

ಬೆಂಗಳೂರು ಗ್ರಾಮಾಂತರ: ಕರೊನಾ ಎರಡನೇ ಅಲೆ ಆರ್ಭಟ ತಗ್ಗಿರುವ ನಡುವೆಯೇ ವರಮಹಾಲಕ್ಷ್ಮೀ ಹಬ್ಬ ಆಚರಣೆಗೆ ಜನತೆ ಸಂಭ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಹಬ್ಬಕ್ಕೆ ಎರಡು ದಿನದ ಮೊದಲೇ ವಿವಿಧ ಮಾರುಕಟ್ಟೆಗಳಲ್ಲಿ ಹೂವು ಹಣ್ಣು ಖರೀದಿ ಭರಾಟೆ ಕಂಡುಬರುತ್ತಿದ್ದು, ಕಳೆದೆರಡು ವರ್ಷದಿಂದ ಕರೊನಾ ಹೊಡೆತಕ್ಕೆ ಕಂಗಾಲಾಗಿದ್ದ ವ್ಯಾಪಾರಿಗಳ ಮುಖದಲ್ಲೂ ಸಂತಸ ಕಂಡುಬರುತ್ತಿದೆ.
ಶ್ರಾವಣ ಮಾಸದಿಂದ ಸಾಲುಸಾಲು ಹಬ್ಬಗಳು ಆರಂಭವಾಗಲಿದ್ದು, ವರಮಹಾಲಕ್ಷ್ಮೀ ಹಬ್ಬ ಜಿಲ್ಲೆಯಲ್ಲಿ ಕಳೆಗಟ್ಟಿದೆ. ಶ್ರಾವಣ ಮಾಸದ ಮೂರನೇ ಶುಕ್ರವಾರ ಮನೆಗಳಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಪೂಜಿಸಲು ಮಹಿಳೆಯರು ಕಾತರರಾಗಿದ್ದಾರೆ.
ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸಿಕೊಂಡು ಬರುತ್ತಿದ್ದಾರೆ. ಕಳೆದೆರಡು ವರ್ಷದಿಂದ ಸರಳ ಆಚರಣೆಗಷ್ಟೇ ಹಬ್ಬ ಸೀಮಿತವಾಗಿತ್ತು.
ಮೂರ್ತಿ ಖರೀದಿ ಜೋರು: ತರಹೇವಾರಿ ವರಮಹಾಲಕ್ಷ್ಮೀ ಮೂರ್ತಿಗಳ ಖರೀದಿ ಜೋರಾಗಿದೆ. ದೇಗುಲ ಪ್ರವೇಶ ನಿಷೇಧವಿರುವುದರಿಂದ ಮನೆಗಳಲ್ಲಿ ಲಕ್ಷ್ಮೀಯನ್ನು ಪೂಜಿಸಲು ಹೆಚ್ಚಿನ ಮಂದಿ ಉತ್ಸುಕರಾಗಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ವೇಳೆ ಸಹಜವಾಗಿ ತಾವರೆ ಹೂವಿಗೆ ಬೇಡಿಕೆ ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿ ಜೋಡಿ ಕಮಲದ ಬೆಲೆ ಕನಿಷ್ಠ 40ರೂ.ಗಳಿಂದ 60ರೂ.ಗಳಿಗೆ ಏರಿಕೆಯಾಗಿದೆ. ಬಾಳೆ ಕಂದಿನ ಬೆಲೆ 50 ರೂ. ಆಗಿದೆ.
ನೈವೇದ್ಯ ಪದಾರ್ಥಗಳಿಗೆ ಡಿಮಾಂಡ್: ದೇವಿಗೆ ನೈವೇದ್ಯ ರೂಪದಲ್ಲಿ ಕೊಬ್ಬರಿ ಮಿಠಾಯಿ, ರವೆಉಂಡೆ, ಚಕ್ಕುಲಿ, ನಿಪ್ಪಟ್ಟು, ಸಿಹಿಪೂರಿ ಸೇರಿ ಇನ್ನಿತರ ಸಿಹಿ ತಿನಿಸು ಇಡುವುದರಿಂದ ನಗರ ಪ್ರದೇಶಗಳ ಅಂಗಡಿಗಳಲ್ಲಿ ಆರ್ಡರ್‌ಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಅವರವರ ಶಕ್ತಿಗನುಸಾರ ನಡೆಯುವ ಪೂಜೆಗಳಿಗೆ ಅನುಸಾರವಾಗಿ ಸಿಹಿತಿಂಡಿಗಳ ತಯಾರಿಯೂ ಜೋರಾಗಿದೆ.
ವರಮಹಾಲಕ್ಷ್ಮೀ ಹಬ್ಬ ಹೆಸರೇ ಸೂಚಿಸುವಂತೆ ಇದು ಲಕ್ಷ್ಮೀಯನ್ನು ಆರಾಧಿಸುವ ದಿನ. ಹಲವಾರು ನಾಮಗಳಿಂದ ಕರೆಯಲ್ಪಡುವ ಲಕ್ಷ್ಮೀಯನ್ನು ಶ್ರಾವಣ ಮಾಸದಲ್ಲಿ ಭಕ್ತಿಯಿಂದ ವ್ರತದಂತೆ ಆಚರಿಸಿ ಪೂಜಿಸುವುದರಿಂದ ಲಕ್ಷ್ಮೀಯು ಸಂತೃಪ್ತಳಾಗಿ ಭಕ್ತರ ಬಯಕೆ ಈಡೇರಿಸುತ್ತಾಳೆ ಮತ್ತು ಭಕ್ತರಿಗೆ ಸಂಪತ್ತನ್ನು ಕರುಣಿಸುತ್ತಾಳೆ ಎಂಬುದು ನಂಬಿಕೆ.