನು ನಾನು. ಮಾತಿಗೆ ತಕ್ಕ ಹಾಗೇ ನಡೆಯಬೇಕಾದರೆ ನೀವೆಲ್ಲರೂ ನನ್ನೊಡನೆ ಹೆಜ್ಜೆ ಹಾಕಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಚುನಾವಣಾ ಸಮಯದಲ್ಲಿ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ನನ್ನ ನಮನಗಳನ್ನು ತಿಳಿಸುತ್ತೇನೆ. ಮಾಜಿ ಸಂಸದ ಧ್ರುವನಾರಾಯಣ ಸೇರಿದಂತೆ ನನ್ನ ಈ ರಾಜಕೀಯ ಪಯಣದಲ್ಲಿ ರಾಷ್ಟ್ರ ಮಟ್ಟದ ವರಿಷ್ಠರಿಂದ ಹಿಡಿದು ರಾಜ್ಯದ ವರಿಷ್ಠರವರೆಗೂ ಅನೇಕರು ಅತ್ಯಂತ ಪ್ರೀತಿ, ಗೌರವಾದರಗಳನ್ನು ಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ದನಾಗಿರುತ್ತೇನೆ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಕಾರ್ಡ್ ಬಗ್ಗೆ ಯಾವುದೇ ಗೊಂದಲ ಬೇಡ. ನಾನೊಬ್ಬ ಕಾನೂನು ವಿದ್ಯಾರ್ಥಿಯಾಗಿ, ಸಂವಿಧಾನವನ್ನು ಚೆನ್ನಾಗಿ ಅರಿತವನಾಗಿ ಸರ್ಕಾರ ಮಾಡಿರುವ ಗ್ಯಾರಂಟಿ ಯೋಜನೆಗಳು ಸಂವಿಧಾನಬದ್ಧವಾಗಿವೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಎಲ್ಲರ ಜಪವು ಒಂದೇ ಆಗಿತ್ತು. ಅದು ಕಾಂಗ್ರೆಸ್ ಗೆಲ್ಲಬೇಕು ಎನ್ನುವುದು. ಈ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಶ್ರಮಿಸಿದ ಕಾರಣ ಗೆಲುವು ಒಲಿಯಿತು. ಮುಂಬರುವ ಸ್ಥಳೀಯ ಆಡಳಿತಗಳ ಚುನಾವಣೆಗೂ ಇದೇ ಸೂತ್ರ ಅನುಸರಿಸಿ ಗೆಲುವು ಪಡೆಯುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ ಮಾತನಾಡಿದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಕಾಂಗ್ರೆಸ್ ಪ್ರಮುಖರಾದ ನರೇಂದ್ರನಾಥ್ ಕಾಮತ್, ಉಸ್ಮಾನ್, ಮಾದಂಡ ತಿಮ್ಮಯ್ಯ, ರಫೀಕ್, ಪೊನ್ನಕ್ಕಿ, ಆರ್.ಕೆ ಅಬ್ದುಲ್ ಸಲಾಂ ಇತರರು ಇದ್ದರು.